ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ : ಸಚಿವ ಈಶ್ವರ್ ಖಂಡ್ರೆ

Update: 2025-02-09 19:09 IST
Photo of Program
  • whatsapp icon

ಬೀದರ್ : ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆ ತೀರ ಕಡಿಮೆಯಿದೆ. ಈ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಇಂದು ಗುರುದ್ವಾರ ಹತ್ತಿರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2025ನೇ ಸಾಲಿನ ದಿನಚರಿ ಹಾಗೂ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.5ರಷ್ಟು ಅರಣ್ಯ ಕ್ಷೇತ್ರವಿದ್ದು, ಮುಂಬರುವ 3 ವರ್ಷಗಳಲ್ಲಿ ಶೇ.10 ರಷ್ಟು ಹಸಿರು ಹೊದಿಕೆ ಹೆಚ್ಚಿಸುವಲ್ಲಿ ಅರಣ್ಯ ಸಿಬ್ಬಂದಿಗಳು, ಅಧಿಕಾರಿಗಳು ಯೋಜನಾ ಬದ್ಧವಾಗಿ ಪ್ರಮಾಣಿಕ ಶ್ರಮಿಸಬೇಕು. ಈ ಭಾಗದಲ್ಲಿ ಹಸರೀಕರಣದ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೀದರ್ ಜಿಲ್ಲೆಗೆ 20 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಗೆ 10 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಕಂದಾಯ ಭೂಮಿಗಳಲ್ಲಿ ಗಿಡ, ಮರಗಳನ್ನು ನೆಡುವ ಕಾರ್ಯ ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಈ ಭಾಗದ 41 ಕ್ಷೇತ್ರದ 41 ಸಾವಿರ ಕಿ.ಮೀ. ರಸ್ತೆ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಡಲಾಗುವುದು. ಕೆರೆಗಳ ಸುತ್ತ, ಶಾಲಾ ಆವರಣಗಳಲ್ಲಿ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಿ ಹಸರೀಕರಣ ಹೆಚ್ಚಳ ಮಾಡಲಾಗುವುದು ಎಂದರು.

ನಿನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಉನ್ನತ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಒಟ್ಟು ಬಜೆಟ್ನ ಶೇ.1ರಷ್ಟು ಅನುದಾನವನ್ನು ಈ ಬಾರಿ ಅರಣ್ಯ ಇಲಾಖೆಗೆ ನೀಡುವಂತೆ ತಾವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ. ಇದರಿಂದಾಗಿ ಸುಮಾರು 4 ಸಾವಿರ ಕೋಟಿ ರೂ. ಅನುದಾನ ದೊರೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಬರುವ ವರ್ಷ ಕಲ್ಯಾಣ ಕರ್ನಾಟಕ ಭಾಗಕ್ಕೆ 300 ಕೋಟಿ ರೂ. ಅನುದಾನ ಹೆಚ್ಚಿಗೆ ನೀಡುವಂತೆ ಕೇಳಲಾಗಿದೆ. ಅಲ್ಲದೆ ಕೆಕೆಆರ್ಡಿಬಿ ಯಿಂದ 150 ಕೋಟಿ ರೂ. ಅನುದಾನ ದೊರೆಯಲಿದೆ. ಬೀದರ್ ನಲ್ಲಿ ಕೃಷ್ಣಮೃಗ ಸಂರಕ್ಷಿತ ಧಾಮ ಆಗಲಿದೆ. ಪರಿಸರ ಪ್ರವಾಸೋದ್ಯಮ ಆರಂಭಗೊಳ್ಳಲಿದೆ. ಪಕ್ಷಿಧಾಮವನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಅವರು, ಹಸರೀಕರಣಕ್ಕೆ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಶ್ರಮಿಸುತ್ತಿರುವ ಅರಣ್ಯ ನೌಕರರ ಸೇವೆಯನ್ನು ಶ್ಲಾಘಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು, ಈ ಭಾಗದಲ್ಲಿ ಎಲ್ಲ ಸ್ಥರದ ಹುದ್ದೆಗಳಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಹುದ್ದೆಗಳು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಪಶ್ಚಿಮಘಟ್ಟ ಹಾಗೂ ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಗಳಲ್ಲಿ ಇರುವ ಅನಾವಶ್ಯಕವಿರುವ ಹುದ್ದೆ ಹಾಗೂ ಸಿಬ್ಬಂದಿಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುಲ್ಬರ್ಗಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನವಾರ್, ಕಲ್ಯಾಣ ಕರ್ನಾಟಕ ಪ್ರದೇಶ ನೌಕರರ ಸಂಘದ ಅಧ್ಯಕ್ಷ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಹಾಗೂ ಐದು ಜಿಲ್ಲೆಗಳ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News