‘ಗುರಿ-ಒಲಂಪಿಕ್ಸ್ ಪದಕ’ 60 ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ.ಪ್ರೋತ್ಸಾಹ ಧನ

Update: 2025-03-07 19:27 IST
‘ಗುರಿ-ಒಲಂಪಿಕ್ಸ್ ಪದಕ’ 60 ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ.ಪ್ರೋತ್ಸಾಹ ಧನ
  • whatsapp icon

ಬೆಂಗಳೂರು : ಗುರಿ-ಒಲಿಂಪಿಕ್ಸ್ ಪದಕ ಯೋಜನೆಯಡಿ ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ, ಒಲಂಪಿಕ್ಸ್-2028ಕ್ಕೆ ತಯಾರಿ ಕೈಗೊಳ್ಳಲು ವಾರ್ಷಿಕ ತಲಾ 10 ಲಕ್ಷ ರೂ.ನಂತೆ ಪ್ರೋತ್ಸಾಹ ಧನವನ್ನು ಮೂರು ವರ್ಷ ನೀಡಲಾಗುವುದು. ಈ ವರ್ಷಕ್ಕೆ 6 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರೂ. ನಂತೆ ಒಟ್ಟು 6 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿವೇಶನ ಲಭ್ಯವಿರುವ 12 ತಾಲೂಕು ಕೇಂದ್ರಗಳಲ್ಲಿ ತಲಾ 2 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ ಒಟ್ಟು 12 ಕೋಟಿ ರೂ. ಒದಗಿಸಲಾಗುವುದು. ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲೂಕು ಕ್ರೀಡಾಂಗಣವನ್ನು ಆರು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಭ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಲಾಗುವುದು. 2025-26 ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 2 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 3 ಕೋಟಿ ರೂ. ಒದಗಿಸಲಾಗುವುದು. ಯಾದಗಿರಿಯ ಶಹಾಪುರದಲ್ಲಿ ಸುಸಜ್ಜಿತವಾದ ಕ್ರೀಡಾ ವಸತಿ ಶಾಲೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗುವುದು. ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳವನ್ನು ಹೀಟಿಂಗ್ ಮತ್ತು ಡೈವಿಂಗ್ ಪೂಲ್ ವ್ಯವಸ್ಥೆಗಳನ್ನೊಳಗೊಂಡು ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಚಾಮರಾಜನಗರದಲ್ಲಿ ಒಲಂಪಿಕ್ಸ್ ಮಾದರಿಯ (50 ಮೀಟರ್) ಈಜುಕೊಳವನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರೂ. ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗುವಂತೆ ಶಾಲಾ-ಕಾಲೇಜುಗಳ (ವೃತ್ತಿಪರ ಕಾಲೇಜುಗಳು ಸೇರಿದಂತೆ) ವಾರ್ಷಿಕ ಹಾಜರಾತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳಿಗೆ ಶೇ.15 ರಷ್ಟು ಹಾಗೂ ಅಂತರ್ ರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು. ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ.5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ತಲಾ 5 ಲಕ್ಷ ರೂ. ವರೆಗೆ ನೆರವು ನೀಡಲಾಗುವುದು. ನಿವೃತ್ತಿ ಹೊಂದಿದ ಕುಸ್ತಿಪಟುಗಳಿಗೆ ನೀಡಲಾಗುತ್ತಿರುವ ಮಾಸಾಶನವನ್ನು, ಅಂತರ್‍ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ 6,000 ರೂ.ಗಳಿಗೆ, ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ 5,000 ರೂ.ಗಳಿಗೆ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 4,500 ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಲಂಪಿಕ್ಸ್, ಕಾಮನ್ವೆಲ್ತ್ ಹಾಗೂ ಏಷಿಯನ್ ಗೇಮ್ಸ್‍ಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳ ಸೇವೆಯನ್ನು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News