ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಖಂಡಿಸಿ ಪ್ರತಿಭಟನೆ; ಸಾಗರ್ ಖಂಡ್ರೆ ಭೇಟಿ
ಬೀದರ್ : ಎಟಿಎಂ ಸಿಬ್ಬಂದಿ ಮೇಲೆ ನಡೆದ ಗುಂಡಿನ ದಾಳಿ ಖಂಡಿಸಿ ಜಿಲ್ಲಾ ಸರಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.
ಇಂದು ಬೆಳಿಗ್ಗೆ ಎಟಿಎಂಗೆ ದುಡ್ಡು ಹಾಕಲು ಎಸ್‌ಬಿಐ ಬ್ಯಾಂಕಿನಿಂದ ದುಡ್ಡು ತೆಗೆದುಕೊಂಡು ಹೊರ ಬರುತಿದ್ದಾಗ, ಎಸ್‌ಬಿಐನ ಏಟಿಎಂ ಸೆಕ್ಯೂರಿಟಿ ಎಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದು,ಇನ್ನೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಪಿ ಅಜಯ್ ಹೀರೊಳಿ ಬಂದು ಪರಿಶೀಲನೆ ನಡೆಸಿದ್ದರು.
ಈ ಘಟನೆ ಖಂಡಿಸಿ ಕುಟುಂಬಸ್ಥರ ಜೊತೆ ನೂರಾರು ಜನ ಸೇರಿ ಜಿಲ್ಲಾ ಸರಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬೆಳಿಗ್ಗೆಯಿಂದ ಸಚಿವರು, ಜಿಲ್ಲಾಧಿಕಾರಿ ಹಾಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ಹಾಗೂ ಪರಿಹಾರ ಘೋಷಿಸುವ ಕೆಲಸ ಮಾಡುತ್ತಿಲ್ಲ. ಹಾಗೆಯೇ ಬೆಳಿಗ್ಗೆಯಿಂದ ಮೃತದೇಹ ಪರೀಕ್ಷೆ ಮಾಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆ ನಡೆಯುವ ಸಮಯದಲ್ಲಿ ಸಂಸದ ಸಾಗರ್ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಆದರೆ ಪ್ರತಿಭಟನಾಕಾರರು ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ಹುದ್ದೆ, ಐದು ಎಕರೆ ಜಮೀನು ನೀಡಬೇಕು. ಹಾಗೆಯೇ ತಕ್ಷಣವೇ ಪರಿಹಾರ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.
ಈ ಬೇಡಿಕೆಯನ್ನು ಆಲಿಸಿದ ಸಾಗರ್ ಖಂಡ್ರೆ ಅವರು, ಎರಡು ಎಕರೆ ಜಮೀನು ಹಾಗೂ ಸರಕಾರಿ ಹುದ್ದೆಗಾಗಿ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅದಲ್ಲದೆ ಅಟ್ರಾಸಿಟಿ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಸಂಸದ ಸಾಗರ್ ಖಂಡ್ರೆಯವರ ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಡಲಾಗಿದೆ.