ಎಫ್ಐಆರ್ ರದ್ದು ಕೋರಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.3ಕ್ಕೆ ಮುಂದೂಡಿಕೆ

Update: 2024-05-31 09:47 GMT

ಬೆಂಗಳೂರು, ಮೇ 31: ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯ ಕುರಿತು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ಅರ್ಜಿ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಪ್ರಕರಣದಲ್ಲಿ ಅರ್ಜಿದಾರ ರೇವಣ್ಣ ರ ಪಾತ್ರ ಇಲ್ಲ. ಅಪಹರಣ ಮಾಡಬೇಕಾದಲ್ಲಿ ಬೆದರಿಕೆ ಹಾಕಬೇಕಾಗುತ್ತದೆ. ಈ ಪ್ರಕರಣದಲ್ಲಿ ಆ ರೀತಿಯ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಎಫ್ಐಆರ್ ದಾಖಲಿಸಿರುವುದೇ ಕಾನೂನುಬಾಹಿರ. ಆದ್ದರಿಂದ ಎಫ್ಐಆರ್ ರದ್ದುಪಡಿಸಬೇಕು' ಎಂದು ಮನವಿ ಮಾಡಿದರು.

ಸತೀಶ್ ಬಾಬಣ್ಣ ಎಂಬುವರು ಹತ್ತಾರು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಅವರಿಗೆ ರೇವಣ್ಣ ಯಾವುದೇ ಸೂಚನೆ ನೀಡಿಲ್ಲ. ಜೊತೆಗೆ, ಸಂತ್ರಸ್ತೆಯನ್ನು ಅರ್ಜಿದಾರರ ವಶದಲ್ಲಿಯೂ ಇಟ್ಟುಕೊಂಡಿಲ್ಲ. ಎಲ್ಲವೂ ಸುಳ್ಳು ಆರೋಪವಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಜೊತೆಗೆ, ದೂರಿನಲ್ಲಿ ತಿಳಿಸಿರುವಂತೆ, ರೇವಣ್ಣ ಹೇಳಿದ್ದಾರೆ ಎಂದು ತಿಳಿಸಿ ಸತೀಶ್ ಬಾಬಣ್ಣ ದೂರುದಾರನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂಬುದಾಗಿದೆ. ಆದರೆ, ಅರ್ಜಿದಾರರಾದ ಎಚ್.ಡಿ.ರೇವಣ್ಣ ನೇರವಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಸತೀಶ್ ಬಾಬಣ್ಣ ಹೇಳಿದ್ದಾರೆ ಎಂಬುದಾಗಿದೆ. ಆದರೆ, ರೇವಣ್ಣ ಹೇಳಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರದ್ಧದ ಪ್ರಕರಣ ದಾಖಲಿಸಿರುವುದು ಕಾನೂನುಬಾಹಿರವಾಗಿದ್ದು ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದರು.

ಪ್ರಕರಣದಲ್ಲಿ ಅಪ್ಪ, ಅಮ್ಮ ಮತ್ತು ಮಗನನ್ನು ವಶದಲ್ಲಿಟ್ಟುಕೊಳ್ಳಲು ಎಸ್ಐಟಿ ಬಯಸಿದೆ. ಆರೋಪಿ ಪ್ರಜ್ವಲ್ ತಾನೇ ಹಾಜರಾಗುತ್ತೇನೆ ಎಂದು ತಿಳಿಸಿದ್ದರೂ, ವಿಮಾನ ನಿಲ್ದಾಣದಲ್ಲಿ ಪೊಲೀಸರನ್ನು ಜಮಾಯಿಸಿ ನಾಟಕ ಪ್ರದರ್ಶನ ಮಾಡಿಸಲಾಗಿದೆ ಎಂದು ನಾಗೇಶ್ ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News