ಬೀದರ್ | ಭಟ್ಕಳದಲ್ಲಿ 21ನೇ ಗೊಂಡಿ ಸಾಹಿತ್ಯ ಸಮ್ಮೇಳನ ಆಯೋಜನೆ
ಬೀದರ್ : ಅಖಿಲ ಗೊಂಡ್ವಾನಾ ಗೊಂಡಿ ಸಾಹಿತ್ಯ ಪರಿಷತ್ ರಾಜನಂದಗಾವ್ ಛತ್ತೀಸಗಢ ಹಾಗೂ ಕರ್ನಾಟಕದ ಅಖಿಲ ಭಾರತೀಯ ಗೊಂಡ ಆದಿವಾಸಿ ಸಂಘದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೆಳಗಿನಕೇರಿಯ ಕಟಗಾರಕೊಪ್ಪದಲ್ಲಿ ಡಿ.28 ಮತ್ತು 29 ರಂದು 21ನೇ ಗೊಂಡಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ಗೊಂಡ ಆದಿವಾಸಿ ಸಂಘದ ಉಪಾಧ್ಯಕ್ಷ ಪಂಡಿತರಾವ್ ಚಿದ್ರಿ ತಿಳಿಸಿದ್ದಾರೆ.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಮತ್ತು ದೇಶದಲ್ಲಿನ ಗೊಂಡ ಸಮುದಾಯದ ಸಾಹಿತಿಗಳು, ಚಿಂತಕರು, ವಿದ್ವಾಂಸರು ಭಾಗಿಯಾಗಲಿದ್ದಾರೆ. ಇಲ್ಲಿ ದೇಶ ಹಾಗೂ ರಾಜ್ಯದಲ್ಲಿ ಗೊಂಡ ಸಮುದಾಯದ ಜನರಿಗೆ ಇರುವ ಸಮಸ್ಯೆಗಳ ಬಗ್ಗೆ ಚಿಂತನ- ಮಂಥನ ನಡೆಸಿ ನಿರ್ಣಯ ತೆಗೆದುಕೊಂಡು ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಸಮ್ಮೇಳನನದಲ್ಲಿ ಜಿಲ್ಲೆಯ ಗೊಂಡ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕ ಗೊಂಡ ಆದಿವಾಸಿ ಸಂಘದ ರಾಜ್ಯ ಪ್ರಧಾನ ಕಾರ್ಯಧ್ಯಕ್ಷ ಮಾಳಪ್ಪ ಅಡಸಾರೆ ಮಾತನಾಡಿ, ಭಟ್ಕಳದಲ್ಲಿ ನಡೆಯುವ 21ನೇ ಗೊಂಡಿ ಆದಿವಾಸಿ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಗೊಂಡ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೂರು-ನಾಲ್ಕು ದಿನಗಳ ಕಾಲ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.
ರಾಜಗೊಂಡ ಸಮುದಾಯದ ಅಧ್ಯಕ್ಷ ಪಿ.ಟಿ.ಶಾಮ್ ಮಾತಾನಾಡಿ, ಡಾ.ಕಾಮಣ್ಣ ಮೇತ್ರೆಯವರ ನೇತೃತ್ವದಲ್ಲಿ ರಚನೆಗೊಂಡ ಗೊಂಡಆದಿವಾಸಿ ಸಂಘಟನೆಯು ಇಂದು ಸಾಕಷ್ಟು ಬಲಿಷ್ಠವಾಗಿದೆ. ಇದು ಈಗ ಸುಮಾರು 10 ರಿಂದ 15 ಲಕ್ಷ ಸದಸ್ಯರನ್ನು ಒಳಗೊಂಡಿದ್ದು, ಇದು ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಲಿದೆ ಎನ್ನುವ ಭರವಸೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಲೋಕೇಶ್ ಮೇತ್ರೆ, ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೊಳದಾಬಕೆ, ಸರ್ಕಾರಿ ಗೊಂಡ ನೌಕರರ ಸಂಘದ ಅಧ್ಯಕ್ಷ ಕುಶಾಲ್ ಯರನಳ್ಳಿ ಹಾಗೂ ಇತರರು ಭಾಗವಹಿಸಿದ್ದರು.