ಬೀದರ್ | ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರ ಚುನಾವಣೆಗೆ ದಿನಾಂಕ ನಿಗದಿ
ಬೀದರ್ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರೊ.ಬಸವರಾಜ್ ಸ್ವಾಮಿ ತಿಳಿಸಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಚುನಾವಣಾವಧಿಕಾರಿಯ ಆದೇಶದ ಮೇರೆಗೆ ಡಿ.21 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.
ಡಿ.21 ರಂದು ಚುನಾವಣಾ ದಿನಾಂಕ ಮಾರ್ಪಡಿಸಿದ ಪರಿಷ್ಕೃತ ವೇಳಾಪಟ್ಟಿ ಬಗ್ಗೆ ವಿವರಣೆ ನೀಡಿರುವ ಅವರು, ಈ ಚುನಾವಣೆಯು ಡಿ.4ರಂದು ನಡೆಯಬೇಕಾಗಿತ್ತು. ಕರ್ನಾಟಕ ಉಚ್ಛ ನ್ಯಾಯಾಲಯ ಕಲಬುರಗಿ ವಿಭಾಗೀಯ ಪೀಠದ ಡಬ್ಲೂ.ಪಿ. ಸಂಖ್ಯೆ 203405/2004 ರ ಆದೇಶದ ಮೇರೆಗೆ 2024-29ನೇ ಅವಧಿಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೀದರ್ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಚುನಾವಣೆಗೆ ಮಧ್ಯಂತರ ಆದೇಶದಲ್ಲಿ ಈ ತಿಂಗಳ 3ರಂದು ನೀಡಿದ ತಡೆಯಾಜ್ಞೆಯನ್ನು ಡಿ.9 ರಂದು ತೆರವುಗೊಳಿಸಿದೆ. ಹಾಗಾಗಿ ಡಿ.21ರಂದು ಜಿಲ್ಲಾಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನದ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.
ಚುನಾವಣೆ ಮುಗಿದ ನಂತರ ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 72 ಮತದಾರರಿದ್ದು, ಅದರಲ್ಲಿ ಒಬ್ಬರು ವಿಚಾರಣಾ ಖೈದಿ ಆಗಿರುವುದರಿಂದ ಅವರು ಮತ ಚಲಾಯಿಸುವುದು ಅನುಮಾನವಾಗಿದೆ. ಅವರ ವಿಚಾರಣೆ ಮುಗಿದು ದೋಷಮುಕ್ತರಾದರೆ ಅವರು ಮತ ಚಲಾಯಿಸಬಹುದು. ಈ ಚುನಾವಣೆಯಲ್ಲಿ ಎಲ್ಲ ತಾಲೂಕಿನ ತಾಲೂಕಾಧ್ಯಕ್ಷರು ಹಾಗೂ ಜಿಲ್ಲಾ ಸಂಘದ ನಿರ್ದೇಶಕರು ಮತದಾರರಾಗಿರುತ್ತಾರೆ ಎಂದು ತಿಳಿಸಿದರು.
ಮತದಾರರು ನಿರ್ಭಯದಿಂದ ಮತದಾನ ಮಾಡಬಹುದಾಗಿದೆ ಎಂದ ಅವರು, ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ, ಸೋಮಶೇಖರ್ ಬಿರಾದಾರ್ ಚಿದ್ರಿ ಹಾಗೂ ಬಬ್ರುವಾಹನ ಸ್ಪರ್ಧಿಸುತ್ತಿದ್ದಾರೆ. ಜಿಲ್ಲಾ ಖಜಾಂಚಿ ಚುನಾವಣೆಯಲ್ಲಿ ದೇವಪ್ಪ ಹಾಗೂ ಮನೋಹರ ಕಾಶಿ ಮತ್ತು ರಾಜ್ಯ ಪರಿಷತ್ ಚುನಾವಣೆಯಲ್ಲಿ ರಾಜಕುಮಾರ್ ಮಾಳಗೆ ಹಾಗೂ ಬಸವರಾಜ ಜಕ್ಕಾ ಕಣದಲ್ಲಿರುವರು. ಮೂವರು ಅಭ್ಯರ್ಥಿಗಳಿಗಾಗಿ ಪ್ರತಿಯೊಬ್ಬ ಮತದಾರರು ತಲಾ ಮೂರು ಮತಗಳನ್ನು ಚಲಾಯಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ತಿಂಗಳ 27ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ, ಖಜಾಂಚಿಗಳ ಚುನಾವಣೆ ನಡೆಯಲಿದೆ. ಜಿಲ್ಲೆಯ 27ಜನ ಪದಾಧಿಕಾರಿಗಳು ಅಂದಿನ ಚುನಾವಣೆಗೆ ಮತ ಚಲಾಯಿಸುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಬಸವರಾಜ್ ಸ್ವಾಮಿ ಜೊತೆ ಸಹಾಯಕ ಚುನಾವಣಾಧಿಕಾರಿ ರಾಚಯ್ಯ ಸ್ವಾಮಿ ಉಪಸ್ಥಿತರಿದ್ದರು.