ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು : ಭವ್ಯ ನರಸಿಂಹಮೂರ್ತಿ

Update: 2024-04-28 14:31 GMT

Photo : x/@Bhavyanmurthy

ಬೆಂಗಳೂರು: ಭಾರತದ ಇತಿಹಾಸದಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಮಾಡಿದ್ದು ಅತ್ಯಂತ ಕ್ರೌರ್ಯದ ಘಟನೆ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಹೆಣ್ಣುಮಕ್ಕಳು ಧ್ವನಿ ಇಲ್ಲದವರಾಗಿದ್ದು, ಕರ್ನಾಟಕದಲ್ಲಿರುವ ಪ್ರಧಾನಿ ಮೋದಿಯವರು ಈ ದೌರ್ಜನ್ಯದ ಬಗ್ಗೆ ಮಾತನಾಡಿಲ್ಲ. ಪ್ರಜ್ವಲ್ ರೇವಣ್ಣ ಮುಸ್ಲಿಮ್ ಆಗಿದ್ದರೆ ಪ್ರಧಾನಿ ಮಾತನಾಡುತ್ತಿದ್ದರು ಎನಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೃತ್ಯದ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು. ಒಬ್ಬ ಬಿಜೆಪಿ ನಾಯಕಿಯು ಈ ಬಗ್ಗೆ ಒಂದೂ ಮಾತನ್ನೇ ಆಡಿಲ್ಲ. ನಾಯಕರು ಬಾಯಿ ಬಿಟ್ಟಿಲ್ಲ. ತನ್ನ ಅಧಿಕಾರದ ದರ್ಪ ಬಳಸಿಕೊಂಡು ಹೀನ ಕೃತ್ಯ ಎಸಗಿರುವ ಈ ವ್ಯಕ್ತಿ ವಿರುದ್ಧ ಮೊದಲು ಮಾತನಾಡಬೇಕಿರುವುದು ಈ ದೇಶದ ಗೃಹ ಸಚಿವ ಅಮಿತ್ ಶಾ ಎಂದು ಹೇಳಿದರು.

ಹೆಣ್ಣಿಗೆ ಯಾವುದೇ ಜಾತಿ, ಧರ್ಮ ಎಂಬುದಿಲ್ಲ. ನಾವು ಹೆಣ್ಣುಮಕ್ಕಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಂತೆ ಕೇವಲ ಪಕ್ಷಪಾತಿಗಳಾಗಿ ಮಾತನಾಡುವುದಿಲ್ಲ. ನಮಗೆ ನೇಹಾ, ರುಕ್ಷನಾ ಹಾಗೂ ಈ ನೀಚ ಸಂಸದನಿಂದ ಶೋಷಣೆಗೆ ಒಳಗಾಗಿರುವ ಎಲ್ಲ ಹೆಣ್ಣುಮಕ್ಕಳ ಪರವಾಗಿ ನಮ್ಮದು ಒಂದೇ ಹೋರಾಟದ ದನಿ ಎಂದು ಅವರು ತಿಳಿಸಿದರು.

ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ಇಡೀ ದೇಶದಲ್ಲೇ ಯಾವ ಜನಪ್ರತಿನಿಧಿಯೂ ನಡೆಸದ ಕೃತ್ಯ. ಶೋಷಣೆಗೆ ಒಳಗಾಗಿರುವ ಮಹಿಳೆಯರು ದನಿ ಇಲ್ಲದ ಮಹಿಳೆಯರು. ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದರೆ ಮಾಧ್ಯಮಗಳ ಸಹಕಾರ ಬೇಕು. ದೇಶದ ಯಾವುದೇ ರಾಜಕಾರಣಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುವ ಕೃತ್ಯ ಈ ಘಟನೆಯಿಂದ ಹೋಗಬೇಕು. ಇಂದೇ ನಾವೆಲ್ಲ ದೊಡ್ಡ ಹೋರಾಟಕ್ಕೆ ನಾಂದಿ ಹಾಡಬೇಕು. ಇತಿಹಾಸ ಸೃಷ್ಟಿ ಮಾಡಬೇಕು ಭವ್ಯ ನರಸಿಂಹಮೂರ್ತಿ ಹೇಳಿದರು.

ಅತ್ಯಾಚಾರಿಗಳ ವಿರುದ್ಧ ಮೋದಿ ಒಂದು ಸಲವು ಮಾತನಾಡಿಲ್ಲ. ಬಿಜೆಪಿ ಮುಖಂಡ ದೇವರಾಜೇಗೌಡ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಡಿ ಲೈಂಗಿಕ ಹಗರಣದ ವಿಡಿಯೋಗಳು ಇವೆ ಎಂದು ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೂ, ಮೈತ್ರಿ ಮಾಡಿ ಕೊಂಡಿದ್ದು ಏಕೆ?, ಹೆಣ್ಣುಮಕ್ಕಳ ಗೌರವವನ್ನು ಲೆಕ್ಕ ಹಾಕದೆ ನೀಚ ಮನುಷ್ಯನಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ. ಅಶ್ಲೀಲ ವಿಡಿಯೋದಲ್ಲಿ ಜೆಡಿಎಸ್ ಕಾರ್ಯಕರ್ತರು ಇದ್ದಾರೆ. ಮನೆಕೆಲಸದ ಮಹಿಳೆ ಇದ್ದಾರೆ. ಇಲ್ಲಿ ರಕ್ಷಕನೆ ಭಕ್ಷಕನಾಗಿದ್ದಾನೆ ಎಂದು ಭವ್ಯ ನರಸಿಂಹಮೂರ್ತಿ ಕಿಡಿಕಾರಿದರು.

ಕಾಂಗ್ರೆಸ್ ವಕ್ತಾರೆ ಕವಿತಾರೆಡ್ಡಿ ಮಾತನಾಡಿ, ಮಾಜಿ ಪ್ರಧಾನಿ ಕುಟುಂಬದ ಸದಸ್ಯ ಪ್ರಜ್ವಲ್ ರೇವಣ್ಣ ಮಾಡಿರುವ ಈ ಹೀನ ಕೃತ್ಯ ಖಂಡನಿಯ. ಇಂತಹ ಕುಟುಂಬದ ಸದಸ್ಯ ಯಾವುದೇ ಕಾನೂನಿನ ಭಯ ಇಲ್ಲದೆ ಜರ್ಮನಿಗೆ ಹಾರಿ ಹೋಗಿದ್ದಾರೆ. ಇವರಿಂದ ಶೋಷಣೆಗೆ ಒಳಗಾದ ಮಹಿಳೆಯರನ್ನು ಹೇಗೆ ರಕ್ಷಣೆ ಮಾಡುವುದು ಎನ್ನುವುದೇ ಚಿಂತೆಯಾಗಿದೆ ಎಂದರು.

ಸಣ್ಣ ವಿಚಾರಕ್ಕೂ ಮಾತನಾಡುವ ಪ್ರಧಾನಿ ಮೋದಿಯವರು ತಮ್ಮ ಮಿತ್ರ ಪಕ್ಷದ ಲೋಕಸಭಾ ಅಭ್ಯರ್ಥಿಯ ಕೃತ್ಯದ ಬಗ್ಗೆ ಮಾತನಾಡಬೇಕು. ರಾಜ್ಯಕ್ಕೆ ಬರುತ್ತಿರುವ ಮೋದಿ ಅವರನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಸ್ವಯಂ ಘೋಷಿತ ವಿರೋಧ ಪಕ್ಷದ ನಾಯಕ ಯತ್ನಾಳ್, ಆರ್.ಅಶೋಕ್ ಈಗ ಎಲ್ಲಿ ಹೋಗಿದ್ದಾರೆ. ಇದು ರಾಜಕೀಯ ವಿಚಾರವಲ್ಲ ದೇಶದ ಮರ್ಯಾದೆಯ ವಿಚಾರ. ನಮ್ಮ ಹೆಣ್ಣುಮಕ್ಕಳ ವಿಚಾರ. ಮಹಿಳೆಯ ಪರವಾಗಿ ದನಿ ಎತ್ತಲು ನಿಮಗೆ ಏನಾಗಿದೆ ಎಂದು ಕವಿತಾರೆಡ್ಡಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News