ವಿಜ್ಞಾನ ಕೇಂದ್ರ ಹಾಗೂ ತಾರಾಲಯ; ಏಕರೂಪ ವಿನ್ಯಾಸ ರಚನೆಗೆ ತಾಂತ್ರಿಕ ಸಮಿತಿ: ಸಚಿವ ಭೋಸರಾಜು

Update: 2023-12-26 17:14 GMT

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಉಪ ವಿಜ್ಞಾನ ಕೇಂದ್ರಗಳು ಹಾಗೂ ತಾರಾಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಏಕ ರೂಪದ ವಿನ್ಯಾಸ ರಚನೆಗೆ ತಾಂತ್ರಿಕ ಸಮಿತಿಯನ್ನು ರಚಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಕರ್ನಾಟಕ ವಿಜ್ಞಾನ ಪ್ರೋತ್ಸಾಹಕ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನ ನಿರ್ಮಿಸಲಾಗಿದೆ. ಅಲ್ಲದೇ, ಇನ್ನು ಕೆಲವು ಜಿಲ್ಲೆಗಳಲ್ಲಿ ಉಪ ಪ್ರಾದೇಶಿಕ ಕೇಂದ್ರಗಳು ಹಾಗೂ ತಾರಾಲಯಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗಿದೆ ಎಂದರು.

ಆದರೆ, ಅನುಮತಿ ದೊರಕಿರುವ ಹಲವಾರು ಕೇಂದ್ರಗಳಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅವುಗಳ ವಿನ್ಯಾಸ ಅಂತಿಮಗೊಳ್ಳದೇ ಇರುವುದು. ಈ ಹಿನ್ನಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಹಾಗೂ ತಾರಾಲಯಗಳ ನಿರ್ಮಾಣಕ್ಕೆ ಏಕರೂಪ ವಿನ್ಯಾಸವನ್ನ ಅಂತಿಮಗೊಳಿಸುವುದು ಸೂಕ್ತವಾಗಿದೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಹಾಗೂ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವಂತಹ ವಿನ್ಯಾಸ ರಚನೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಏಕರೂಪ ವಿನ್ಯಾಸವನ್ನ ತಯಾರು ಮಾಡಲು ತಾಂತ್ರಿಕ ಸಮಿತಿಯನ್ನು ರಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ರಾಯಚೂರು ಹಾಗೂ ಯಾದಗಿರಿಯಲ್ಲಿ ರಚಿಸಲು ಉದ್ದೇಶಿಸಲಾಗಿರುವ ಉಪ ವಿಜ್ಞಾನ ಕೇಂದ್ರಗಳಿಗೆ ಕೇಂದ್ರ ಸರಕಾರದ ತಂಡ ಭೇಟಿ ನೀಡಿ ತಮ್ಮ ಒಪ್ಪಿಗೆ ಸೂಚಿಸಿದೆ. ಚಿಕ್ಕಮಗಳೂರು ಉಪ ವಿಜ್ಞಾನ ಕೇಂದ್ರ ಹಾಗೂ ತಾರಾಲಯಕ್ಕೆ ಕೇಂದ್ರ ತಂಡ ಜನವರಿ ತಿಂಗಳಲ್ಲಿ ಭೇಟಿ ನೀಡಲಿದೆ ಎಂದು ಭೋಸರಾಜು ಹೇಳಿದರು.

ಈ ವಿಜ್ಞಾನ ಕೇಂದ್ರಗಳ ನಿರ್ಮಾಣ ಕಾರ್ಯ ರಾಜ್ಯ ಮತ್ತು ಕೇಂದ್ರ ಸರಕಾರದ ಜಂಟಿ ಅನುದಾನದಲ್ಲಿ ನಡೆಯಲಿದ್ದು, ಈ ಬಗ್ಗೆ ಒಡಂಬಡಿಕೆ ಬಾಕಿಯಿದೆ. ಒಡಂಬಡಿಕೆಯ ನಂತರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಒಡಂಬಡಿಕೆಯ ಬಗ್ಗೆ ಕೇಂದ್ರ ಸರಕಾರದೊಂದಿಗೆ ಸಂವಹನ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಕರ್ನಾಟಕ ರಿಸರ್ಚ್ ಫೌಂಡೇಶನ್ ಸ್ಥಾಪನೆಗೆ ಈಗಾಗಲೆ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. 2008 ರಲ್ಲಿ ಪ್ರಾರಂಭಿಸಲಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ವನ್ನು ಈ ಫೌಂಡೇಶನ್ ಅಡಿಯಲ್ಲಿ ತರಲಾಗುವುದು. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ರಿಸರ್ಚ್ ಸೆಲ್‍ಗಳನ್ನು ರಚಿಸಲಾಗುವುದು. ಈ ಸೆಲ್‍ಗಳ ಅಡಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭೋಸರಾಜು ತಿಳಿಸಿದರು.

ಖಗೋಳಶಾಸ್ತ್ರ ಹಾಗೂ ವಿಜ್ಞಾನ, ತಂತ್ರಜ್ಞಾನ, ಎಂಜಿನೀಯರಿಂಗ್ ಮತ್ತು ಗಣಿತಶಾಸ್ತ್ರ ಆಧಾರಿತ ಶಿಕ್ಷಣವನ್ನು ಉತ್ತೇಜಿಸಲು ತಾರಾಲಯಗಳ ಸ್ಥಾಪನೆ ಮಾಡಲಾಗಿದೆ. ಕಳೆದ ಆಯವ್ಯಯದಲ್ಲಿ ಘೋಷಿಸಿದ್ದಂತೆ 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2 ಪ್ರಾದೇಶಿಕ ಹಾಗೂ 4 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಉನ್ನತೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರಿನಲ್ಲಿ ತಲಾ 50 ಲಕ್ಷ ರೂ.ಗಳ ವೆಚ್ಚದಲ್ಲಿ, ಡಾ.ಎಚ್.ಎನ್.ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಚಿಕ್ಕಬಳ್ಳಾಪುರ, ಬಳ್ಳಾರಿ, ಕಾರವಾರ ಮತ್ತು ಬೀದರ್ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ತಲಾ 25 ಲಕ್ಷ ರೂ.ಗಳ ವೆಚ್ಚದಲ್ಲಿ ಉನ್ನತೀಕರಣ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಮಾಲಪಾಟಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News