ಡಬಲ್ ಇಂಜಿನ್ ಸರಕಾರಗಳ ಸೋಲು

Update: 2023-06-14 07:56 GMT

ಬಿಜೆಪಿಯು ಡಬಲ್ ಇಂಜಿನ್ ಸರಕಾರ ಕಲ್ಪನೆಯ ಬಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರೆ, ಅದೆಷ್ಟು ವಿಫಲ ಎಂಬುದು ಮಣಿಪುರ ಮತ್ತು ಕರ್ನಾಟಕದ ಸಂದರ್ಭದಲ್ಲಿ ಗೊತ್ತಾಗಿದೆ. ಡಬಲ್ ಇಂಜಿನ್ ಸರಕಾರಗಳು ಹೆಚ್ಚು ಪರಿಣಾಮಕಾರಿಯಲ್ಲ. ಅವು ಹೆಚ್ಚು ಹೆಚ್ಚು ಪ್ರಚಾರದಲ್ಲಿದ್ದರೂ ಇದೇ ನಿಜ.

ಡಬಲ್ ಇಂಜಿನ್ ಸರಕಾರ. ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಕೇಸರಿ ಪಕ್ಷವೇ ಅಧಿಕಾರದಲ್ಲಿದ್ದರೆ ಭಾರೀ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆಯನ್ನು ಜನರಿಗೆ ಮಾರಾಟ ಮಾಡಲು ಬಿಜೆಪಿ ಸೃಷ್ಟಿಸಿರುವ ಹಿಂಗ್ಲಿಷ್ ಪರಿಭಾಷೆ ಇದು.

ಇದು ಎಷ್ಟು ನಿಜ? ಮಣಿಪುರದಲ್ಲಿನ ಸದ್ಯದ ಸನ್ನಿವೇಶ ಇದರ ವಾಸ್ತವತೆಗೆ ಒಂದು ಕಟುವಾದ ಉದಾಹರಣೆ. ಅಲ್ಲಿ ತಲೆದೋರಿರುವ ಉದ್ವಿಗ್ನತೆ, ಕೋಮು ಗಲಭೆ, ಅಲ್ಲಿನ ಬುಡಕಟ್ಟು ಜನರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿ ಇವನ್ನೆಲ್ಲ ನೋಡುತ್ತಿದ್ದರೆ ಡಬಲ್ ಇಂಜಿನ್ ಸರಕಾರ ಜನರ ಅಭಿವೃದ್ಧಿಯಲ್ಲಿ ತೊಡಗಿರುವುದಲ್ಲ ಎಂಬುದು ಗೊತ್ತಾಗುತ್ತದೆ. ರಾಜ್ಯ ಸರಕಾರ ಶಾಂತಿಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ, ಬುಡಕಟ್ಟಿನವರ ಮೇಲಿನ ದಾಳಿಗೆ ಸರಕಾರದ್ದೇ ಬೆಂಬಲ ಇರುವುದು ಕೂಡ ರಹಸ್ಯವಲ್ಲ. ಹಾಗಾಗಿ ಇಲ್ಲಿ ಸರಕಾರ ಪಕ್ಷಪಾತಿ ಧೋರಣೆ ಅನುಸರಿಸಿದೆ ಎಂದೂ ಕಟುವಾಗಿ ಟೀಕಿಸಲಾಗುತ್ತಿದೆ.

ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ ಇಷ್ಟೊಂದು ಭಯಾನಕ ವಾತಾವರಣ ಸೃಷ್ಟಿಯ ಹಿಂದಿನ ರಾಜಕೀಯಗಳು ಬಯಲಾಗಿವೆ. ವಿಚಿತ್ರವೆಂದರೆ, ಕೇಂದ್ರ ಏನೇನೂ ಕ್ರಮಕ್ಕೆ ಮುಂದಾಗದಿರುವುದು. ಸಾಂವಿಧಾನಿಕ ವ್ಯವಸ್ಥೆಯ ಸ್ಥಗಿತ ಸಂದರ್ಭದಲ್ಲಿ ರಾಜ್ಯ ಸರಕಾರವನ್ನು ವಜಾಗೊಳಿಸಲು ನಮ್ಮ ಸಂವಿಧಾನ ನಿಬಂಧನೆಗಳನ್ನು ಹೊಂದಿದೆ. ಆದರೆ ಕೇಂದ್ರ ಏನನ್ನೂ ಮಾಡಿಲ್ಲ. ಡಬಲ್ ಇಂಜಿನ್ ಸರಕಾರದ ವಿಚಾರದಲ್ಲಿ ಇಂಥದೊಂದು ಸಾಧ್ಯತೆಯ ಚರ್ಚೆಯೂ ನಡೆದಿಲ್ಲ. ಯಾಕೆಂದರೆ ಎರಡೂ ಸರಕಾರಗಳ ಉದ್ದೇಶ ಒಂದೇ.

ಇತ್ತೀಚೆಗೆ ಸುದ್ದಿಯಲ್ಲಿದ್ದ ಇನ್ನೊಂದು ಉದಾಹರಣೆಯನ್ನು ನೋಡೋಣ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಡಬಲ್ ಇಂಜಿನ್ ಸರಕಾರ ಎಂಬ ಮಾತನ್ನಿಟ್ಟುಕೊಂಡೇ ಬಿಜೆಪಿ ಚುನಾವಣೆ ಎದುರಿಸಿತು. ಆದರೆ ಡಬಲ್ ಇಂಜಿನ್ ಎಂಬುದನ್ನು ರಾಜ್ಯದ ಜನರು ಬದಿಗಿಟ್ಟರು. ಸಿಂಗಲ್ ಇಂಜಿನ್ ಸರಕಾರವನ್ನು ಅಧಿಕಾರಕ್ಕೆ ತಂದರು.

ಬಿಜೆಪಿಯು ಈ ಕಲ್ಪನೆಯ ಬಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರೆ, ಅದೆಷ್ಟು ವಿಫಲ ಎಂಬುದು ಮಣಿಪುರ ಮತ್ತು ಕರ್ನಾಟಕದ ಸಂದರ್ಭದಲ್ಲಿ ಗೊತ್ತಾಗಿದೆ. ಡಬಲ್ ಇಂಜಿನ್ ಸರಕಾರಗಳು ಹೆಚ್ಚು ಪರಿಣಾಮಕಾರಿಯಲ್ಲ. ಅವು ಹೆಚ್ಚು ಹೆಚ್ಚು ಪ್ರಚಾರದಲ್ಲಿದ್ದರೂ ಇದೇ ನಿಜ.

ವಿಶ್ಲೇಷಣೆಯ ಪ್ರಕಾರ, ಶೇ. ೪೫ರಷ್ಟು ಜನರು ಡಬಲ್ ಇಂಜಿನ್ ಸರಕಾರದಿಂದ ಆಳಲ್ಪಡುತ್ತಿದ್ದಾರೆ. ಅದೊಂದೇ ಪಕ್ಷಕ್ಕೆ ಮತ ಹಾಕಿರುವ ಜನರ ಪ್ರಮಾಣ ಇನ್ನೂ ಕಡಿಮೆ. ಏಕೆಂದರೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸಿರುವುದು ಆಪರೇಷನ್ ಕಮಲದಂಥ ಅಡ್ಡ ಹಾದಿಯ ಮೂಲಕ. ಹಾಗಾಗಿ ಅಂಥ ರಾಜ್ಯಗಳನ್ನು ತೆಗೆದುಹಾಕಿದರೆ, ಡಬಲ್ ಇಂಜಿನ್ ಸರಕಾರವನ್ನು ಬಯಸಿ ಮತ ಚಲಾಯಿಸಿರುವವರ ಸಂಖ್ಯೆ ಶೇ. ೩೦ಕ್ಕೆ ಇಳಿಯುತ್ತದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕೇಂದ್ರ, ರಾಜ್ಯವೆರಡರಲ್ಲಿಯೂ ಒಂದೇ ಪಕ್ಷದ ಸರಕಾರಗಳು ಪ್ರಬಲ ರಾಜಕೀಯ ಮಾದರಿಯಾಗಿತ್ತು. ೧೯೪೭ರಲ್ಲಿ ಬ್ರಿಟಿಷರಿಂದ ಅಧಿಕಾರವನ್ನು ಹಸ್ತಾಂತರಿಸುವ ಸಮಯದಲ್ಲಿ, ಆಗಿನ ಎಲ್ಲಾ ಪ್ರಾಂತಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವೇ ರಾಜ್ಯಗಳಲ್ಲೂ ಆಳ್ವಿಕೆ ನಡೆಸಿತು. ಆದ್ದರಿಂದ ನೆಹರೂ ಅವಧಿ ಹೀಗೆ - ಈಗಿನ ಪದಗಳಲ್ಲಿ ಹೇಳುವುದಾದರೆ -ಡಬಲ್ ಇಂಜಿನ್ ಸರಕಾರದ ಉಚ್ಛ್ರಾಯ ಕಾಲ. ಇದು ಸರಳವಾಗಿ ಭಾರತೀಯ ರಾಜಕೀಯಕ್ಕೆ ಮಾದರಿ.

ಆಗ ಆ ಸರಕಾರಗಳು ಹೇಗೆ ಕೆಲಸ ಮಾಡಿದವು ಎಂಬುದನ್ನು ಭಾರತೀಯರು ನೋಡಿದ್ದಾರೆ. ಪಶ್ಚಿಮ ಬಂಗಾಳವನ್ನೇ ತೆಗೆದುಕೊಂಡರೆ, ೧೯೪೭ರವರೆಗೆ ಮುಸ್ಲಿಮ್ ಲೀಗ್ ಸರಕಾರವನ್ನು ಹೊಂದಿದ್ದ ಅದು, ವಿಭಜನೆಯ ನಂತರ ಹೊಸದಾಗಿ ರಚಿಸಲಾದ ಪ್ರಾಂತದ ಪಶ್ಚಿಮ ಅರ್ಧದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡಿತು. ಅಲ್ಲಿಂದ ನೆಹರೂ ಅವರ ಸಾವಿನವರೆಗೂ ಅಲ್ಲಿ ಕಾಂಗ್ರೆಸ್ ಆಡಳಿತವೇ ಇತ್ತು. ಆದರೂ ಆ ಡಬಲ್ ಇಂಜಿನ್ ಸರಕಾರದ ಅಡಿಯಲ್ಲಿ ರಾಜ್ಯ ದೊಡ್ಡ ಮಟ್ಟಿಗೆ ಹಿಂಜರಿಕೆ ಕಂಡಿತು.

೧೯೭೧ರ ಪುಸ್ತಕ Agony of West Bengal, ೧೯೪೭ರಿಂದ ರಾಜ್ಯದ ಆರ್ಥಿಕ ಕುಸಿತದ ಸಂಪೂರ್ಣ ಚಿತ್ರವನ್ನು ಕೊಡುತ್ತದೆ. ‘ಆನಂದ ಬಜಾರ್’ ಪತ್ರಿಕೆಯ ರಣಜಿತ್ ರಾಯ್, ಪಶ್ಚಿಮ ಬಂಗಾಳದ ಒಟ್ಟು ಕೈಗಾರಿಕಾ ಉತ್ಪಾದನೆಯು ೧೯೪೭ರಲ್ಲಿ ದೇಶದ ಶೇ.೨೭ಷ್ಟು ಇದ್ದದ್ದು ೧೯೬೧ರಲ್ಲಿ ಶೇ.೧೭ಕ್ಕೆ ಹೇಗೆ ಕುಸಿಯಿತು ಎಂಬುದನ್ನು ವಿವರಿಸಿದ್ಧಾರೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ರಾಜ್ಯದ ಹೆಚ್ಚಿನ ಕೈಗಾರಿಕಾ ಅವನತಿ ಕಾಂಗ್ರೆಸ್‌ನ ಡಬಲ್ ಇಂಜಿನ್ ಸರಕಾರದ ಅವಧಿಯಲ್ಲಿ ನಡೆಯಿತು. ರಾಜ್ಯದಲ್ಲಿ ಎಡಪಕ್ಷಗಳ ಉದಯವು ಈ ಪತನದ ಪರಿಣಾಮವಾಗಿದೆ. ಏಕೆಂದರೆ ಕೈಗಾರಿಕಾ ಕುಸಿತವು ಅದರ ಪ್ರಾಥಮಿಕ ಕಾರಣಕ್ಕಿಂತ ಹೆಚ್ಚಾಗಿ ಕಾರ್ಮಿಕರ ಉದ್ವಿಗ್ನತೆ ಹೆಚ್ಚಲು ಕಾರಣವಾಗಿತ್ತು.

ರಾಯ್ ಈ ಕುಸಿತದ ಹಿಂದಿನ ಮುಖ್ಯ ಕಾರಣವಾಗಿ ದಿಲ್ಲಿಯತ್ತ ಬೆರಳು ಮಾಡಿದ್ದಾರೆ. ಕೇಂದ್ರವು ಬಂಗಾಳದ ತೆರಿಗೆಗಳನ್ನು ಮನಸೋ ಇಚ್ಛೆ ಕಡಿತಗೊಳಿಸಿತು. ಕಲ್ಲಿದ್ದಲು, ಉಕ್ಕು ಮತ್ತು ಸಿಮೆಂಟ್‌ನಂತಹ ನಿರ್ಣಾಯಕ ಕೈಗಾರಿಕಾ ಒಳಹರಿವುಗಳಿಗೆ ರೈಲು ಸಾರಿಗೆಗೆ ಸಬ್ಸಿಡಿ ನೀಡುವ ಸರಕು ಸಮೀಕರಣದಂತಹ ಬೃಹತ್ ಕೇಂದ್ರೀಕೃತ ಯೋಜನೆಗಳನ್ನು ಜಾರಿಗೆ ತರಲು ಇಂಥ ಕ್ರಮ ಕೈಗೊಳ್ಳಲಾಯಿತು. ಇದು ಈ ಕಚ್ಚಾ ಸಾಮಗ್ರಿಗಳ ಮೂಲಕ್ಕೆ ಸಮೀಪವಿರುವ ಬಂಗಾಳಕ್ಕೆ ಭಾರೀ ಪ್ರಮಾಣದಲ್ಲಿ ಹಾನಿಯನ್ನು ತಂದಿತು. ದಕ್ಷಿಣದಲ್ಲಿ ಉದ್ಯಮಕ್ಕೆ ಉತ್ತೇಜನ ಸಿಕ್ಕಿತು. ೧೯೭೭ರವರೆಗೆ ಪಶ್ಚಿಮ ಬಂಗಾಳವು ನಿರಂತರ ಕಾಂಗ್ರೆಸ್ ಆಡಳಿತವನ್ನು ಹೊಂದಿದ್ದಾಗಲೂ ಇವೆಲ್ಲವೂ ನಡೆಯುತ್ತಲೇ ಇತ್ತು.

ಈ ಸಮಯದಲ್ಲಿ ಕೇಂದ್ರ ನೀತಿಗಳ ಮುಖ್ಯ ಫಲಾನುಭವಿಗಳಲ್ಲಿ ಒಂದಾಗಿದ್ದ ರಾಜ್ಯವೆಂದರೆ, ತಮಿಳುನಾಡು. ೧೯೬೦ರ ಹೊತ್ತಿಗೆ ಹಿಂದಿ ವಿರುದ್ಧ ಆಂದೋಲನಗಳು ಇಲ್ಲಿ ತೀವ್ರವಾಗಿದ್ದವು. ೧೯೬೭ರ ವೇಳೆಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಅಂದಿನಿಂದ ಇಂದಿನವರೆಗೆ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿಲ್ಲ ಮಾತ್ರವಲ್ಲ, ಅಸ್ತಿತ್ವವನ್ನೇ ಹೊಂದಿರಲಿಲ್ಲ. ಇಡೀ ರಾಜಕೀಯ ಜಾಗವನ್ನು, ಸರಕಾರ ಮತ್ತು ವಿರೋಧವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸಿಕೊಂಡವು.

ಡಬಲ್ ಇಂಜಿನ್ ಸರಕಾರದ ಇಲ್ಲವಾಗುವಿಕೆಯ ಪರಿಣಾಮ, ಸ್ವಾತಂತ್ರ್ಯದ ಹೊತ್ತಿನಲ್ಲಿ ಹಿಂದುಳಿದಿದ್ದರೂ ಇಂದು ತಮಿಳುನಾಡು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ೧೯೬೦ರಲ್ಲಿ, ತಮಿಳುನಾಡು ಹೊಂದಿದ್ದ ಆದಾಯ, ರಾಷ್ಟ್ರೀಯ ಪಕ್ಷಗಳ ನಿರಂತರ ಆಡಳಿತವನ್ನು ಕಂಡ ಉತ್ತರ ಪ್ರದೇಶದ ಐದನೇ ಎರಡರಷ್ಟು ಮಾತ್ರವಿತ್ತು. ಇಂದು ತಮಿಳುನಾಡು, ಉತ್ತರ ಪ್ರದೇಶಕ್ಕಿಂತ ದೊಡ್ಡ ಆರ್ಥಿಕತೆಯನ್ನು ಹೊಂದಿದೆ.

ಅಪವಾದಗಳೂ ಇವೆ. ಮಹಾರಾಷ್ಟ್ರ ಮತ್ತು ಗುಜರಾತ್‌ಗಳನ್ನು ರಾಷ್ಟ್ರೀಯ ಪಕ್ಷಗಳು ದೀರ್ಘಕಾಲ ಆಳಿದ್ದರೂ, ಅವು ಆರ್ಥಿಕವಾಗಿಯೂ ಉತ್ತಮವಾಗಿವೆ. ಆದರೆ, ಡಬಲ್ ಇಂಜಿನ್ ಸರಕಾರವನ್ನು ಹೊಂದಿರುವ ರಾಜ್ಯ ಶ್ರೀಮಂತವಾಗುತ್ತದೆಯೇ ಎಂಬುದಕ್ಕೆ ನಿಖರ ಉತ್ತರವಿಲ್ಲ. ಹಾಗೆಂದು ಭ್ರಮೆ ಇಟ್ಟುಕೊಳ್ಳುವುದು ಅರ್ಥಹೀನ.

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವನ್ನು ಹೊಂದುವುದು, ಬಿಜೆಪಿ ಹೇಳಿಕೊಳ್ಳುವಂತೆ ಸುಗಮ ಆಡಳಿತಕ್ಕೆ ಕಾರಣವಾಗಬೇಕು. ಆಡಳಿತ ಪಕ್ಷವು ದಿಲ್ಲಿ ಮತ್ತು ರಾಜ್ಯದ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಆದರೂ, ಪ್ರಾಯೋಗಿಕವಾಗಿ ಇದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಬಹುದು. ಒಂದು ಪಕ್ಷದ ಹೈಕಮಾಂಡ್ ರಾಜಕೀಯ ಕಾರಣಗಳಿಗಾಗಿ ರಾಜ್ಯದ ನಿಜವಾದ ಬೇಡಿಕೆಗಳನ್ನು ನಿಗ್ರಹಿಸಲು ಬಯಸಬಹುದು. ಒಂದು ವೇಳೆ ಹೀಗಾದಲ್ಲಿ ಅದನ್ನು ಪ್ರತಿಭಟಿಸುವ ಶಕ್ತಿಯೂ ರಾಜ್ಯಸರಕಾರಕ್ಕೆ ಇಲ್ಲವಾಗುತ್ತದೆ. ಯಾಕೆಂದರೆ ಪಕ್ಷದ ಆಂತರಿಕ ಶಿಸ್ತಿಗೆ ರಾಜ್ಯವು ಬದ್ಧವಾಗಿರಬೇಕಾದ ಸ್ಥಿತಿ. ಹಾಗಾಗಿ ಪ್ರತಿಭಟನೆ ಸಾಧ್ಯವಾಗುವುದಿಲ್ಲ.

ಬಂಗಾಳವು ಅದರ ಎರಡನೇ ಮುಖ್ಯಮಂತ್ರಿ ಬಿ.ಸಿ. ರಾಯ್ ಅವಧಿಯಲ್ಲಿ ಕಂಡ ಸ್ಥಿತಿ ವಾಸ್ತವವಾಗಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರು ಪಶ್ಚಿಮ ಬಂಗಾಳಕ್ಕೆ ಹಾನಿ ಮಾಡುತ್ತಿದ್ದ ಕೇಂದ್ರ ಪೊಲೀಸರ ವಿರುದ್ಧ ಬಲವಾಗಿ ಪ್ರತಿಭಟಿಸಿದರು. ಆದರೆ ಪಕ್ಷದ ವ್ಯಕ್ತಿಯಾಗಿರುವುದರಿಂದ ಇದನ್ನು ಯಾವಾಗಲೂ ಖಾಸಗಿಯಾಗಿ ಮಾಡಬೇಕಾಗಿತ್ತು. ಆದರೂ ತಮಿಳುನಾಡಿನಂತಹ ರಾಜ್ಯಗಳು ಬಾಹ್ಯ ಸವಾಲುಗಳು ಮತ್ತು ಸಾರ್ವಜನಿಕ ಒತ್ತಡವನ್ನು ಬಳಸಿಕೊಂಡು ದಿಲ್ಲಿಯ ಮೇಲೆ ಯಶಸ್ವಿಯಾಗಿ ಒತ್ತಡ ಹೇರಲು ಸಾಧ್ಯವಾಯಿತು.

ತಮಿಳುನಾಡಿನಲ್ಲಿ ಅಂಥದೇ ಹೆಚ್ಚುಗಾರಿಕೆಯನ್ನು ಇವತ್ತಿಗೂ ಕಾಣಬಹುದು. ಅದು ಯಾವುದೇ ವಿಚಾರವಾಗಿ ಕೇಂದ್ರದ ವಿರುದ್ಧ ದಿಟ್ಟತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತದೆ. ಆದರೆ ತಮಿಳುನಾಡಿನಂತೆಯೇ ಕೈಗಾರಿಕೀಕರಣಗೊಂಡ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಬಿಜೆಪಿಯ ಆಂತರಿಕ ಶಿಸ್ತಿಗೆ ಬದ್ಧವಾಗಿರಬೇಕಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ರೀತಿಯಲ್ಲಿಯೇ ಬಲವಾಗಿ ಪ್ರತಿಭಟಿಸಲು ಸಾಧ್ಯವಾಗುವುದಿಲ್ಲ.

ಕೆಲವು ಹಂತದಲ್ಲಿ ಭಾರತೀಯ ಮತದಾರರು ಈ ಸತ್ಯವನ್ನು ಅರಿತುಕೊಂಡಿದ್ದಾರೆ. ಡಬಲ್ ಇಂಜಿನ್ ಸರಕಾರ ಎಂಬುದಕ್ಕಿಂತಲೂ, ಸರಕಾರವೊಂದು ಎಷ್ಟು ಪ್ರಾಮಾಣಿಕ ಆಡಳಿತ ನೀಡುತ್ತದೆ ಎನ್ನುವುದೇ ಮುಖ್ಯ.

(ಕೃಪೆ: scroll.in)

Writer - ಶುಐಬ್ ದಾನಿಯಾಲ್

contributor

Editor - ಶುಐಬ್ ದಾನಿಯಾಲ್

contributor

Similar News