ಲೆಹರ್‌ ಸಿಂಗ್ ಅವರು ʼಸಾಚಾರ್ ವರದಿʼ ಜಾರಿಗೊಳಿಸುವಂತೆ ಲೋಕಸಭಾಧ್ಯಕ್ಷರನ್ನು ಒತ್ತಾಯಿಸಲಿ : ರಮೇಶ್ ಬಾಬು

Update: 2025-03-08 19:52 IST
ಲೆಹರ್‌ ಸಿಂಗ್ ಅವರು ʼಸಾಚಾರ್ ವರದಿʼ ಜಾರಿಗೊಳಿಸುವಂತೆ ಲೋಕಸಭಾಧ್ಯಕ್ಷರನ್ನು ಒತ್ತಾಯಿಸಲಿ : ರಮೇಶ್ ಬಾಬು

ರಮೇಶ್ ಬಾಬು

  • whatsapp icon

ಬೆಂಗಳೂರು: ರಾಜಸ್ಥಾನಿ ಲೆಹರ್ ಸಿಂಗ್ ರಾಜ್ಯಸಭಾ ಸದಸ್ಯರಾಗಿರುವುದರಿಂದ ಸಾಚಾರ್ ಕಮಿಟಿಯ ವರದಿಯು ಉಚಿತವಾಗಿ ಸಿಗಬಹುದು. ಲೋಕಸಭಾಧ್ಯಕ್ಷ, ಪಕ್ಷದ ಅಧ್ಯಕ್ಷರಿಗೆ ಮತ್ತು ಪ್ರಧಾನ ಮಂತ್ರಿಗೆ ವರದಿಯ ಪ್ರತಿ ನೀಡಿ ಸಾರ್ವಜನಿಕರ ಮತ್ತು ಮುಸ್ಲಿಮರ ಹಿತಾಸಕ್ತಿಯ ಕಾರಣಕ್ಕಾಗಿ ‘ಸಾಚಾರ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ’ ಒತ್ತಾಯ ಮಾಡಬೇಕು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೆಹರ್ ಸಿಂಗ್ ಸುದ್ದಿಗೋಷ್ಠಿಯ ಮೂಲಕ ಕಾಂಗ್ರೆಸ್ ಸರಕಾರದ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಜಸ್ಟೀಸ್ ಆನಂದ್‍ರ ವರದಿಯನ್ನು ಲೋಕಸಭಾ ಅಧ್ಯಕ್ಷರಿಗೆ, ಕೇಂದ್ರದ ಸಚಿವರಿಗೆ ಮತ್ತು ಜಂಟಿ ಲೋಕಸಭಾ ಸಮಿತಿ (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ)ಯ ಮುಂದೆ ಮಂಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರ ಜಸ್ಟೀಸ್ ಆನಂದ್ ಆಯೋಗದ ವಕ್ಫ್ ಆಸ್ತಿಗೆ ಸಂಬಂಧಪಟ್ಟಂತಹ ವರದಿಯನ್ನು ನಿಷ್ಕ್ರಿಯ ಗೊಳಿಸಿದೆ ಎಂದು ಆರೋಪಿಸಿರುವ ಇವರು, ಪ್ರಜ್ಞಾಪೂರ್ವಕವಾಗಿ ಕೇಂದ್ರ ಸರಕಾರ ಸಾಚಾರ್ ಕಮಿಟಿಯ ವರದಿ ಮೂಲೆಗೆ ತಳ್ಳಿರುವ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಯಾವಾಗ ಈ ದೇಶದಲ್ಲಿ ಜಸ್ಟೀಸ್ ಸಾಚಾರ್ ಕಮಿಟಿ ವರದಿ ಲೋಕಸಭೆಯಲ್ಲಿ ಮಂಡನೆ ಆಯಿತು, ಯಾವ ಕಾರಣಕ್ಕಾಗಿ ಬಿಜೆಪಿ ಸರಕಾರ ಇದುವರಿಗೆ ಸಾಚಾರ್ ಕಮಿಟಿ ವರದಿ ಜಾರಿಗೆ ತರುವ ಪ್ರಯತ್ನ ಮಾಡಿಲ್ಲ ಎಂಬುದನ್ನು ಹೇಳಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಸರಕಾರದ ಉದ್ದೇಶಿತ ವಕ್ಫ್‌ ಕಾಯ್ದೆಯನ್ನು ವಿರೋಧಿಸಿ ಸದನದಲ್ಲಿ ಗೊತ್ತುವಳಿಯನ್ನು ಅಂಗೀಕರಿಸುತ್ತಾರೆ ಎಂಬ ಕಾರಣದಿಂದ ಈ ದಿನ ಜಸ್ಟೀಸ್ ಆನಂದ್ ವರದಿ ಇಟ್ಟುಕೊಂಡು ಲೆಹರ್ ಸಿಂಗ್ ನಾಟಕ ಆಡಲು ಪ್ರಯತ್ನ ಪಡುತ್ತಿದ್ದಾರೆ. ಮುಸಲ್ಮಾನ್ ಜನಾಂಗದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಯಾವ ಕಾರಣಕ್ಕೆ ಒಬ್ಬ ರಾಜ್ಯಸಭಾ ಸದಸ್ಯರಾಗಿ ಸಾಚಾರ್ ಕಮಿಟಿಯ ವರದಿ ಜಾರಿಗೊಳಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿಲ್ಲ ಮತ್ತು ಹಾಕುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಲ್ಪಸಂಖ್ಯಾತರಾದ ಲೆಹರ್ ಸಿಂಗ್ ಇನ್ನೊಂದು ಅಲ್ಪಸಂಖ್ಯಾತರ ಸಮುದಾಯದ ಬಗ್ಗೆ ಇಟ್ಟಿರುವ ಕಾಳಜಿಯನ್ನು ಪ್ರಶಂಸಿರುತ್ತೇವೆ. ಆದರೆ, ಈ ಕಾಳಜಿ ರಾಜಕೀಯ ಕಾರಣಕ್ಕೆ ಸೀಮಿತವಾಗದೆ, ತಂತ್ರಗಾರಿಕೆ, ಶಾಮೀಲುತನದ ಮಾತುಗಳನ್ನು ಬಿಟ್ಟು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಈ ನೆಲದ, ಈ ಜಲದ ರಕ್ಷಣೆಗಾಗಿ ಕಿಂಚಿತ್ತಾದರು ಗೌರವ ಸಲ್ಲಿಸಬೇಕೆಂದು ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News