ಬೆಂಗಳೂರು | ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ: ಬಿಎಂಟಿಸಿ ಕಂಡಕ್ಟರ್ ಪೊಲೀಸ್ ವಶಕ್ಕೆ
ಬೆಂಗಳೂರು: ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಿಎಂಟಿಸಿ ಬಸ್ ಕಂಡಕ್ಟರ್ ನನ್ನು ಇಲ್ಲಿನ ಸಿದ್ದಾಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಮಾ.26ರಂದು ಬಿಎಂಟಿಸಿಯ ಡಿಪೋ ಸಂಖ್ಯೆ 34ಕ್ಕೆ ಸೇರಿದ ಬಸ್‍ನಲ್ಲಿ ಸಿದ್ದಾಪುರ ವ್ಯಾಪ್ತಿಯ ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ಘಟನೆ ನಡೆದಿದ್ದು, ಕಂಡಕ್ಟರ್ ನಿಂದ ಹಲ್ಲೆಗೊಳಗಾದ ಮಹಿಳೆಯನ್ನು ತಂಝೀನಾ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಆರೋಪಿ ಹೊನ್ನಪ್ಪ ನಾಗಪ್ಪ ಅಗಸರ್ ಎಂಬಾತ ಹಲ್ಲೆಗೈದ ಕಂಡಕ್ಟರ್ ಎಂದು ತಿಳಿದುಬಂದಿದೆ.
ತಂಝೀನಾ ಇಸ್ಮಾಯಿಲ್ ಅವರು ಬಿಎಂಟಿಸಿ ಬಸ್‍ನಲ್ಲಿ ಟಿಕೆಟ್ ಕೇಳಿದ್ದಾಳೆ. ಈ ವೇಳೆ ಕಂಡಕ್ಟರ್, ಕೊಡುತ್ತೇನೆ ಇರಿ ಎಂದಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕಂಡಕ್ಟರ್, ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354ಎ, 323, 506, 509 ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಡಕ್ಟರ್ ಅಮಾನತು: ಈ ಕುರಿತು ಬಿಎಂಟಿಸಿ ಪ್ರಕಟನೆ ಹೊರಡಿಸಿದ್ದು, ‘ಘಟಕ-34(ಕೊತ್ತನೂರು ದಿಣ್ಣೆ)ರ ನಿರ್ವಾಹಕರಾಗಿರುವ ಹೊನ್ನಪ್ಪ ನಾಗಪ್ಪ ಅಗಸರ್ ಅವರು ಮಾ.26ರಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಿರುತ್ತಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಹಿನ್ನೆಲೆ ಸದರಿ ಅಂತರ್ಜಾಲದ ಸುದ್ದಿಯ ಆಧಾರದ ಮೇಲೆ ಹೊನ್ನಪ್ಪ ನಾಗಪ್ಪ ಅಗಸರ್‍ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.
‘ಮಹಿಳೆಯು ಬಿಳೇಕಲ್ಲಹಳ್ಳಿಯಲ್ಲಿ ಹತ್ತಿದ್ದರು. ಗುರಪ್ಪನಪಾಳ್ಯ ಬಂದಾಗ ನಾನು ಟಿಕೆಟ್‍ಗಳನ್ನು ಪರಿಶೀಲನೆ ನಡೆಸಿದೆ. ಆಗ ಮಹಿಳೆ ಟಿಕೆಟ್ ತೆಗೆದುಕೊಂಡಿರಲಿಲ್ಲ ಎಂಬುದು ತಿಳಿಯಿತು. ಈ ಬಗ್ಗೆ ಕೇಳಿದಾಗ, ಮಹಿಳೆಯು ನನ್ನೊಂದಿಗೆ ವಾಗ್ವಾದ ನಡೆಸಿದರು. ಮೊದಲಿಗೆ ಅವರೇ ನನ್ನ ಮೇಲೆ ಹಲ್ಲೆ ನಡೆಸಿದರು. ಎಲ್ಲ ದೃಶ್ಯವು ಬಸ್‍ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ’
ಹೊನ್ನಪ್ಪ ನಾಗಪ್ಪ ಅಗಸರ, ಬಿಎಂಟಿಸಿ ಕಂಡಕ್ಟರ್