ಬೀದರ್ | ನಾಳೆ ಸಿಎಂ ಅಧ್ಯಕ್ಷತೆಯಲ್ಲಿ ಕಾರಂಜಾ ಸಂತ್ರಸ್ತರ ಸಭೆ
ಬೀದರ್ : ಕಾರಂಜಾ ಸಂತ್ರಸ್ತರ ಬೇಡಿಕೆ ಪರಿಹರಿಸುವ ಕುರಿತು ನಾಳೆ ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗುವುದು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಂಜಾ ನೀರಾವರಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸಮರ್ಪಕ ಪರಿಹಾರ ಧನ ಸಿಗದ ಕಾರಣ ಕಳೆದ 896 ದಿನಗಳಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರ ಮುತುವರ್ಜಿ ಮತ್ತು ಮುಖ್ಯಮಂತ್ರಿಗಳ ಮೇಲೆ ಸಕರಾತ್ಮಕ ಒತ್ತಡ ತಂದಿರುವ ಜಿಲ್ಲೆಯ ಸಚಿವ, ಶಾಸಕರುಗಳ ಒಗ್ಗಟ್ಟಿನಿಂದ ನಾಳೆ (ಡಿ.18) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.
ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಹಣ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಹೋರಾಟ ಸಮಿತಿ ಸಭೆಯಲ್ಲಿ ಮಂಡಿಸಲಿದೆ. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ್, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್ ಹಾಗೂ ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಎಂ.ಜಿ.ಮುಳೆ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಹೋರಾಟ ಸಮಿತಿಯ ವತಿಯಿಂದ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ, ಡಾ.ಲಕ್ಷ್ಮಣ ದಸ್ತಿ, ಚಿಂತಕ ಆರ್.ಕೆ.ಹುಡಗಿ, ಚಂದ್ರಶೇಖರ ಪಾಟೀಲ ಹುಚಕನಳ್ಳಿ, ವಿನಯಕುಮಾರ ಮಾಳಗೆ, ರಾಜಪ್ಪ ಕಮಲಪೂರ್, ರಾಜಶೇಖರ್ ಬುಸ್ಸಾರ, ರೋಹನಕುಮಾರ್, ಕೇದಾರನಾಥ್ ಪಾಟೀಲ್, ಮಹೇಶ್ ಮೂಲಗೆ, ಭೀಮರೆಡ್ಡಿ ಹಾಗೂ ಮಾದಪ್ಪಾ ರವರು ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.