ಸ್ಕೈಲ್ಯಾಬ್‌ ಗೆ 50ರ ಸಂಭ್ರಮ

Update: 2023-06-10 19:30 GMT

 ಸ್ಕೈಲ್ಯಾಬ್‌ನ ಸಿಬ್ಬಂದಿ 700 ಗಂಟೆಗಳಿಗೂ ಹೆಚ್ಚು ಕಾಲ ಸೂರ್ಯನನ್ನು ವೀಕ್ಷಿಸಲು ಸಮಯವನ್ನು ಕಳೆದರು. 1,75,000 ಕ್ಕೂ ಹೆಚ್ಚು ಸೌರ ಚಿತ್ರಗಳನ್ನು ಭೂಮಿಗೆ ರವಾನಿಸಿದರು. ದೀರ್ಘ ಕಾಲದವರೆಗೆ ಬಾಹ್ಯಾಕಾಶದಲ್ಲಿ ವಾಸಿಸುವ ಜೈವಿಕ ಪರಿಣಾಮಗಳ ಬಗ್ಗೆ ಅವರು ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ. ''ಮನುಷ್ಯನ ದೇಹವು ಬಾಹ್ಯಾಕಾಶದಲ್ಲಿ ಬಹಳ ಸಮಯದವರೆಗೆ ತೂಕವಿಲ್ಲದೆ ಉಳಿಯುತ್ತದೆ ಎಂದು ನಾವು ಬಹುಮಟ್ಟಿಗೆ ಸಾಬೀತುಪಡಿಸಿರುವುದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ'' ಎಂದು ಜೆರಾಲ್ಡ್ ಪಿ. ಕಾರ್ ಹೇಳಿರುವುದು ಮುಂದಿನ ಬಾಹ್ಯಾಕಾಶ ಪ್ರವಾಸಕ್ಕೆ ನಾಂದಿಯಾಗಿತ್ತು.


ನನಗೆ ಇನ್ನೂ ಆ ರೇಡಿಯೊ ಸುದ್ದಿ ನೆನಪಿದೆ. ಆಗ ನನಗೆ ಐದು ವರ್ಷ. ರೇಡಿಯೊದಲ್ಲಿ ಬಿತ್ತರವಾಗುತ್ತಿದ್ದ ಆ ಸುದ್ದಿ ನಮಗೆಲ್ಲಾ ಭಯ ತರಿಸಿತ್ತು. ಸ್ಕೈಲ್ಯಾಬ್ ಎನ್ನುವ ಕೃತಕ ಉಪಗ್ರಹವೊಂದು ಭೂಮಿಯ ಅನಿರ್ದಿಷ್ಟ ಸ್ಥಳದಲ್ಲಿ ಬೀಳಲಿದೆ ಎಂಬುದೇ ಆ ಸುದ್ದಿಯಾಗಿತ್ತು. ಅಯ್ಯೋ! ಭುಮಿಯ ಮೇಲೆ ಬಿದ್ದರೆ ನಮ್ಮ ಗತಿಯೇನು? ಬಿದ್ದ ಸ್ಥಳದಲ್ಲಿನ ಜೀವಿಗಳೆಲ್ಲ ನಾಶವಾಗುತ್ತವೆ ಎಂದು ರೇಡಿಯೊದಲ್ಲಿ ಹೇಳಲಾಗುತ್ತಿತ್ತು. ಒಂದು ವೇಳೆ ಈಗಿನಂತೆ ದೃಶ್ಯ ಮಾಧ್ಯಮಗಳು ಇದ್ದಿದ್ದರೆ ಬಹುಶಃ ಸಾವಿರಾರು ಜನರು ಭಯದಲ್ಲೇ ಸಾವನ್ನಪ್ಪುತ್ತಿದ್ದರು. ಇಡೀ ವಾರ ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲೂ ಇದೇ ಸುದ್ದಿ ಪ್ರಸಾರವಾಗುತ್ತಿತ್ತು. ಸ್ಕೈಲ್ಯಾಬ್ ಭೂಮಿಗೆ ಬಿದ್ದರೆ ಏನಾಗುತ್ತದೆ? ಎಲ್ಲಿ ಬೀಳುತ್ತದೆ? ಹೇಗೆ ಬೀಳುತ್ತದೆ? ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಜನರಲ್ಲಿ ಭಯ ಉಂಟು ಮಾಡುತ್ತಿದ್ದವು. ಆದರೆ ರೇಡಿಯೊದಲ್ಲಿ ಕೇವಲ ಒಂದು ವಾಕ್ಯದ ಸುದ್ದಿ ಪ್ರಸಾರವಾಗಿತ್ತು. ಅದೇ ಜನರಲ್ಲಿ ಭಯ ಉಂಟು ಮಾಡಿತ್ತು. ಸ್ಕೈಲ್ಯಾಬ್ ಭೂಮಿಗೆ ಅಪ್ಪಳಿಸಲಿದೆ ಎಂಬ ಸುದ್ದಿ ಅನೇಕ ಅವಾಂತರಗಳನ್ನು ಸೃಷ್ಟಿಸಿತ್ತು. ಸ್ಕೈಲ್ಯಾಬ್ ಆಂಧ್ರಪ್ರದೇಶದ (ಈಗಿನ ತೆಲಂಗಾಣದ) ಕರೀಂನಗರ ಜಿಲ್ಲೆಯ ಮೇಲೆ ಬೀಳಲಿದೆ ಎಂದು ಒಂದೆರಡು ದಿನಗಳ ನಂತರ ನಿರ್ದಿಷ್ಟ ಪಡಿಸಲಾಯಿತು. ಆಗ ಅಲ್ಲಿನ ಜನರು ಭಯಗೊಂಡು ತಮ್ಮ ಜಾನುವಾರುಗಳನ್ನು ಪಕ್ಕದ ಜಿಲ್ಲೆಯ ಜನರಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿದರು. ಬಹುತೇಕರು ಜಮೀನು ಮಾರಲೂ ಮುಂದಾಗಿದ್ದರು. ಆದರೆ ಕೊಳ್ಳುವವರು ಯಾರೂ ಇರಲಿಲ್ಲ. ಕೆಲ ಜನರು ಬೇರೆ ಕಡೆಗೆ ಸ್ಥಳಾಂತರಗೊಂಡರು. ಕೆಲ ಶ್ರೀಮಂತರು ತಮ್ಮಲ್ಲಿದ್ದ ಹಣ ಹಾಗೂ ಒಡವೆಗಳನ್ನು ಬಾವಿ ಅಥವಾ ನೆಲದಲ್ಲಿ ಬಚ್ಚಿಟ್ಟು ತೀರ್ಥಯಾತ್ರೆಗೆ ಹೋದರು. ಒಟ್ಟಾರೆ ಸ್ಕೈಲ್ಯಾಬ್ ಭೂಮಿಗೆ ಅಪ್ಪಳಿಸುವುದು ಎಂಬ ಸುದ್ದಿ ಕೇಳಿದಾಗಿನಿಂದ ಜನರು ಸಂಪೂರ್ಣವಾಗಿ ಭಯಭೀತರಾಗಿದ್ದರು.

ಏನಿದು ಸ್ಕೈಲ್ಯಾಬ್?

ಸ್ಕೈಲ್ಯಾಬ್ ಅಮೆರಿಕದ ನಾಸಾದಿಂದ ಉಡಾವಣೆಗೊಂಡ ಮತ್ತು ನಿರ್ವಹಿಸಲ್ಪಟ್ಟ ಮೊದಲ ಬಾಹ್ಯಾಕಾಶ ನಿಲ್ದಾಣವಾಗಿದೆ. ಮೇ 14, 1973ರಂದು ಕಕ್ಷೆಗೆ ಸೇರಿಸಲಾಗಿತ್ತು. ಸುಮಾರು ಐದು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿದ್ದು ಜುಲೈ 11, 1979ರಂದು ಭೂಮಿಗೆ ಮರಳುವ ಮೂಲಕ ನಾಶವಾಯಿತು. ಅನೇಕ ಮಹತ್ವದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಮತ್ತು ಬಾಹ್ಯಾಕಾಶ ಸಂಶೋಧನೆಗೆ ವೇದಿಕೆಯನ್ನು ಒದಗಿಸಲು ಸ್ಕೈಲ್ಯಾಬ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೂವರು ಮಾನವಸಹಿತ ಕಾರ್ಯಾಚರಣೆಗಳನ್ನು ಆಯೋಜಿಸಿತ್ತು. ಈ ಸಮಯದಲ್ಲಿ ಗಗನಯಾತ್ರಿಗಳು ವಿವಿಧ ವೈಜ್ಞಾನಿಕ ಅಧ್ಯಯನಗಳು ಮತ್ತು ವೀಕ್ಷಣೆಗಳನ್ನು ನಡೆಸಿದರು. ಸ್ಕೈಲ್ಯಾಬ್ ಸೌರ ಭೌತಶಾಸ್ತ್ರ, ಭೂಮಿಯ ವೀಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಮಾನವ ಶರೀರಶಾಸ್ತ್ರದಂತಹ ಕ್ಷೇತ್ರಗಳಿಗೆ ಅಮೂಲ್ಯವಾದ ದತ್ತಾಂಶಗಳನ್ನು ನೀಡಿದೆ. ಸ್ಯಾಲ್ಯೂಟ್-1ರಿಂದ ಸ್ಫೂರ್ತಿ ಪಡೆದ ಅಮೆರಿಕ 1973ರಲ್ಲಿ ಸ್ಕೈಲ್ಯಾಬ್ ಮಿಷನ್ ಅನ್ನು ಉಡ್ಡಯನ ಮಾಡಿತ್ತು. ಸ್ಕೈಲ್ಯಾಬ್ 30.2 ಮೀಟರ್ (99 ಅಡಿ) ಉದ್ದ ಮತ್ತು 6.7 ಮೀಟರ್ (22 ಅಡಿ) ವ್ಯಾಸವನ್ನು ಹೊಂದಿತ್ತು. ಸುಮಾರು 75,000 ಕೆ.ಜಿ. ದ್ರವ್ಯರಾಶಿಯನ್ನು ಹೊಂದಿತ್ತು. ಸೋವಿಯತ್ ಒಕ್ಕೂಟದ ಮೊದಲ ತಲೆಮಾರಿನ ಸ್ಯಾಲ್ಯೂಟ್ ಸ್ಟೇಷನ್‌ನಂತೆ ಉಪಭೋಗ್ಯ ಸಂಪನ್ಮೂಲಗಳಿಂದ ಸೀಮಿತವಾಗಿದ್ದರೂ, ಸ್ಕೈಲ್ಯಾಬ್ ಹೆಚ್ಚು ಸ್ಥಳಾವಕಾಶ ಮತ್ತು ಹೆಚ್ಚಿನ ಸಂಶೋಧನೆಗೆ ಸಮರ್ಥವಾಗಿತ್ತು. ಇದರ ಮುಖ್ಯ ವೈಜ್ಞಾನಿಕ ಸಾಧನವಾದ ಅಪೊಲೊ ಟೆಲಿಸ್ಕೋಪ್ ಮೌಂಟ್, ಗೋಚರ ಬೆಳಕಿನಿಂದ ಎಕ್ಸ್-ಕಿರಣಗಳ ಮೂಲಕ ವಿದ್ಯುತ್ಕಾಂತೀಯ ವರ್ಣಪಟಲದ ವಿಶಾಲ ವ್ಯಾಪ್ತಿಯಲ್ಲಿ ಸೂರ್ಯನನ್ನು ವೀಕ್ಷಿಸಲು ಹಲವಾರು ದೂರದರ್ಶಕಗಳು ಮತ್ತು ಇತರ ಸಾಧನಗಳನ್ನು ಸಂಯೋಜಿಸಿತ್ತು. ಸ್ಕೈಲ್ಯಾಬ್‌ನ ಆರೋಹಣದ ಸಮಯದಲ್ಲಿಯೇ ಒಂದಿಷ್ಟು ತೊಂದರೆಗಳು ಕಾಣಿಸಿಕೊಂಡವು.

ಆರೋಹಣದ ಸಮಯದಲ್ಲಿಯೇ ಥರ್ಮಲ್ ಮೆಟಿರೊಯ್ಡಾ ಶೀಲ್ಡ್ ಕಳಚಿಕೊಂಡಿತ್ತು. ಇದು ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸುವ ಲ್ಯಾಟರಲ್ ಸೌರ ಶಕ್ತಿಯ ಸರಣಿಗಳಲ್ಲಿ ಒಂದನ್ನು ಕಳೆದುಕೊಳ್ಳಲು ಕಾರಣವಾಗಿತ್ತು ಮತ್ತು ಇನ್ನೊಂದು ಸಂಪೂರ್ಣ ವಿಸ್ತರಣೆಯನ್ನು ತಡೆಯಿತು. ಮೊದಲ ಮೂವರು ಮಾನವ ಸಿಬ್ಬಂದಿ ತಮ್ಮ 28 ದಿನದ ಕಾರ್ಯಾಚರಣೆಯಲ್ಲಿ ನಿಲ್ದಾಣದಲ್ಲಿ ಗಂಭೀರವಾದ ಅಧಿಕ ಬಿಸಿಯಾಗುವುದನ್ನು ತಡೆಗಟ್ಟಲು ಸುಧಾರಿತ ಪ್ಯಾರಾಸೋಲ್ ಸೂರ್ಯ ವಿಕಿರಣ ತಡೆಯನ್ನು ನಿಯೋಜಿಸಿದರು. ನಂತರ 59 ಮತ್ತು 84 ದಿನಗಳ ಅವಧಿಯ ಕಾರ್ಯಾಚರಣೆಗಳಿಗಾಗಿ ಸ್ಕೈಲ್ಯಾಬ್ ಇಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ಆಯೋಜಿಸಿತು. ಸ್ಕೈಲ್ಯಾಬ್ ಅನ್ನು ಉನ್ನತ ಕಕ್ಷೆಗೆ ಉತ್ತೇಜಿಸುವ ಮೊದಲ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗೆ ಸೌರ ಚಟುವಟಿಕೆಗಳು ಅಡ್ಡಿಯಾಗಿದ್ದರಿಂದ ಸ್ಕೈಲ್ಯಾಬ್ ಅವನತಿಯತ್ತ ಸಾಗಿತು. ಅಂತಿಮವಾಗಿ ಜುಲೈ 11 ಮತ್ತು 12, 1979ರಲ್ಲಿ ಆಗ್ನೇಯ ಹಿಂದೂ ಮಹಾಸಾಗರದಲ್ಲಿ ಅವಸಾನವಾಯಿತು.

ಸ್ಕೈಲ್ಯಾಬ್‌ನ ಗುರಿಗಳು

ಅಮೆರಿಕದ ಮೊದಲ ಪ್ರಾಯೋಗಿಕ ಬಾಹ್ಯಾಕಾಶ ನಿಲ್ದಾಣವಾಗಿದ್ದ ಸ್ಕೈಲ್ಯಾಬ್ ಅನ್ನು ದೀರ್ಘಕಾಲದವರೆಗೆ ವಿನ್ಯಾಸಗೊಳಿಸಲಾಗಿತ್ತು. ಎರಡು ಪ್ರಮುಖ ಉದ್ದೇಶಗಳಿಗಾಗಿ ಸ್ಕೈಲ್ಯಾಬ್ ಉಡಾವಣೆ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ಮಾನವರು ದೀರ್ಘಕಾಲ ಬದುಕಬಲ್ಲರು ಎಂಬುದನ್ನು ಸಾಬೀತುಪಡಿಸುವುದು ಮತ್ತು ಸೌರ ಖಗೋಳಶಾಸ್ತ್ರದ ನಮ್ಮ ಜ್ಞಾನವನ್ನು ಭೂಮಿ ಆಧಾರಿತ ವೀಕ್ಷಣೆಗಳನ್ನು ಮೀರಿ ವಿಸ್ತರಿಸುವುದು ಆಗಿತ್ತು. ಆರಂಭಿಕ ಯಾಂತ್ರಿಕ ತೊಂದರೆಗಳ ಹೊರತಾಗಿಯೂ ಕಾರ್ಯಕ್ರಮವು ಎಲ್ಲಾ ರೀತಿಯಲ್ಲೂ ಯಶಸ್ವಿಯಾಗಿದೆ. ಮೂರು ಹಂತದಲ್ಲಿ ಗಗನಯಾತ್ರಿಗಳು ಸ್ಕೈಲ್ಯಾಬ್‌ಗೆ ಭೇಟಿ ನೀಡಿದರು ಮತ್ತು ಅಪೊಲೊ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿದರು.

ವಿವಿಧ ಗಗನಯಾತ್ರಿಗಳು ಒಟ್ಟು 171 ದಿನಗಳು ಮತ್ತು 13 ಗಂಟೆಗಳ ಕಾಲ ಸ್ಕೈಲ್ಯಾಬ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದು ತನ್ನ ಕಾರ್ಯಾವಧಿಯಲ್ಲಿ 2,476ಕ್ಕೂ ಹೆಚ್ಚು ಬಾರಿ ಭೂಮಿಯನ್ನು ಸುತ್ತು ಹಾಕಿದೆ. 300ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಯೋಗಗಳನ್ನು ನಡೆಸಲಾಗಿದೆ. ಇದರಲ್ಲಿ ಮಾನವನ ಶೂನ್ಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವ ವೈದ್ಯಕೀಯ ಪ್ರಯೋಗಗಳು, ಸೌರ ಅವಲೋಕನಗಳು ಮತ್ತು ವಿವರವಾದ ಭೂಮಿಯ ಸಂಪನ್ಮೂಲಗಳ ಪ್ರಯೋಗಗಳು ಸೇರಿವೆ. ಸ್ಕೈಲ್ಯಾಬ್ ಮಿಷನ್ ಪ್ರತಿಯೊಬ್ಬ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆದ ಸಮಯವನ್ನು ದಾಖಲಿಸಲಾಗಿದೆ.

ಲೈಫ್ ಆನ್ ಸ್ಕೈಲ್ಯಾಬ್

ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗಳ ಕಾರ್ಯ ಸಾಧ್ಯತೆಯನ್ನು ಅಧ್ಯಯನ ಮಾಡುವುದು ಸ್ಕೈಲ್ಯಾಬ್‌ನ ಪ್ರಮುಖ ಕಾರ್ಯಗಳಲ್ಲಿ ಒಂದಾಗಿತ್ತು. ಗಗನಯಾತ್ರಿಗಳು ಭೂಮಿಯ ಮೇಲೆ ತಮ್ಮ ದೈನಂದಿನ ಜೀವನವನ್ನು ನಡೆಸುತ್ತಿರುವಂತೆಯೇ ಭೂಕಕ್ಷೆಯಲ್ಲಿ ಜೀವನ ನಡೆಸಿದ್ದರು. ಬಾಹ್ಯಾಕಾಶ ನಿಲ್ದಾಣದಲ್ಲಿನ ಎಲ್ಲಾ ವೈಜ್ಞಾನಿಕ ಪ್ರಯೋಗಗಳನ್ನೂ, ಚಟುವಟಿಕೆಗಳನ್ನೂ ಅಲ್ಲಿನ ಕ್ಯಾಮರಾಗಳು ಸೆರೆಹಿಡಿದಿದ್ದವು. ಭೂಮಿಯ ತಿರುಗುವಿಕೆಯ ವೇಗ (ಗಂಟೆಗೆ 1,600ಕಿ.ಮೀ.)ಕ್ಕೆ ಅನುಗುಣವಾಗಿ ತಿರುಗುತ್ತಾ, ಭೂಕಕ್ಷೆಯಲ್ಲಿ ನೆಲೆನಿಂತು ದೈನಂದಿನ ಚಟುವಟಿಕೆಗಳನ್ನು ನಡೆಸುವುದು ಒಂದು ಶ್ರೇಷ್ಠ ಅನುಭವವಾಗಿತ್ತು. ಗಗನಯಾನಿಗಳು ಸ್ಕೈಲ್ಯಾಬ್‌ನಲ್ಲಿ ಬೆಳಗ್ಗೆ 6 ಗಂಟೆಯಿಂದ (ಹೂಸ್ಟನ್ ಸಮಯ) ರಾತ್ರಿ 10 ಗಂಟೆಯವರೆಗೂ ತಮ್ಮ ಪ್ರಯೋಗದಲ್ಲಿ ನಿರತರಾಗಿದ್ದರು. ಟೆಲಿಟೈಪ್ ಯಂತ್ರದ ಸಹಾಯದಿಂದ ಕಂಟ್ರೋಲ್ ರೂಮಿನಿಂದ ಆದೇಶಗಳನ್ನು ಪಡೆಯುವ ಹಾಗೂ ಸಂದೇಶಗಳನ್ನು ಕಳಿಸುವ ಕೆಲಸ ನಿರಾತಂಕವಾಗಿ ಸಾಗಿತ್ತು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಮತ್ತು ವಿಶ್ರಾಂತಿ ಪಡೆಯುವ ಕೆಲಸವೂ ನಡೆದಿತ್ತು. ಅಲ್ಲದೆ ಆಗಾಗ ಕೇಳಿಬರುವ ವಿನೋದದ ಮಾತುಗಳೂ ಅಲ್ಲಿದ್ದವು.

ಸ್ಕೈಲ್ಯಾಬ್ ಹೊತ್ತು ತಂದ ಮಾಹಿತಿಗಳು
 ಸ್ಕೈಲ್ಯಾಬ್‌ನ ಸಿಬ್ಬಂದಿ 700 ಗಂಟೆಗಳಿಗೂ ಹೆಚ್ಚು ಕಾಲ ಸೂರ್ಯನನ್ನು ವೀಕ್ಷಿಸಲು ಸಮಯವನ್ನು ಕಳೆದರು. 1,75,000 ಕ್ಕೂ ಹೆಚ್ಚು ಸೌರ ಚಿತ್ರಗಳನ್ನು ಭೂಮಿಗೆ ರವಾನಿಸಿದರು. ದೀರ್ಘ ಕಾಲದವರೆಗೆ ಬಾಹ್ಯಾಕಾಶದಲ್ಲಿ ವಾಸಿಸುವ ಜೈವಿಕ ಪರಿಣಾಮಗಳ ಬಗ್ಗೆ ಅವರು ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ. ''ಮನುಷ್ಯನ ದೇಹವು ಬಾಹ್ಯಾಕಾಶದಲ್ಲಿ ಬಹಳ ಸಮಯದವರೆಗೆ ತೂಕವಿಲ್ಲದೆ ಉಳಿಯುತ್ತದೆ ಎಂದು ನಾವು ಬಹುಮಟ್ಟಿಗೆ ಸಾಬೀತುಪಡಿಸಿರುವುದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ'' ಎಂದು ಜೆರಾಲ್ಡ್ ಪಿ. ಕಾರ್ ಹೇಳಿರುವುದು ಮುಂದಿನ ಬಾಹ್ಯಾಕಾಶ ಪ್ರವಾಸಕ್ಕೆ ನಾಂದಿಯಾಗಿತ್ತು.

ಅವಸಾನದ ಕೊನೆಯ ಕ್ಷಣಗಳು

ಸ್ಕೈಲ್ಯಾಬ್ 8ರಿಂದ 10 ವರ್ಷಗಳ ಕಾಲ ಕಕ್ಷೆಯಲ್ಲಿ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 1977ರ ಶರತ್ಕಾಲದಲ್ಲಿ ಸೌರ ಚಟುವಟಿಕೆಯ ಪರಿಣಾಮವಾಗಿ ಸ್ಕೈಲ್ಯಾಬ್ ಇನ್ನು ಮುಂದೆ ಸ್ಥಿರವಾದ ವರ್ತನೆಯಲ್ಲಿಲ್ಲ ಎಂದು ನಿರ್ಧರಿಸಲಾಯಿತು. ಕೆಲವು ಮಹತ್ತರ ಪ್ರಯೋಗಗಳಿಗೆ ಕಾರಣವಾಗಿದ್ದ ಸ್ಕೈಲ್ಯಾಬ್ ದಿನೇ ದಿನೇ ಅವಸಾನದತ್ತ ಸಾಗಿತು. ಸ್ಕೈಲ್ಯಾಬ್ ಕಕ್ಷೆಯಿಂದ ವೇಗವಾಗಿ ಕೆಳಗಿಳಿಯುವುದನ್ನು ಗಮನಿಸಿದರು. ಮಾನವ ರಹಿತವಾದ ಖಾಲಿ ಸ್ಕೈಲ್ಯಾಬ್ ಬಾಹ್ಯಾಕಾಶ ನೌಕೆಯು ಜುಲೈ 11, 1979 ರಂದು ಭೂಮಿ ಕಡೆಗೆ ಮರಳಿತು. ಅದರ ಚಲನೆಯ ದಿಕ್ಕು ಮತ್ತು ವೇಗದ ಆಧಾರದ ಮೇಲೆ ಅದು ಆಂದ್ರಪ್ರದೇಶದ ಕರೀಂನಗರ ಜಿಲ್ಲೆಯಲ್ಲಿ ಬೀಳಬಹುದು ಎಂಬುದನ್ನು ತಿಳಿಸಿದರು. ಒಂದು ವೇಳೆ ಅದು ಅಲ್ಲಿ ಬಿದ್ದರೆ, ಅಲ್ಲಿನ ಜನಜೀವನದ ಮೇಲೆ ಆಗಬಹುದಾದ ಅನಾಹುತಗಳನ್ನು ಅರಿತರು. ಅದನ್ನು ಹಿಂದೂ ಮಹಾಸಾಗರಕ್ಕೆ ಬೀಳಿಸಲು ಅಗತ್ಯ ಕಾರ್ಯಗಳನ್ನು ಕೈಗೊಂಡರು. ಅದರ ಭಾಗವಾಗಿ ಖಗೋಳ ತಜ್ಞರು ಸ್ಕೈಲ್ಯಾಬ್ ಭೂಮಿಗೆ ಸಮೀಪಿಸುತ್ತಿದ್ದಂತೆ ಬೂಸ್ಟರ್ ರಾಕೆಟ್‌ಗಳನ್ನು ಹಾರಿಸಿದರು. ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಟ್ರೇಲಿಯದ ಜನನಿಬಿಡ ಪ್ರದೇಶದ ಮೇಲೆ ಅದರ ಅವಶೇಷಗಳು ಚೆಲ್ಲಾಪಿಲ್ಲಿಯಾದವು. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಲಿಲ್ಲ. ಹೀಗೆ ಮೊದಲ ಬಾಹ್ಯಾಕಾಶ ನಿಲ್ದಾಣ ಅವನತಿ ಹೊಂದಿತು. ಆದರೆ ಅದರ ಮುಂದುವರಿದ ಪ್ರಯೋಗಗಳು ನೂರಾರು ಬಾಹ್ಯಾಕಾಶ ಚಟುವಟಿಕೆಗಳಿಗೆ ಕಾರಣವಾಯಿತು. ಇಂದು ಅನ್ಯಗ್ರಹಕ್ಕೆ ಹೊರಟ ಮಾನವನ ಪ್ರಯತ್ನಗಳಿಗೆ ಸ್ಕೈಲ್ಯಾಬ್ ಮೂಲ ಪ್ರೇರಣೆ ಎಂದರೆ ತಪ್ಪಾಗಲಿಕ್ಕಿಲ್ಲ.

Similar News