ಬೀದರ್ ಯಾತ್ರಿಕರ ದುರ್ಮರಣ; ಸಚಿವ ಈಶ್ವರ್ ಖಂಡ್ರೆ ಸಂತಾಪ

ಬೀದರ್ : ಪ್ರಯಾಗರಾಜ್ ಕುಂಭ ಮೇಳಕ್ಕೆ ತೆರಳಿದ್ದ ಬೀದರ್ ನ ಯಾತ್ರಿಕರು ಉತ್ತರ ಪ್ರದೇಶದ ರುಪಾಪೂರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರದ ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಇಂದು ಬೆಳಗಿನ ಜಾವ ಢಿಕ್ಕಿಯಾಗಿ 5 ಜನರು ಮೃತಪಟ್ಟಿದ್ದು, ಇತರ 7 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಆಘಾತವಾಯಿತು. ತಕ್ಷಣವೇ ನಾನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗೆ ಸಂಪರ್ಕ ಮಾಡಿದ್ದೇನೆ. ಹಾಗೆಯೇ ಅವರ ಕುಟುಂಬಸ್ಥರಿಗೂ ಕೂಡ ಸಂಪರ್ಕ ಮಾಡಿ ಮಾತನಾಡಿದ್ದೇನೆ. ಕೂಡಲೇ ಮೃತರ ಪಾರ್ಥಿವ ಶರೀರ ಬೀದರ್ ಗೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಮೃತರ ಕುಟುಂಬದೊಂದಿಗೆ ನಿಲ್ಲುತ್ತದೆ. ಅವರ ಕುಟುಂಬ ಬಡತನದಲ್ಲಿದ್ದು, ಸರಕಾರದಿಂದ ಆ ಕುಟುಂಬಕ್ಕೆ ಸಾಂತ್ವನ ರೂಪದಲ್ಲಿ ಪರಿಹಾರ ಒದಗಿಸಲಾಗುವುದು. ಈಗಾಗಲೇ ಮುಖ್ಯಮಂತ್ರಿಯವರು ಈ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಚನ್ನಪ್ಪ ಎಂಬ ವಾರಣಾಸಿಯ ಐಜಿಯವರು ಕರ್ನಾಟಕದವರೇ ಇದ್ದಾರೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ದೇವರು ಮೃತರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬದವರಿಗೆ ನೀಡಲಿ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.