ನಂಜುಗೇಡಿ ಮನಸ್ಸು

Update: 2023-06-10 19:30 GMT

ನಂಜು ಎಂದರೆ ವಿಷವೆಂದೂ ಮತ್ತು ಕೀತುಕೊಳ್ಳುವುದು ಅಥವಾ ಕೀವುಗಟ್ಟುವುದು ಎಂದೂ ಈ ವಿಷಯದ ಸಂದರ್ಭಕ್ಕೆ ತಿಳಿಯೋಣ. ಅಂದರೆ ಮನಸ್ಸು ಕೂಡಾ ವಿಷಮಯವಾಗುವುದು ಅಥವಾ ವಿಷಮಯವಾದ ಮನಸ್ಸಿರುವುದು. ಜೊತೆಗೆ ಅದು ಗುಣಪಡಿಸುವ ಬದಲು ವಿಷಯ ಮತ್ತು ಪ್ರಸಂಗಗಳನ್ನು ವ್ರಣಗೊಳಿಸುತ್ತಾ ಕೀತುಕೊಳ್ಳುವುದು. ಮನೋವಿಜ್ಞಾನದಲ್ಲಿ ವ್ಯಕ್ತಿಗಳ ಕೆಲವು ಗುಣ ಸ್ವಭಾವಗಳನ್ನು ನೇರವಾಗಿ ಬೊಟ್ಟು ಮಾಡಿ ಇವೆಲ್ಲಾ ನಂಜುಗೇಡಿ ವ್ಯಕ್ತಿತ್ವದ ಲಕ್ಷಣಗಳು ಎಂದು ಗುರುತಿಸಲಾಗುತ್ತದೆ. ನಂಜುಗೇಡಿತನದ ಫಲವೆಂದರೆ ಪರಸ್ಪರರ ಸಂಬಂಧ, ಕುಟುಂಬ ಮತ್ತು ಸಮಾಜದಲ್ಲಿ ಅಸಂತೋಷ ಮತ್ತು ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಒಬ್ಬ ವ್ಯಕ್ತಿಯ ಗುಣ ಮತ್ತು ಸ್ವಭಾವಗಳು ಆ ವ್ಯಕ್ತಿಯ ಆಲೋಚನೆ ಮತ್ತು ನಂಬಿಕೆಗಳಿಂದ ಉಂಟಾಗುತ್ತದೆ. ಅವು ಆ ವ್ಯಕ್ತಿಯ ಮಾತು, ವರ್ತನೆ ಮತ್ತು ಧೋರಣೆ ಅಥವಾ ಇತರರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಪ್ರಕಟವಾಗುತ್ತವೆ. ಅಂತಹ ಲಕ್ಷಣಗಳ ಜಾಡಿನಲ್ಲಿ ನಂಜುಗೇಡಿಗಳನ್ನು ನಾವು ನಮ್ಮ ಸುತ್ತಮುತ್ತ ಸುಲಭವಾಗಿ ಗುರುತಿಸಿಬಿಡಬಹುದು. ಆದರೆ ಅಂತಹ ನಂಜುಗೇಡಿ ನಾನೇ, ಅಥವಾ ನಂಜುಗೇಡಿತನ ನನ್ನಲ್ಲಿದೆ ಎಂದು ಒಪ್ಪಿಕೊಳ್ಳುವುದು ಇದೆಯಲ್ಲಾ, ಅದು ಮಹಾಕಷ್ಟ. ಅವಕ್ಕೆ ನಮ್ಮದೇ ಸಮರ್ಥನೆಗಳು, ಕಾರಣಗಳು, ವ್ಯಾಖ್ಯಾನಗಳು ಬೇಕಾದಷ್ಟಿರುತ್ತವೆ. ಅದೇನೇ ಇರಲಿ, ನಂಜುಗೇಡಿ ವ್ಯಕ್ತಿಗಳ ಪ್ರಮುಖವಾದ ಗುಣಲಕ್ಷಣಗಳನ್ನು ತಿಳಿದುಕೊಂಡೇಬಿಡೋಣ.

1. ದುರಹಂಕಾರ: 

ಯಾವುದೋ ತಮ್ಮಲ್ಲಿರುವ ವಿಷಯ ವಸ್ತುವಿನ ಆಧಾರವಾಗಿ ಅಹಂಕಾರದಿಂದ ವರ್ತಿಸುವುದು. ಹಣ, ಅಧಿಕಾರ, ರೂಪ, ವಿದ್ಯೆ, ಬಣ್ಣ, ತಿಳುವಳಿಕೆ, ವಸ್ತುಗಳು, ಬಲಿಷ್ಠ ದೇಹ, ಧೈರ್ಯ; ಹೀಗೆ ಯಾವುದೇ ಒಂದನ್ನು ಅಥವಾ ಎಲ್ಲವನ್ನೂ ತನ್ನದೆಂದು ಅಹಂಕಾರದಿಂದ ಇತರರನ್ನು ಕೀಳಾಗಿ ಕಾಣುವುದು. ಹಾಗೆಯೇ ತನಗಿರುವ ಬುದ್ಧಿ, ತಿಳುವಳಿಕೆಯನ್ನು ಎಲ್ಲರೂ ಒಪ್ಪಬೇಕು ಎಂದೂ ಹಟಮಾರಿತನದಿಂದ ವರ್ತಿಸುವುದು.

2. ನಾಟಕೀಯ ವರ್ತನೆಗಳು: 
ಎಲ್ಲರ ಗಮನ ಸೆಳೆಯಲು ಜೋರು ಮಾಡುವುದು, ಗಟ್ಟಿಯಾಗಿ ಅಥವಾ ಎತ್ತರದ ದನಿಯಲ್ಲಿ ಮಾತಾಡುವುದು. ಇತರರನ್ನು ಎಲ್ಲರ ಎದುರು ಬೈಯುವುದು. ‘‘ಅಷ್ಟು ಮಾತ್ರ ಗೊತ್ತಾಗಲ್ವಾ? ಹೊಟ್ಟೆಗೇನು ತಿನ್ನುತ್ತೀಯಾ? ಬುದ್ಧಿ ಇರುವವರು ಮಾಡುವ ಕೆಲಸವಾ ಇದು? ಯಾವನೋ ಅವನು ಇದನ್ನು ಮಾಡಿದ್ದು?’’ - ಈ ಬಗೆಯ ಮಾತುಗಳು ಅವರಿಗೆ ತುಂಬಾ ಸಾಮಾನ್ಯ.

3. ಮೋಡಿಕಾರರು: 
ತಮ್ಮ ಕೆಲಸ ಮಾಡಿಕೊಳ್ಳಲು ಹಲ್ಲು ಗಿಂಜುವುದು, ತಾವು ಇಷ್ಟಪಡಲಿ, ಪಡದಿರಲಿ, ತಮ್ಮ ಕೆಲಸವಾಗಲು ಅವರನ್ನು ಓಲೈಸುವುದು. ಅವರು ಹೇಳುವುದನ್ನೆಲ್ಲಾ ಸರಿ ಎನ್ನುವುದು. ಯಾರಿಂದ ಕೆಲಸ ಆಗಬೇಕೋ ಅವರೆಷ್ಟೇ ಕೀಳು ಕೆಲಸ ಮಾಡಿದರೂ ಅದೆಲ್ಲಾ ಸರಿ ಎನ್ನುವಂತೆಯೇ ಅವರ ಮುಂದೆ ಮಾತಾಡುವುದು. ತಮ್ಮ ನಸುಗುನ್ನಿತನದಿಂದ ಅವರನ್ನು ಮೋಡಿ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಯತ್ನಿಸುವವರು.

4. ಸೋಮಾರಿಗಳು: 
ಯಾವ ಕೆಲಸವನ್ನು ಮಾಡದೇ ಕೆಲಸ ಮಾಡುವವರನ್ನು ಟೀಕಿಸುತ್ತಾ ಇರುವುದು. ತಮಗೆ ಕೆಲಸ ಹೊಣೆಗಾರಿಕೆ ಬಂದಾಗ ಅದನ್ನು ಯಾವುದಾದರೂ ರೀತಿಯಲ್ಲಿ ಇತರರಿಗೆ ಸಾಗ ಹಾಕುವುದು ಅಥವಾ ತಪ್ಪಿಸಿಕೊಳ್ಳುವುದು.

5. ದುಃಖಿರಾಮಿಗಳು: 
ಸದಾ ನಕಾರಾತ್ಮಕವಾದುದನ್ನೇ ಮಾತಾಡುತ್ತಿರುವುದು. ಪ್ರಶಂಸೆ ಮಾಡದಿರುವುದು. ಉದಾಹರಣೆಗೆ ಯಾರಾದರೂ ಬೈಕ್ ಮೇಲೆ ಸಾಹಸ ಮಾಡಿದರು ಎಂದಿಟ್ಟುಕೊಳ್ಳಿ, ಅದನ್ನು ಶೋಕಿ ಎನ್ನುವುದು, ‘‘ಹಾಗೆಲ್ಲಾ ಮಾಡಬಾರದು. ಎದುರಿಗೆ ಯಾವುದಾದರೂ ವಾಹನ ಬಂದರೆ? ಮನೆಯಲ್ಲಿ ಒಳ್ಳೆ ಬೈಕ್ ಕೊಡಿಸಿರ್ತಾರೆ’’; ಇತ್ಯಾದಿ ನಕಾರಾತ್ಮಕವಾದುದನ್ನೇ ಮಾತಾಡುವುದು. ಅವರು ಎಲ್ಲದಕ್ಕೂ ಏನಾದರೂ ಕೆಡುಕಾಗುವುದನ್ನೇ ಮಾತಾಡುತ್ತಾರೆ. ಅವರ ಜೊತೆ ಏನನ್ನೂ ಹಂಚಿಕೊಳ್ಳಲಾಗದು. ಎಲ್ಲದಕ್ಕೂ ಕೆಟ್ಟದ್ದು ಆಗುವುದನ್ನೇ ಭವಿಷ್ಯ ನುಡಿಯುತ್ತಾರೆ.

6. ಜಡವಿಚಾರವಾದಿಗಳು: 
ಯಾವಾಗಲೂ ಬ್ಲಾಕ್ ಆ್ಯಂಡ್ ವೈಟ್ ನಿರ್ಣಯದಲ್ಲೇ ಇರುತ್ತಾರೆ. ಕಪ್ಪುಬಿಳುಪಿನ ನಡುವಿನ ಬೂದಿವಲಯ (ಗ್ರೇ ಏರಿಯಾ) ಅವರ ಪಾಲಿಗೆ ಇರುವುದೇ ಇಲ್ಲ. ಇತರರ ಬಗ್ಗೆ ನಿಷ್ಠುರವಾಗಿ ನಿರ್ಣಾಯಕವಾಗಿ ಮಾತಾಡುತ್ತಾರೆ. ಅವರು ತಪ್ಪೆಂದರೆ ತಪ್ಪೇ ಆಗಿರುತ್ತದೆ, ಅವರು ಸರಿ ಎಂದರೆ ಸರಿಯೇ ಆಗಿರುತ್ತದೆ ಎಂದು ಅವರ ಬಲವಾದ ನಂಬಿಕೆ. ‘‘ಅವರು ಸರಿ ಇಲ್ಲ. ಆತ ಕೆಲಸಕ್ಕೆ ಬಾರದವನು. ಅವನಿಗೆ ಏನೂ ಮಾಡಕ್ಕೆ ಬರಲ್ಲ’’; ಇವು ಅವರ ಸಾಮಾನ್ಯ ಮಾತುಗಳು.

7. ವಾದಿಗಳು: 
ಇತರರ ಆಯಾಮದಿಂದ ಅಥವಾ ದೃಷ್ಟಿಯಿಂದ ವಿಷಯ ಅಥವಾ ಪ್ರಸಂಗಗಳನ್ನು ನೋಡಲು ಸಿದ್ಧವಿರುವುದೇ ಇಲ್ಲ. ತಾವು ಹೇಳುತ್ತಿರುವುದು ತಪ್ಪೋ ಸರಿಯೋ ಎಂದು ಕೂಡಾ ವಿವೇಚಿಸಲು ಹೋಗುವುದಿಲ್ಲ. ತಾನು ವಾದದಲ್ಲಿ ಗೆಲ್ಲಬೇಕು, ಅಷ್ಟೆ!

8. ಗೆಲ್ಲುವ ಹಟದವರು:

ಎಲ್ಲದರಲ್ಲೂ ತಾವೇ ಮುಂದಿರಬೇಕು. ತಾವೇ ಗೆಲ್ಲಬೇಕು. ಆಟ, ಸ್ಪರ್ಧೆಗಳಿಂದ ಹಿಡಿದು ಮನೆಯಲ್ಲಿ ಆಗುವ ಮಾತುಕತೆಯವರೆಗೂ ತಾವೇ ಗೆಲ್ಲಬೇಕು.
9. ಗೌರವಿಸದವರು: 
ವ್ಯಕ್ತಿಗಳನ್ನು, ಸಿದ್ಧಾಂತಗಳನ್ನು, ಪಂಥಗಳನ್ನು ತಾವು ಅಥವಾ ತಾವು ಅನುಸರಿಸುವುದಕ್ಕಿಂತ ಭಿನ್ನವೆಂದು ಅಗೌರವದಿಂದ ಕಾಣುವುದು. ಕ್ಷುಲ್ಲಕವಾಗಿ ಅವುಗಳ ಬಗ್ಗೆ ಮಾತಾಡುವುದು. ಅದರಲ್ಲಿರುವ ಹುಳುಕನ್ನು ಹುಡುಕಿ ಭೂತಗನ್ನಡಿಯಲ್ಲಿ ತೋರುವುದು. ಒಳಿತನ್ನು ಮರೆ ಮಾಚುವುದು ಇವೆಲ್ಲಾ ಗೌರವಿಸದವರ ಪ್ರಮುಖ ಲಕ್ಷಣಗಳು.

10. ತೀರ್ಪುಗಾರರು: 
ಇದು ಹೀಗೆ, ಇವರು ಹೀಗೆ ಎಂಬ ಹಣೆಪಟ್ಟಿ ಕಟ್ಟಿ ಅದನ್ನು ಕೊನೆಯವರೆಗೂ ಸಾಧಿಸಲು ಯತ್ನಿಸುವುದು.

11. ಅಧೀನಗೊಳಿಸಿಕೊಳ್ಳುವವರು: 
ಸಂಬಂಧಗಳಲ್ಲಿ, ಕುಟುಂಬಗಳಲ್ಲಿ, ಹೊರಗೆ ಕೆಲಸ ಮಾಡುವ ಕಡೆಗಳಲ್ಲಿ ವ್ಯಕ್ತಿಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಯತ್ನಿಸುವುದು. ತಾವು ಹೇಳಿದಂತೆಯೇ ಕೇಳಬೇಕು ಎಂದು ಆಗ್ರಹಿಸುವುದು.

12. ಸ್ವಾರ್ಥಿಗಳು:

ತಾನು ಚೆನ್ನಾಗಿದ್ದರೆ ಆಯಿತು. ತನ್ನ ಸಹಜೀವಿಗಳ ಬಗ್ಗೆ ಯಾವ ಕಾಳಜಿಯೂ ಇಲ್ಲದೇ ಇರುವುದು. ಕರುಣೆಯೂ ಇರುವುದಿಲ್ಲ, ಸಹಾನುಭೂತಿಯೂ ಇರುವುದಿಲ್ಲ.

ಅವನ್ಯಾವನೋ, ಅವಳ್ಯಾವಳೋ ಎಂದು ಅವರು ಹೀಗೆ ಎಂಬ ಶಾಶ್ವತ ಹಣೆಪಟ್ಟಿ ಕಟ್ಟುವುದು, ಅವರ್ಯಾರಿಗೋ ಏನಾದರೂ ಸಮಸ್ಯೆ ಆದಾಗ; ‘‘ಇದು ಆಗಬೇಕಾದ್ದೇ, ಹಾಗೇ ಆಗಬೇಕು’’ ಎನ್ನುವುದು, ‘‘ಸರಿಯಾಗಿ ಬುದ್ಧಿ ಕಲಿಸಬೇಕು’’ ಎನ್ನುವುದು, ‘‘ಅವರನ್ನು ಬಿಡಬೇಡಿ ಸರಿಯಾಗಿ ಬುದ್ಧಿ ಕಲಿಸಿ’’ ಎಂದು ಪ್ರಚೋದಿಸುವುದು, ಅವನ್ಯಾವನು ಕೇಳೋಕೆ? ನಾನು ಯಾವನಿಗೂ ಅಥವಾ ಯಾವಳಿಗೂ ಕೇರ್ ಮಾಡಲ್ಲ ಎನ್ನುವುದು; ಇಂತವೆಲ್ಲಾ ನಂಜುಕಾರರ ಅಥವಾ ನಂಜುಗೇಡಿ ಮನಸ್ಸಿನವರ ಸಾಮಾನ್ಯ ವಾಕ್ಯಗಳು. ಒಟ್ಟಾರೆ ಅವರು ನಕಾರಾತ್ಮಕ ಗುಣ ಮತ್ತು ಪ್ರಭಾವಗಳ ಮೊತ್ತ. ಅವರಿಂದ ಇತರರಿಗೆ ಸಂತೋಷ ಅಥವಾ ನೆಮ್ಮದಿ ಇರುವುದಿಲ್ಲ. ಇತರರಿಂದ ಅವರ ಅಹಂಕಾರಕ್ಕೆ ಪುಷ್ಟಿ ಸಿಕ್ಕರೆ ಅವರಿಗೆ ಸಂತೋಷ, ಇತರರನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡು ತಾವು ಗೆದ್ದರೆ ಅವರಿಗೆ ನೆಮ್ಮದಿ. ಇದಕ್ಕೆ ಪರಿಹಾರ? ಅವರಿಗೇ ತಾವು ನಂಜುಗೇಡಿಗಳೆಂದು ತಿಳಿಯಬೇಕು. ಆತ್ಮಾವಲೋಕನ ಮಾಡಿಕೊಳ್ಳುವ ಎದೆಗಾರಿಕೆ ಇರಬೇಕು. ಪ್ರಯತ್ನಪೂರ್ವಕವಾಗಿ ಈ ರೂಢಿಗಳನ್ನು ಬಿಡುತ್ತಾ ಸಕಾರಾತ್ಮಕವಾಗಿ ಚಿಂತಿಸುವ, ವರ್ತಿಸುವ, ಇತರರನ್ನು ಗೌರವಿಸುವ ರೂಢಿಯನ್ನು ಮಾಡಿಕೊಳ್ಳಬೇಕು ಅಷ್ಟೇ. ಬೇರೆ ದಾರಿಯೇ ಇಲ್ಲ.

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ