ಬೀದರ್ | ಆರೋಗ್ಯಕರ ಬದುಕಿಗೆ ಗುಣಮಟ್ಟದ ಆಹಾರ ಧಾನ್ಯ ಬಳಕೆ ಅಗತ್ಯ : ಸಚಿವ ಈಶ್ವರ್ ಖಂಡ್ರೆ

Update: 2025-02-09 18:59 IST
Photo of Program
  • whatsapp icon

ಬೀದರ್ : ರೋಗಮುಕ್ತ, ಆರೋಗ್ಯಕರ ಬದುಕಿಗೆ ಗುಣಮಟ್ಟದ ಸತ್ವಯುತ ಆಹಾರ ಧಾನ್ಯ ಬಳಕೆ ಅಗತ್ಯವಾಗಿದೆ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ.ಖಂಡ್ರೆ ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಅಧುನಿಕ ಕಾಲದಲ್ಲಿ ಎಲ್ಲೆಡೆ ಮಾಲಿನ್ಯ ಕಾಣುತ್ತಿದ್ದೇವೆ. ಪ್ರಕೃತಿ ವಿಕೋಪ, ಬರಗಾಲ, ಪ್ರವಾಹ, ಹವಮಾನ ವೈಪರಿತ್ಯ ಇಂತಹ ಅಗಾಧ ಪರಿಸ್ಥಿತಿಯಲ್ಲಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ವಿವಿಧ ರೋಗಗಳಿಗೆ ಅಂಟಿಕೊಂಡಿದ್ದಾರೆ. ಆದ್ದರಿಂದ ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು.

ಸರಕಾರವು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದು, ಸಿರಿಧಾನ್ಯ ಬಳಕೆಗೆ ಪಾಶಸ್ತ್ಯ ನೀಡಿದೆ. ಎಲ್ಲ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಜರು ಪರಿಸರಪೂರಕ ಸಾವಯವ ಕೃಷಿಗೆ ಒತ್ತು ನೀಡಿದ್ದರು. ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬಳಸುತ್ತಿದ್ದರು. ಪೌಷ್ಠಿಕಾಂಶ ಭರಿತ ಸಿರಿಧಾನ್ಯ ಉಳಿದೆಲ್ಲ ಧಾನ್ಯಗಳಿಗಿಂತ ಶ್ರೇಷ್ಠ. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟ ಹಾಗೂ ರೋಗವಿಲ್ಲದೆ ರಸಾಯನಿಕ ಮುಕ್ತವಾಗಿ ಬೆಳೆದು ಉತ್ತಮ ಆರೋಗ್ಯ ನಿರ್ಮಾಣಕ್ಕೆ ಸಹಾಯವಾಗುತ್ತವೆ. ಸಿರಿಧಾನ್ಯಗಳನ್ನು ಪ್ರತಿನಿತ್ಯ ಬಳಸುವುದರಿಂದ ಅನೇಕ ರೋಗಗಳು ವಾಸಿಯಾದ ಉದಾಹರಣೆಗಳಿವೆ ಎಂದು ತಿಳಿಸಿದರು.

ಈಗ ಕೃಷಿ ಕ್ಷೇತ್ರವು ಕವಲು ದಾರಿಯಲ್ಲಿದೆ. ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ದೊರೆಯಬೇಕಿದೆ. ಸ್ವಾಮಿನಾಥನ್ ಆಯೋಗದ ಪ್ರಕಾರ ವೈಜ್ಞಾನಿಕ ಬೆಲೆ ನಿಗದಿಯಾಗಬೇಕಿದೆ ಎಂದರು.

ಕೃಷಿ ಹೆಚ್ಚು ಲಾಭದಾಯಕ ಆಗುವ ನಿಟ್ಟಿನಲ್ಲಿ ರೈತರೇ ಕಾಲಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ವಿಜ್ಞಾನಿಗಳನ್ನು ಸಂಪರ್ಕಿಸಿ ಆರ್ಥಿಕವಾಗಿಯೂ ಸದೃಢವಾಗಬೇಕಿದೆ. ಸಿರಿಧಾನ್ಯ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾವಯವ ಕೃಷಿ ವಿಸ್ತರಣೆಗೆ ರೈತರು ಸಿದ್ದರಾಗಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಸಖಿಯರು ಗ್ರಾಮಗಳಲ್ಲಿ ಹೆಚ್ಚೆಚ್ಚು ತಿಳುವಳಿಕೆ ಮೂಡಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಪ್ರತಿನಿಧಿ ವಿಶ್ವನಾಥ್ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಭವಾನಿ ಕೆ, ಡಾ.ಸುನಿಲಕುಮಾರ್ ಎನ್.ಎಮ್, ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬಿರಾದಾರ್, ಸಹಾಯಕ ನಿರ್ದೇಶಕ ಅನ್ಸಾರಿ ಹಾಗೂ ಕೃಷಿ ಸಖಿಯರು, ರೈತ ಮುಖಂಡರು, ರೈತರು, ಕೃಷಿ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News