ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ : ಸರಣಿ ಅಪಘಾತ
ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ ಕಾರಣದಿಂದ ಸರಣಿ ಅಪಘಾತ ಸಂಭವಿಸಿರುವ ಘಟನೆ ಎ.26ರ ಶುಕ್ರವಾರ ರಾತ್ರಿ ಇಲ್ಲಿನ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ವರದಿಯಾಗಿದೆ.
ಬೆಂಗಳೂರಿನ ಸಿಟಿ ಮಾರ್ಕೆಟ್ ಕಡೆಯಿಂದ ಗುಡ್ಡದಹಳ್ಳಿ ಮಾರ್ಗವಾಗಿ ವೇಗವಾಗಿ ಬಂದ ಆ್ಯಂಬುಲೆನ್ಸ್ ಚಾಲಕ ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ, ಗಾಬರಿಯಲ್ಲಿ ಬ್ರೇಕ್ ಬದಲು ಎಕ್ಸಲರೇಟರ್ ತುಳಿದ ಪರಿಣಾಮ ಮುಂದಿದ್ದ ಎರಡು ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ಕಾರಿಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಅದೃಷ್ಟವಶಾತ್ ಪಾರಾಗಿದ್ದು, ದ್ವಿಚಕ್ರ ವಾಹನ ಸವಾರನ ಕಾಲಿಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್ ಚಾಲಕ ಸುಮಂತ್ ಎಂಬುವನನ್ನು ನಗರದ ಬ್ಯಾಟರಾಯನಪುರ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.