ಕಲಬುರಗಿ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಕಲಬುರಗಿ : ವಕ್ಫ್ ತಿದ್ದುಪಡಿ ಮಸೂದೆ 2024 ವಿರೋಧಿಸಿ ಕೈಗೆ ಕಪ್ಪು ಪಟ್ಟಿಗಳನ್ನು ಧರಿಸಿ ನಗರದ ಹಿದಾಯತ್ ಸೆಂಟರ್ ಮಸೀದಿ ಸೇರಿದಂತೆ ಜಿಲ್ಲೆಯ ಬಹುತೇಕ ಮಸೀದಿಗಳ ಮುಂದೆ ಮುಸ್ಲಿಮರು ಶಾಂತಿಯುತ, ಮೌನ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಲಬುರಗಿ ಜಮಾಅತೆ-ಇ-ಇಸ್ಲಾಮಿಯ ಅಮೀರ್ ಜಾಕಿರ್ ಹುಸೇನ್ ಭಾಗವಹಿಸಿ, ಸರಕಾರವು ಈ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆ 2024 ಭಾರತದ ನಾಗರಿಕರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ದೇಶದ ನ್ಯಾಯವನ್ನು ಪ್ರೀತಿಸುವ ಸಮಾನ ಮನಸ್ಕರು ಮಸೂದೆಯನ್ನು ವಿರೋಧಿಸಬೇಕೆಂದು ಮನವಿ ಮಾಡಿದರು.
ನಗರದ ಮುಸ್ಲಿಂ ಚೌಕ್ ಮತ್ತು ಮಿಜಗುರಿಯ ಸಾಲೇಹಿನ್ ಮಸೀದಿಯ ಸೇರಿದಂತೆ ನಗರದ ಬಹುತೇಕ ಮಸೀದಿಗಳಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆದೇಶದಂತೆ ಶುಕ್ರವಾರದ ಪ್ರಾರ್ಥನೆ ನಂತರ ಮಸೀದಿಯ ಮುಂದೆ ನಿಂತು ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡು ಮೌನ ಪ್ರತಿಭಟನೆಯ ಮೂಲಕ ಮಸೂದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಧಾರ್ಮಿಕ ವಿದ್ವಾಂಸರು, ಮುಖಂಡರು, ನಾಯಕರು ಸೇರಿದಂತೆ ನಾಗರಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.