ಬೀದರ್ | ಕಬ್ಬಿನ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ
ಬೀದರ್ : ಕಬ್ಬಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆಯಲ್ಲಿ ರಸ್ತೆ ತಡೆ ನಡೆಸಲು ಸಜ್ಜಾದ ರೈತರನ್ನು ಪೊಲೀಸರು ಬಂಧನ ಮಾಡಿ ಬಿಡುಗಡೆಗೊಳಿಸಿದ್ದಾರೆ.
ಹುಮನಾಬಾದ್ ಪಟ್ಟಣದಲ್ಲಿ ಕಬ್ಬಿನ ಬೆಲೆ ನಿಗದಿಗೊಳಿಸುವುದಕ್ಕಾಗಿ ನಡೆದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಕಳೆದ ತಿಂಗಳಿನ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬಿನ ಬೆಲೆ ನಿಗದಿ ಮಾಡುವ ಬಗ್ಗೆ ವಿಷಯ ಪ್ರಸ್ತಾಪಿಸಿ ಒಂದು ತಿಂಗಳಾಯಿತು. ಆದರೆ ಇನ್ನೂ ಕೂಡ ಕಬ್ಬಿನ ಬೆಲೆ ನಿಗದಿಯಾಗಿರುವುದಿಲ್ಲ. ತಾಲ್ಲೂಕು ರೈತ ಸಂಘ ಡಿ.4 ರಂದು ಸಭೆ ನಡೆಸಿ ಒಂದು ವಾರದೊಳಗೆ ಕಬ್ಬಿನ ದರ ನಿಗದಿಪಡಿಸಬೇಕು ಎಂದು ಗಡುವು ನೀಡಿತ್ತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಒಂದು ವಾರ ಕಳೆದರೂ ಕೂಡ ಕಬ್ಬಿನ ದರ ನಿಗದಿ ಮಾಡಲಿಲ್ಲ. ಕಬ್ಬಿನ ದರ ನಿಗದಿ ಮಾಡದೇ ರೈತರನ್ನು ಮೋಸ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಕಬ್ಬಿನ ಬೆಲೆ ನಿಗದಿ ಮಾಡದ ಕಾರಣ ರೈತರಿಗೆ ಹೋರಾಟ ಮಾಡುವ ದಾರಿ ಬಿಟ್ಟು ಬೇರೆ ಆಯ್ಕೆ ಇಲ್ಲದಾಗಿದೆ. ಹಾಗಾಗಿ ನಾವು ಹೋರಾಟದ ದಾರಿ ತುಳಿದಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ರೈತರ ಪ್ರತಿಭಟನೆಯು ನಗರದ ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿಯ ವರೆಗೆ ಮೆರವಣಿಗೆ ಮೂಲಕ ಸಾಗಿತ್ತು. ರಾಮ ಮತ್ತು ರಾಜ ಮಹಾವಿದ್ಯಾಲಯದ ಎದುರುಗಡೆ ಜಿಲ್ಲೆಯ ನೂರಾರು ರೈತರು ಜಮಾಯಿಸಿ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಸತೀಶ್ ನನ್ನೂರೆ, ರೈತರಾದ ಖಾಸಿಂ ಅಲಿ, ಮುಹಮ್ಮದ್ ಮುಖಿಮ್, ಕಾರಬಸಪ್ಪ ಹುಡಗಿ, ಪರಮೇಶ್ವರ್ ಪಾಟೀಲ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.