ಬೀದರ್ | ನ.9ರವರೆಗೆ ತೋಟಗಾರಿಕೆ ಮಹಾವಿದ್ಯಾಲಯದ ಯುವಜನೋತ್ಸವ

Update: 2024-11-07 15:59 GMT

ಬೀದರ್ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ 9 ತೋಟಗಾರಿಕೆ ಮಹಾವಿದ್ಯಾಲಯ ಕಾಲೇಜುಗಳ ಯುವಜನೋತ್ಸವ “ಕಲಾ ಬಿದರಿ ಸಂಗವು-2024" ವು ನ.7 ರಿಂದ 9 ರವರೆಗೆ ಮೂರು ದಿನಗಳ ಕಾಲ ಬೀದರ್ನಲ್ಲಿ ಜರುಗಲಿದೆ ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ತಿಳಿಸಿದ್ದಾರೆ.

ತೋಟಗಾರಿಕೆ ಮಹಾವಿದ್ಯಾಲಯದ ಕಚೇರಿ ಸಭಾಂಗಣದಲ್ಲಿ 15ನೇ ತೋಟಗಾರಿಕೆ ಮಹಾವಿದ್ಯಾಲಯಗಳ ಯುವ ಜನೋತ್ಸವ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಯುವ ಜನೋತ್ಸವದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ ಬರುವ 9 ಕಾಲೇಜುಗಳಾದ ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು, ಅರಭಾವಿ, ಮುನಿರಾಬಾದ, ಬೆಂಗಳೂರು, ಬಾಗಲಕೋಟೆ, ಕೋಲಾರ, ಶಿರಸಿ, ದೇವಿಹೋಸೂರನ ಸುಮಾರು 300 ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು. ಈ ಯುವ ಜನೋತ್ಸವವನ್ನು ಬೀದರ್ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರ ಹಾಗೂ ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಬಸವ ವೇದಿಕೆಯಲ್ಲಿ ಜರುಗಲಿವೆ. ಯುವ ಜನೋತ್ಸವ ಉದ್ಘಾಟನೆಯನ್ನು ಖ್ಯಾತ ಜಾನಪದ ಕಲಾವಿದರು ಹಾಗೂ ಚಿತ್ರ ನಟರಾದ ಗುರುರಾಜ ಹೊಸಕೋಟೆ ಇವರು ನೆರವೇರಿಸುವವರು. ಸಾಂಸ್ಕೃತಿಕ ಮೆರವಣಿಗೆ ಚಾಲನೆಯನ್ನು ಬೆಳಿಗ್ಗೆ 8 ಗಂಟೆಗೆ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ವಿಷ್ಣುವರ್ಧನ ಇವರು ನೆರವೇರಿಸಲಿದ್ದಾರೆಂದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬಾದಾಮಿ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎಸ್.ಎನ್.ವಾಸುದೇವನ, ಬೀದರ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಜಿಯಾವುಲ್ಲಾ ಕೆ., ಬೀದರ್ ತೋಟಗಾರಿಕೆ ಉಪನಿರ್ದೇಶಕರಾದ ಡಾ.ವಿಶ್ವನಾಥ ಝಳ್ಳೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂದೆ ಭಾಗವಹಿಸಲಿದ್ದಾರೆ ಎಂದರು.

ಈ ಮೂರು ದಿನಗಳ ಯುವ ಜನೋತ್ಸವದಲ್ಲಿ ಲಘು ಸಂಗೀತ, ಜಾನಪದ ಸಂಗೀತ, ಸಮೂಹ ಗಾಯನ (ಭಾರತೀಯ), ರಸಪ್ರಶ್ನೆ, ಸ್ಥಳದಲ್ಲಿ ಚಿತ್ರ ಬಿಡಿಸುವುದು, ರಂಗೋಲಿ, ಏಕಾಂತ ನಾಟಕ, ಕೊಲಾಜ್, ಮಣ್ಣಿನ ಆಕೃತಿ ರಚನೆ, ಮೂಖಾಭಿನಯ, ವ್ಯಂಗ್ಯ ಚಿತ್ರ ಬಿಡುಸುವಿಕೆ, ಭಾಷಣ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಜಾನಪದ ಸಮೂಹ ನೃತ್ಯಗಳ ಸ್ಪರ್ಧೆ ಸೇರಿದಂತೆ ಒಟ್ಟು 18 ಕಾರ್ಯಕ್ರಮಗಳು ಜರುಗಲಿವೆ ಎಂದರು.

ವಿದ್ಯಾರ್ಥಿಗಳ ವಸತಿ, ಆರೋಗ್ಯ ಹಾಗೂ ಭದ್ರತೆ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಬೀದರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ಕುರಿತು ವಿವರಿಸಿದ ಅವರು ಈ ಹಿಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಪ್ರಸನ್ನ, ಡಾ.ಪ್ರವೀಣ, ಡಾ.ಮಹಾಂತೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News