ಅರುಣಾಚಲ ಪ್ರದೇಶ | ಸೇನಾ ಟ್ರಕ್ ಕಮರಿಗೆ ಬಿದ್ದು ಮೂವರು ಯೋಧರು ಮೃತ್ಯು, ಹಲವರಿಗೆ ಗಾಯ
ಇಟಾನಗರ : ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ತಾಪಿ ಗ್ರಾಮದ ಬಳಿಯ ಟ್ರಾನ್ಸ್ ಅರುಣಾಚಲ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತರನ್ನು ಹವಾಲ್ದಾರ್ ನಖತ್ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಅಪಘಾತಕ್ಕೀಡಾದ ಸೇನಾ ಟ್ರಕ್ ಸಿಬ್ಬಂದಿಯನ್ನು ಸಾಗಿಸುವ ಬೆಂಗಾವಲು ಪಡೆಯ ಭಾಗವಾಗಿತ್ತು. ಸುಬಾನ್ಸಿರಿಯ ಜಿಲ್ಲಾ ಕೇಂದ್ರ ಪಟ್ಟಣವಾದ ದಪೋರಿಜೋದಿಂದ ಲೆಪರಾಡಾ ಜಿಲ್ಲೆಯ ಬಸರ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳಕ್ಕೆ ತಕ್ಷಣ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಮೃತ ದೇಹಗಳನ್ನು ಹೊರತೆಗೆಯುವಲ್ಲಿ ಸಹಕರಿಸಿದರು.
“ಕೆಚ್ಚೆದೆಯ ಯೋಧರಾದ ಹವಾಲ್ದಾರ್ ನಖತ್ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಕುಮಾರ್ ಅವರು ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದ್ದಾಗ ಹುತಾತ್ಮರಾಗಿದ್ದಕ್ಕೆ ಲೆಫ್ಟಿನೆಂಟ್ ಜನರಲ್ ಆರ್‌ಸಿ ತಿವಾರಿ, #ArmyCdrEC ಮತ್ತು ಎಲ್ಲಾ ಶ್ರೇಣಿಯ ಅಧಿಕಾರಿಗಳು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯು ದುಃಖಿತ ಕುಟುಂಬಗಳೊಂದಿಗೆ ದೃಢವಾಗಿ ನಿಂತಿದೆ” ಎಂದು ಸೇನೆಯ ಈಸ್ಟರ್ನ್ ಕಮಾಂಡ್, X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೂವರು ಯೋಧರು ಮೃತಪಟ್ಟಿದ್ದಕ್ಕೆ ಮುಖ್ಯಮಂತ್ರಿ ಪೆಮಾ ಖಂಡು ಸಂತಾಪ ಸೂಚಿಸಿದ್ದಾರೆ. "ಮೇಲ್ ಸುಬಾನ್ಸಿರಿ ಜಿಲ್ಲೆಯ ತಾಪಿ ಬಳಿ ನಡೆದ ಭೀಕರ ಅಪಘಾತದಲ್ಲಿ ಹವಾಲ್ದಾರ್ ನಖತ್ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಕುಮಾರ್ ಎಂಬ ಮೂವರು ಸಿಬ್ಬಂದಿಗಳ ಪ್ರಾಣ ಕಳೆದುಕೊಂಡಿರುವುದು ನನಗೆ ತೀವ್ರ ನೋವು ತಂದಿದೆ. ಅವರು ದೇಶಕ್ಕೆ ಸಲ್ಲಿಸಿದ ಸೇವೆ ಮತ್ತು ತ್ಯಾಗವನ್ನು ಸ್ಮರಿಸಲಾಗುವುದು" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.