ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಆರೋಪಿಗಳಿಗೆ ರಾಜ್ಯ ಸರಕಾರ ಕ್ಲೀನ್ ಚೀಟ್ ನೀಡಲು ಹವಣಿಸುತ್ತಿದೆ : ಬಾಲನ್

Update: 2024-05-03 13:52 GMT

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣನ ಲೈಂಗಿಕ ಹಗರಣದಲ್ಲಿ ಆರೋಪಿಗಳಿಗೆ ರಾಜ್ಯ ಸರಕಾರವು ಕ್ಲೀನ್ ಚೀಟ್ ನೀಡಲು ಹವಣಿಸುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಬಾಲನ್ ಆರೋಪಿಸಿದ್ದಾರೆ.

ಶುಕ್ರವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಇಂದು ಬೆಳಗ್ಗೆ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ರಹಿತ ಆರೋಪಗಳು ಅವರ ಮೇಲಿಲ್ಲ, ಅಂತಹ ಸೆಕ್ಷನ್‍ಗಳನ್ನು ಹಾಕುವುದಿಲ್ಲ ಎಂದು ರಾಜ್ಯ ಸರಕಾರದ ವಕೀಲರು ರೇವಣ್ಣನವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆʼ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ 3976 ವಿಡಿಯೊ ಕ್ಲಿಪ್‍ಗಳಿವೆ ಎಂದು ಹೇಳಲಾಗುತ್ತಿದೆ. ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರೆಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಪ್ರತ್ಯೇಕವಾಗಿ ಮುನ್ನೂರು ಪ್ರಕರಣಗಳನ್ನು ಪ್ರಜ್ವಲ್ ವಿರುದ್ಧ ದಾಖಲಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಒಂದು ದಿನಕ್ಕೆ ಒಂದು ಕ್ಲಿಪ್ ಎಂದರೆ ಒಂಬತ್ತು ವರ್ಷಗಳ ಕಾಲ ಈ ಕೃತ್ಯ ನಡೆದಿವೆ. ಯಾವ ಹೋಟೆಲ್‍ನಲ್ಲಿ, ಯಾವ ಮನೆಯಲ್ಲಿ, ಯಾವ ರೆಸಾರ್ಟ್‍ನಲ್ಲಿ ಈ ವಿಡಿಯೊಗಳಾಗಿವೆ ಎಂಬುದನ್ನು ತನಿಖೆ ಮಾಡಬೇಕು. ಒಂದೊಂದು ವಿಡಿಯೊ ಮೇಲೂ ಒಂದೊಂದು ಕೇಸ್ ದಾಖಲಿಸಬೇಕು ಎಂದು ಅವರು ಹೇಳಿದರು.

ಪ್ರಕರಣ ಬೆಳಕಿಗೆ ಬಂದ ಕೂಡಲೇ ಬಿಗಿಯಾದ ಸೆಕ್ಷನ್‍ಗಳಡಿ ಕೇಸ್ ದಾಖಲಿಸಲಿಲ್ಲ. ಈಗ ಸೆಕ್ಷನ್ 376 ಹಾಕಿದ್ದಾರೆಂದು ಗೊತ್ತಾಗಿದೆ, ಅಂದರೆ ಇದು ರೇಪ್ ಕೇಸ್. ಒಂದಲ್ಲ, ಮುನ್ನೂರು ಕೇಸ್ ಆಗಬೇಕು. ಡಿಎನ್‍ಎಗೆ ಸಂಬಂಧಿಸಿದ ಸಂಗತಿಗಳನ್ನು ಕಲೆಹಾಕಬೇಕಿದೆ. ಬೆವರು, ಮೂತ್ರ, ರಕ್ತ, ದೇಹದ ಯಾವುದೇ ಭಾಗದ ಸಾಕ್ಷಿಗಳನ್ನು ಸಂತ್ರಸ್ತರಿಂದಲೂ, ಆರೋಪಿಯಿಂದಲೂ ಕಲೆಕ್ಟ್ ಮಾಡಬೇಕು. ಹಾಗೆಯೇ ಡಿಜಿಟಲ್ ಎವಿಡೆನ್ಸ್ ಸಂಗ್ರಹಿಸಬೇಕು ಎಂದು ಅವರು ತಿಳಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಮೂರು ತಿಂಗಳ ಹಿಂದೆಯೇ ಹೊರಗೆ ಬಂದಿತ್ತು. ವಕೀಲರ ಕೈಗೆ ವಿಡಿಯೊಗಳು ಹೋಗಿದ್ದವು. ಅವರು ತಕ್ಷಣ ಪೊಲೀಸರಿಗೆ ವರದಿ ಕೊಡಬೇಕಿತ್ತು. ಮೊಕದ್ದಮೆ ಹೂಡಬೇಕಿತ್ತು. ಆದರೆ ಮೂರು ತಿಂಗಳು ತಡವಾಗಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಪೆನ್‍ಡ್ರೈವ್, ಸಿಡಿ ಇದ್ಯಾವುದನ್ನೂ ಬಿಡುಗಡೆ ಮಾಡಬಾರದೆಂದು ಪ್ರಜ್ವಲ್ ರೇವಣ್ಣನವರು ಕೋರ್ಟ್‍ನಲ್ಲಿ ತಡೆಯಾಜ್ಞೆ ತೆಗೆದುಕೊಂಡಿದ್ದರು. ಇವರೊಬ್ಬರೇ ಅಲ್ಲ. ರಾಜ್ಯದಲ್ಲಿ ಒಟ್ಟು ಆರು ನೂರು ತಡೆಯಾಜ್ಞೆಗಳಿವೆ ಎಂದು ಬಾಲನ್ ಮಾಹಿತಿ ನೀಡಿದರು.

ಈಶ್ವರಪ್ಪನ ಮಗ, ಲೇಔಟ್ ಕೃಷ್ಣಪ್ಪನ ಮಗ ಪ್ರಿಯ ಕೃಷ್ಣ ಅವರೂ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಈ ರೀತಿಯ ಆರು ನೂರು ಆರ್ಡರ್ ಗಳಿವೆ. ತಡೆಯಾಜ್ಞೆ ತೆಗೆದುಕೊಂಡಿರುವ ಎಲ್ಲರೂ ಎಂಎಲ್‍ಎ, ಎಂಪಿ., ಮಂತ್ರಿಗಳು ಆಗಿದ್ದಾರೆ. ನ್ಯಾಯಾಲಯಗಳೂ ಸುಲಭವಾಗಿ ತಡೆಯಾಜ್ಞೆ ಕೊಡುತ್ತವೆ. ಎಲ್ಲ ಸ್ಟೇಗಳನ್ನು ಹೈಕೋರ್ಟ್ ರದ್ದು ಮಾಡಬೇಕು. ಜನರಿಗೆ ಮಾಹಿತಿ ತಿಳಿಯಬೇಕು ಎಂದು ಅವರು ಒತ್ತಾಯಿಸಿದರು.

ವಕೀಲ ಹರಿರಾಮ್ ಮಾತನಾಡಿ, ನೊಂದ ಮಹಿಳೆಯರು ಹೆಚ್ಚಿನದಾಗಿ ಎಸ್‍ಸಿ, ಎಸ್‍ಟಿ, ಒಬಿಸಿ ಸಮುದಾಯಕ್ಕೆ ಸೇರಿರುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳ ಎಷ್ಟು ಮಹಿಳೆಯರಿದ್ದಾರೆ, ಅಲ್ಪಸಂಖ್ಯಾತರು ಎಷ್ಟು ಮಂದಿ ಇದ್ದಾರೆ, ಬಾಲಕಿಯರು ಎಷ್ಟು ಮಂದಿ ಇದ್ದಾರೆಂದು ಲೆಕ್ಕ ಹಾಕಬೇಕು. ಪೋಕ್ಸೋ ಮತ್ತು ಎಸ್‍ಸಿ/ಎಸ್‍ಟಿ ಅಟ್ರಾಸಿಟಿ ಆಕ್ಟ್ ವ್ಯಾಪ್ತಿಯಲ್ಲೂ ಪ್ರಕರಣವನ್ನು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.

ನಮ್ಮಲ್ಲಿ ಕಾನೂನು ವ್ಯವಸ್ಥೆ ಇದ್ದು, ಇದರ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ಮೇಲೆಯೂ ಎಫ್‍ಐಆರ್ ದಾಖಲಾಗಿದೆ. ಸಾಧಾರಣ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಾದರೆ, ಪೋಲಿಸರು ಅಪರಾಧಿಗಳನ್ನು ಎಳೆದುಕೊಂಡು ಹೋಗುತ್ತಾರೆ. ಆದರೆ ಜನಪ್ರತಿನಿಧಿಗಳನ್ನು ಏಕೆ ಎಳದುಕೊಂಡು ಹೋಗುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಆದರೆ ಮಾನಗೆಟ್ಟ ಕೇಂದ್ರ ಸರಕಾರ ಆರೋಪಿಗೆ ಡಿಪ್ಲೊಮೇಟಿಕ್‌ ಪಾಸ್ ನೀಡಿ ಹೊರ ದೇಶಕ್ಕೆ ಕಳುಹಿಸಿದೆ. ಅದನ್ನು ಕೂಡಲೇ ರದ್ದುಪಡಿಸಿ ಅವರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.

ಒಬ್ಬ ಸಂಸದ ಆದವನು ಮಹಿಳಾ ಪೋಲಿಸ್ ಮೇಲೆ ರೇಪ್ ಮಾಡಿದ್ದಾರೆ. ಆದರೆ ಪೋಲಿಸರು ಮಾತ್ರ ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಇದು ಪೋಲಿಸರ ನಾಚಿಗೆಗೇಡಿನ ವಿಷಯವಾಗಿದೆ ಎಂದು ಅವರು ಖಂಡಿಸಿದರು. ನಟ ಚೇತನ್ ಅಹಿಂಸಾ, ಬಿ.ಆರ್.ಭಾಸ್ಕರ ಪ್ರಸಾದ್, ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಲೈಂಗಿಕ ಹಗರಣದ ಕುರಿತಾಗಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮುಂದೆ ನಾಟಕವಾಡುತ್ತಿದ್ದಾರೆ ಎಮದು ಅನಿಸುತ್ತಿದೆ. ರಾಜ್ಯ ಸರಕಾರಕ್ಕೆ ಬದ್ಧತೆ ಇದ್ದರೆ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು’

ಎ. ಹರಿರಾಮ್, ಹೋರಾಟಗಾರ

ಹಾಸನದಲ್ಲಿ ಪ್ರತ್ಯೇಕ ರಾಜ್ಯಾಂಗ: ‘ಹೊಳೆನರಸೀಪುರ, ಹಾಸನದಲ್ಲಿ ಪ್ರತ್ಯೇಕವಾಗಿ ರಾಜ್ಯಾಂಗ ಅಸ್ಥಿತ್ವದಲ್ಲಿದೆ ಅಲ್ಲಿ ರೇವಣ್ಣ ಕುಟುಂಬದವರೇ ರಾಜರು, ಮಹಾಪ್ರಭುಗಳು. ಆ ಭಾಗದಲ್ಲಿ ಪೊಲೀಸ್ ಇಲಾಖೆಯೂ ಅವರದ್ದೇ, ಜಿಲ್ಲಾಧಿಕಾರಿಯೂ ಅವರಿಗೆ ಬೇಕಾದವರೇ, ಅರಣ್ಯ ಇಲಾಖೆಯೂ ಅವರದ್ದೇ, ಜಮೀನುಗಳೂ ಅವರದ್ದೇ, ಊರಿನ ಹೆಣ್ಣುಮಕ್ಕಳೆಲ್ಲ ಅವರಿಗೆಯೇ ಸೇರಿದವರು. ಈ ರೀತಿ ಮಹಾಪ್ರಭು ಆಗಿದ್ದಾರೆ. ಈ ರಾಜ್ಯಾಂಗದಲ್ಲಿ ಮಂತ್ರಿ ಯಾರು? ಕಂತ್ರಿ ಯಾರು? ಎಂಬುದನ್ನೆಲ್ಲ ಪರಿಗಣಿಸಿ ಕೇಸ್ ಹಾಕಬೇಕು’

ಬಾಲನ್, ಹೈಕೋರ್ಟ್ ವಕೀಲ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News