ಆತಂಕಕಾರರು
ಬೇಗ ಹೋಗದಿದ್ದರೆ ಬಸ್ ಹೊರಟು ಹೋಗಿಬಿಡುತ್ತೆ, ಅಥವಾ ಟಿಕೆಟ್ ಸಿಗದೇ ಹೋದರೆ? ಅಥವಾ ಸೀಟ್ ಸಿಗದೇ ಹೋದರೆ? ಬೆಳಗ್ಗೆ ಬೇಗ ಏಳದೇ ಹೋದರೆ? ಸರಿಯಾಗಿ ಓದಲಿಲ್ಲವೆಂದರೆ ಕಡಿಮೆ ಮಾರ್ಕ್ಸ್ ಬಂದರೆ? ಫೇಲ್ ಆಗಿಬಿಟ್ಟರೆ? ನನ್ನ ಮಗಳಿಗೆ ಒಳ್ಳೆ ಕಡೆ ಗಂಡು ಸಿಗದೇ ಹೋದರೆ? ಕೆಲಸ ಸಿಗದೇ ಹೋದರೆ? ವೇದಿಕೆಯ ಮೇಲೆ ನಾಟಕ ಸರಿ ಬರದೇ ಹೋದರೆ? ಅಂದು ಯಾರಾದರೂ ಕಲಾವಿದರಿಗೆ ಹುಷಾರಿಲ್ಲದೇ ಹೋದರೆ? ಆಯೋಜಿಸಿದ ಕಾರ್ಯಕ್ರಮ ಯಶಸ್ವಿ ಆಗದೇ ಹೋದರೆ?
ಈ ಬಗೆಯ ಸಾವಿರಾರು ಆಲೋಚನೆಗಳೂ ಆತಂಕವೇ. ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ಅಳುಕು ಇದ್ದೇ ಇರುತ್ತದೆ. ಆದರೆ ಒಂದು ಸಾಮಾನ್ಯವಾದ ಅಳುಕಿಗೂ, ತೀವ್ರವಾದ ತಳಮಳಕ್ಕೂ ವ್ಯತ್ಯಾಸವಿದೆ. ಸಾಮಾನ್ಯವಾದ ಅಳುಕು ಇರುವಾಗ ಅದನ್ನು ನಿವಾರಿಸಿಕೊಳ್ಳುವ ಇತರ ಸಾಧ್ಯತೆಗಳನ್ನು ನೋಡಿ ಧೈರ್ಯ ತಂದುಕೊಳ್ಳಲಾಗುವುದು. ಬಸ್‌ಸ್ಟ್ಯಾಂಡಿಗೆ ಸಮಯಕ್ಕೆ ಮುನ್ನವೇ ಹೋಗಿಬಿಟ್ಟರೆ ಬಸ್ ಮಿಸ್ ಆಗುವುದಿಲ್ಲ. ನಾಟಕದ ಒಬ್ಬ ಕಲಾವಿದನಿಗೆ ಹುಷಾರಿರದೇ ಹೋದರೆ, ಮತ್ತೊಬ್ಬನಿಗೆ ಆ ಪಾತ್ರ ಗೊತ್ತಿದೆ, ಅವನ ಕೈಯಲ್ಲೇ ಮಾಡಿಸಬಹುದು.
ಕಾರ್ಯಕ್ರಮಕ್ಕೆ ಕರೆದಿರುವವರಂತೂ ಬಂದೇ ಬರುವರು, ಏನಾದರೂ ಹೆಚ್ಚು ಕಡಿಮೆಯಾದರೆ ಆ ಹಿತೈಷಿಗಳು ಸಹಕರಿಸುವರು; ಹೀಗೇ ಅಳುಕಿಗೆ ಒಂದು ಧೈರ್ಯವನ್ನು ತಂದುಕೊಳ್ಳುವುದು ಮನಸ್ಸಿನ ಒಂದು ಮಾರ್ಗ. ಆದರೆ ಯಾವ ಧೈರ್ಯದ ಸಾಧ್ಯತೆಗಳನ್ನೇ ಆಲೋಚಿಸಲು ಒಪ್ಪದೆ, ನೆರವಾಗುವ ಮೂಲಗಳನ್ನು ನಂಬದೆ, ನಕಾರಾತ್ಮಕವಾದದ್ದು ಆಗಿಬಿಡುವುದು ಎಂದು ತೀವ್ರವಾಗಿ ತಳಮಳಿಸುತ್ತಲೇ ಇರುವುದನ್ನು ಆತಂಕ ಸಮಸ್ಯೆ ಅಥವಾ ಆಂಕ್ಸೈಟಿ ಡಿಸಾರ್ಡರ್ ಎನ್ನಬಹುದು.
ಕೆಲವರಲ್ಲಿ ಈ ಆತಂಕವು ಅದೆಷ್ಟು ಪ್ರಬಲವಾಗಿರುತ್ತದೆ ಎಂದರೆ ತಾವಷ್ಟೇ ಆತಂಕಗೊಳ್ಳುವುದಲ್ಲ, ತಮ್ಮ ಜೊತೆಯಲ್ಲಿರುವವರನ್ನೆಲ್ಲಾ ಆತಂಕಕ್ಕೆ ದೂಡುತ್ತಾರೆ. ಇತರರಲ್ಲೂ ಕೂಡಾ ಆತಂಕ ಅಥವಾ ಒಂದು ಪ್ರಮಾಣದ ಅಳುಕು ಇದ್ದೇ ಇರುತ್ತದೆ. ತಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂಬ ಹಂಬಲ ಸಹಜವಾಗಿದ್ದು, ಅದಕ್ಕೆ ಏನೂ ವಿಘ್ನ ಒದಗದೇ ಇರಲಿ ಎಂದು ಅಂತರಾಳದಿಂದ ಬಯಸುವುದು ಕ್ರಿಯಾಶೀಲ ಮನಸ್ಸಿನ ಒಂದು ಸಹಜ ಆಶಯವಾಗಿರುತ್ತದೆ. ಹಾಗೆಯೇ ಪರ್ಯಾಯ ಮಾರ್ಗ ಅಥವಾ ಬದಲೀ ವ್ಯವಸ್ಥೆಗಳನ್ನು ಆಲೋಚಿಸುತ್ತಾ ಧೈರ್ಯವನ್ನು ಹೊಂದುವುದೂ ಸಹಜ ಮನಸ್ಸಿನ ಒಂದು ಸ್ವಭಾವವೇ ಆಗಿರುತ್ತದೆ.
ಆದರೆ ತೀವ್ರವಾದ ಆತಂಕವನ್ನು ಹೊಂದಿರುವವರು ಇತರರಲ್ಲಿರುವ ಧೈರ್ಯ ಮತ್ತು ಪರ್ಯಾಯ ಆಲೋಚನೆಗಳನ್ನು ಪ್ರೇರೇಪಿಸುವ ಬದಲು, ಅವರಲ್ಲಿರುವ ಅಳುಕನ್ನೇ ಗಟ್ಟಿಗೊಳಿಸುವ, ಅದನ್ನು ಹೆಚ್ಚಿಸುವಂತಹ ಪ್ರಭಾವವನ್ನು ಬೀರುತ್ತಾರೆ. ಹಾಗಾದಾಗಲೇ ಸಮಸ್ಯೆ. ಇಂತಹ ಆತಂಕಕಾರಿಗಳಲ್ಲಿ ಸಮಾಧಾನ ಇರುವುದಿಲ್ಲ, ಅಸಹನೆಯ ಪ್ರಮಾಣ ಹೆಚ್ಚು, ನಿಯಂತ್ರಿಸಿಕೊಳ್ಳಲು ಆಗದಂತಹ ಉದ್ವಿಗ್ನತೆ, ಖಿನ್ನತೆ, ಸಿಡಿಮಿಡಿಗೊಳ್ಳುವುದು, ಕೆಲಸಗಳಲ್ಲಿ ಏಕಾಗ್ರತೆಯನ್ನು ಸಾಧಿಸಲು ಆಗದೇ ಹೋಗುವುದು, ಗಮನ ಕೊಡಲು ಕಷ್ಟವಾಗುವುದು, ಸರಿಯಾಗಿ ನಿದ್ರೆ ಬಾರದಿರುವುದು, ಯಾರಾದರೂ ಅವರ ಆಲೋಚನೆಯ ದಿಕ್ಕಿನಲ್ಲಿ ಸ್ಪಂದಿಸದಿದ್ದರೆ ಕೋಪಗೊಳ್ಳುವುದು, ನಿರಾಶೆಗೊಳ್ಳುವುದು, ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಭಯಗೊಳ್ಳುವುದು, ಸದಾ ಆಸರೆಗೆ ಭುಜವೊಂದನ್ನು ಬಯಸುತ್ತಲೇ ಇರುವುದು, ತಮ್ಮನ್ನು ತಾವು ಅಯ್ಯೋಪಾಪ ಎಂದೆನಿಸಿಕೊಳ್ಳುವಂತೆ ಬಿಂಬಿಸಿಕೊಳ್ಳುವುದು, ಶಾಂತ ಚಿತ್ತತೆ ಇಲ್ಲದಿರುವುದು; ಇವೆಲ್ಲಾ ಸಾಧಾರಣ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು ಅಥವಾ ಎಲ್ಲಾ ಇದ್ದರೂ ಆಶ್ಚರ್ಯವಿಲ್ಲ.
ಕೆಲವೊಮ್ಮೆ ಇಂತಹ ಆತಂಕ ಸಮಸ್ಯೆಯು ತೀವ್ರಗೊಂಡರೆ ಭಯಾಘಾತಕ್ಕೆ (ಪ್ಯಾನಿಕ್ ಅಟ್ಯಾಕ್) ಒಳಗಾಗಬಹುದು. ಆಗ ತಲೆಸುತ್ತುವುದು, ಮೂರ್ಚೆ ಹೋಗುವುದು, ಅನಿಯಂತ್ರಿತವಾಗಿ ನಡುಗುವುದು, ಉಸಿರಾಟದಲ್ಲಿ ಏರುಪೇರು, ಕೂಗಾಡುವುದು, ಅಳುವುದು, ಗೊಂದಲಕ್ಕೀಡಾಗುವುದು; ಇಂತಹವೆಲ್ಲಾ ಆಗಬಹುದು. ಕೆಲವರಿಗೆ ಕೆಲವೊಂದು ವಿಷಯಗಳಲ್ಲಿ ಮಾತ್ರವೇ ಅಕಾರಣ ಭಯವಿರಬಹುದು.
ನೀರು, ಬೆಂಕಿ, ಎತ್ತರದ ಸ್ಥಳ, ಮೊನಚಾದ ವಸ್ತುಗಳು; ಹೀಗೆ ಯಾವುದಾದರೂ ಫೋಬಿಯಾ ಇರಬಹುದು. ಅವರು ಆ ಹೊತ್ತಿಗೆ ತಾತ್ಕಾಲಿಕವಾಗಿ ಆತಂಕಕ್ಕೆ ಒಳಗಾಗುತ್ತಾರೆ. ಇಂತಹ ಲಕ್ಷಣಗಳು ಕಂಡು ಬಂದಾಗ ಅಂತಹವರು ತಮ್ಮ ಈ ಆತಂಕಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸಬೇಕು. ಕೆಲವೊಮ್ಮೆ ಸುಳಿವು ಸಿಗಬಹುದು. ಕುಟುಂಬದ ವಾತಾವರಣ, ನೆರೆಹೊರೆಗಳು, ನೇರವಾಗಿ ಪ್ರಭಾವಿಸುವ ವ್ಯಕ್ತಿಗಳು, ಬಾಲ್ಯದ ಘಟನೆಗಳು, ನಕಾರಾತ್ಮಕ ಅನುಭವಗಳು, ಆತಂಕಕಾರಿಗಳೇ ಸುತ್ತಲೂ ಇರುವಂತಹ ವಾತಾವರಣಗಳು, ಆನುವಂಶೀಯ ಸಮಸ್ಯೆ; ಹೀಗೆ ಏನಾದರೂ ಕಾರಣವಾಗಿರಬಹುದು.
ಕೆಲವೊಮ್ಮೆ ಮೆದುಳಿನ ರಾಸಾಯನಿಕ ದ್ರವ್ಯಗಳ ಏರುಪೇರುಗಳಿಂದಲೋ, ನರಗಳ ಸಮಸ್ಯೆಯಿಂದಲೂ ಕೂಡಾ ಇಂತಹ ಆತಂಕದ ಸಮಸ್ಯೆಯನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ. ಮಕ್ಕಳಲ್ಲಿ, ದೊಡ್ಡವರಲ್ಲಿ, ವಯಸ್ಸಾದವರಲ್ಲಿಯೂ ಕೂಡಾ ತಮ್ಮವರಿಂದ ಬೇರಾಗುವಂತಹ ಭಯವೂ ಆತಂಕಕ್ಕೆ ಕಾರಣವಾಗುತ್ತದೆ. ಶಾಲೆಗೆ ಮಗುವನ್ನು ಬಿಡುವಾಗ ತನ್ನ ಮನೆಯಿಂದ ಅದೆಲ್ಲಿಗೋ ಅಪರಿಚಿತ ಮತ್ತು ಮನೆಯವರಲ್ಲದ ಜನರೊಂದಿಗೆ ಬಿಡುತ್ತಾರೆ ಎಂದು ಅಳುವ ಮಗುವಿಗೆ ಅಲ್ಲಿರುವುದು ಮನೆಯವರಿಂದ ದೂರಾಗುವ ಆತಂಕವೇ. ಹಾಗೇ ವಯಸ್ಸಾದವರಿಗೆ ತಮ್ಮ ಮಕ್ಕಳು ದೂರಾದರೂ ವೃದ್ಧಾಪ್ಯದಲ್ಲಿ ಇಂತಹದನ್ನು ಅನುಭವಿಸಬಹುದು. ಕಾರಣ ಏನೇ ಇದ್ದರೂ ಅದನ್ನು ನಿಯಂತ್ರಿಸುವ, ಅದನ್ನು ಇತರರ ಮೇಲೆ ಹೇರದಿರುವ ಮತ್ತು ಅದಕ್ಕೆ ಪರ್ಯಾಯವಾಗಿ ಇತರ ಮಾರ್ಗಗಳನ್ನು ಕಂಡುಕೊಳ್ಳುವ ಕೆಲಸವನ್ನು ಸಮಸ್ಯೆಯುಳ್ಳವರೇ ಮಾಡಬೇಕು.
ಕೆಲವರು ಇಂತಹ ಆತಂಕದಿಂದ ದೂರಾಗಲು ಸಿಗರೇಟು, ಮದ್ಯಪಾನ, ಮಾದಕ ವಸ್ತುಗಳ ಸೇವನೆಗಳಂತಹ ಚಟಗಳಿಗೂ ಮೊರೆಹೋಗುವುದುಂಟು. ಆದರೆ, ತತ್ಕಾಲಕ್ಕೆ ಅವರು ಆತಂಕದಿಂದ ತಪ್ಪಿಸಿಕೊಂಡರೂ, ಆತಂಕದ ಸಮಸ್ಯೆಯೊಂದಿಗೆ, ಚಟಗೇಡಿತನದ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡು ಮತ್ತಷ್ಟು ಮನಸ್ಸನ್ನು ಹದಗೆಡಿಸಿಕೊಳ್ಳುತ್ತಾರೆ.