ಲಕ್ಷಾಂತರ ಆಫ್ರಿಕನ್ ಮೂಲನಿವಾಸಿಗಳ ಕಗ್ಗೊಲೆಗೆ ಕಾರಣವಾದ ಜರ್ಮನಿಯ ಕರಾಳ ಚರಿತ್ರೆಯನ್ನು ತೆರೆದಿಡುವ ‘ಮೆಜರ್ಸ್ ಆಫ್ ಮೆನ್’
ಅದು 1986ರ ನೈಋತ್ಯ ಆಫ್ರಿಕಾದ (ಈಗಿನ ನಮೀಬಿಯಾ ಎಂದು ಕರೆಸಿಕೊಳ್ಳುವ ಪ್ರದೇಶ) ಹೆರೇರೋ ಎಂಬ ಪ್ರಬಲ ಸಮುದಾಯ ವಾಸ ಮಾಡುತ್ತಿರುವ ಪ್ರದೇಶ. ಜರ್ಮನಿ ಈ ಪ್ರದೇಶವನ್ನು ಆಕ್ರಮಿಸಿ ತನ್ನ ವಸಾಹತನ್ನಾಗಿ ಮಾಡಿಕೊಂಡಿತ್ತು. ಕೆಲವು ಆದಿವಾಸಿಗಳು ಜರ್ಮನ್ ಸೈನ್ಯದ ಮೇಲೆ ಪ್ರತಿದಾಳಿ ಮಾಡಿ ಕೆಲವು ಸೈನಿಕರನ್ನು ಕೊಂದದ್ದೇ ಕಾರಣವಾಗಿ ಹೆರೇರೋ ಮತ್ತು ನಮಾ ಸಮುದಾಯದ ಅಂದಾಜು ಒಂದು ಲಕ್ಷ ಆದಿವಾಸಿಗಳನ್ನು ಜರ್ಮನ್ ಸೈನಿಕರು ನಿರ್ನಾಮ ಮಾಡುತ್ತಾರೆ. ಹಿಟ್ಲರನ ಯೆಹೂದಿ ಜನಾಂಗೀಯ ಹತ್ಯೆಗಿಂತಲೂ ಮುಂಚೆಯೇ ನಡೆದ ಈ ಆಫ್ರಿಕನ್ ಆದಿವಾಸಿಗಳ ಜನಾಂಗೀಯ ಮಾರಣಹೋಮ ಚರಿತ್ರೆಯಲ್ಲಿ ಹೆಚ್ಚು ಹೆಸರು ಮಾಡಿರುವುದಿಲ್ಲ. 2023ರ ಬರ್ಲಿನಾಲೆ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ 15ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ, ಜರ್ಮನಿಯ ಲಾರ್ಸ್ ಕ್ರೂಮೇ ನಿರ್ದೇಶನದ ‘ಮೆಜರ್ಸ್ ಆಫ್ ಮೆನ್’ ಚಲನಚಿತ್ರ 20ನೇ ಶತಮಾನದ ಉದಯದಲ್ಲಿ ಲಕ್ಷಾಂತರ ಆಫ್ರಿಕನ್ ಮೂಲನಿವಾಸಿಗಳ ಕಗ್ಗೊಲೆಗೆ ಕಾರಣವಾದ ಜರ್ಮನಿಯ ಕರಾಳ ಚರಿತ್ರೆಯನ್ನು ಜರ್ಮನ್‌ನಾಗರಿಕರಿಗೆ ಮತ್ತು ಜಗತ್ತಿನ ಸ್ಮತಿಪಟಲಕ್ಕೆ ತೆರೆದಿಡುತ್ತದೆ.
ಚಿತ್ರದ ಪ್ರಮುಖ ಪಾತ್ರ, ವಿಶ್ವವಿದ್ಯಾನಿಲಯದಲ್ಲಿ ಜನಾಂಗೀಯ ಶಾಸ್ತ್ರದ ಜೂನಿಯರ್ ಪ್ರೊಫೆಸರ್ ಆಗಿರುವ ಅಲೆಗ್ಸಾಂಡರ್ ಹಾಫ್‌ಮೆನ್. ಯುನಿವರ್ಸಿಟಿಯಲ್ಲಿ ಕೆಲಸ ಮಾಡುವ ಹೊಸದರಲ್ಲಿ ತರುಣ ಹಾಫ್‌ಮೆನ್, ಬಿಳಿಯರ ಜನಾಂಗ ಕಪ್ಪು ವರ್ಣದ ಜನಾಂಗಕ್ಕಿಂತ ಹೆಚ್ಚು ವಿಕಸಿತಗೊಂಡಿದೆ ಎಂಬ ಸಿದ್ಧಾಂತವನ್ನು ಭೋದಿಸುತ್ತಿದ್ದ ತನ್ನ ವಿಭಾಗದ ಮುಖ್ಯಸ್ಥನನ್ನು ಒಪ್ಪದೆ ಎಲ್ಲಾ ಜನಾಂಗಗಳೂ ಒಂದೇ ರೀತಿ ವಿಕಾಸವಾಗಿವೆ ಎಂದು ಪ್ರತಿಪಾದಿಸುತ್ತಾನೆ. ಮನುಷ್ಯರ ತಲೆಬುರುಡೆಗಳನ್ನು ಅಳತೆ ಮಾಡಿ ದಾಖಲು ಮಾಡುತ್ತಾ ಸಂಶೋಧನೆಗಳಲ್ಲಿ ಆತನಿಗೆ ಆ ಕಾಲದಲ್ಲಿ ಒಪ್ಪಿತವಾಗಿರುವ ‘‘ಕರಿಯ ವರ್ಣದ ಜನಾಂಗಕ್ಕಿಂತ ಬಿಳಿಯ ವರ್ಣದ ಜನಾಂಗ ಹೆಚ್ಚು ವಿಕಸಿತವಾಗಿದೆ’’ ಎಂಬ ವಾದವನ್ನೇ ತಪ್ಪು ಎಂದು ವಾದಿಸುತ್ತಾನೆ. ಈ ನಡುವೆ ಜರ್ಮನಿಗೆ ಬಂದ ಜಾಗತಿಕ ಆಫ್ರಿಕನ್ ನಿಯೋಗದಲ್ಲಿರುವ ಅನುವಾದಕಳಾಗಿ ಕೆಲಸ ಮಾಡುವ ಕುನೋಯೆ ಕಂಬಾಝೆಂಬಿ ಹೆಸರಿನ ಆಫ್ರಿಕನ್ ಯುವತಿಯ ಪರಿಚಯವಾಗುತ್ತದೆ. ಆತ್ಮವಿಶ್ವಾಸದ ಖನಿಯಾಗಿರುವ, ದೃಢನಿಲುವಿನ ಕುನೋಯೆಳ ವ್ಯಕ್ತಿತ್ವ ಮತ್ತು ನಡತೆ ಆತನ ಸಂಶೋಧನೆಯನ್ನು ದೃಢಪಡಿಸುತ್ತದೆ.
ತನ್ನ ಜನಾಂಗೀಯ ಶಾಸ್ತ್ರದ ಅಧ್ಯಯನಕ್ಕಾಗಿ ಸೈನಿಕರ ಪಡೆಯೊಂದಿಗೆ ಆಫ್ರಿಕಾಗೆ ತೆರಳುವ ಹಾಫ್‌ಮೆನ್ ಹೆರೇರೋ ಬುಡಕಟ್ಟು ವಾಸಿಸುವ ಸ್ಥಳಗಳಲ್ಲಿ ಕುನೋಯೆಗಾಗಿ ಹುಡುಕಾಡುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ತನ್ನ ಜರ್ಮನಿ ಸೈನಿಕರು ಎಸಗುವ ದಾರುಣ ಹತ್ಯೆಗಳು, ನಿರಾಯುಧ ಆದಿವಾಸಿಗಳ ಕಗ್ಗೊಲೆ ನೋಡಬೇಕಾಗುತ್ತದೆ. ಬಂಡಾಯಕೋರ ಹೆರೇರೋ ಹಾಗೂ ನಮಾ ಸಮುದಾಯದ ಆದಿವಾಸಿ ಗಂಡಸರನ್ನು ಜರ್ಮನ್‌ಸೈನ್ಯ ತಮ್ಮ ಬಳಿ ಇರುವ ಆಧುನಿಕ ಬಂದೂಕುಗಳು, ಗ್ರೆನೇಡುಗಳು, ಬಾಂಬುಗಳನ್ನು ಉಪಯೋಗಿಸಿ ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯುತ್ತದೆ. ತಮ್ಮ ಹಟ್ಟಿಗಳನ್ನು ಬಿಟ್ಟು ಪಲಾಯನಗೈದ ದುರ್ಬಲರು, ಹೆಂಗಸರು, ಮಕ್ಕಳನ್ನು ವಿಶಾಲವಾದ ಮರುಭೂಮಿ ಮತ್ತು ಎರಗಿರುವ ಬರಗಾಲ ಮುಗಿಸಿಬಿಡುತ್ತದೆ. ಇನ್ನೂ ಬದುಕುಳಿದವರನ್ನು 1900ರಲ್ಲೇ ಕಾನ್ಸಂಟ್ರೇಷನ್ ಕ್ಯಾಂಪುಗಳಲ್ಲಿ ಬಂಧಿಸಿ, ದಷ್ಟಪುಷ್ಟವಾಗಿದ್ದವರಿಂದ ಗುಲಾಮಗಿರಿ ಮಾಡಿಸಿ, ಸರಿಯಾದ ಊಟ, ವಸತಿ ನೀಡದೆ ಕಾಯಿಲೆ ಬಂದಾಗ ನಿಷ್ಕರುಣೆಯಿಂದ ಸಾಯಿಸಲಾಗುತ್ತದೆ.
ತನ್ನ ಕಣ್ಣ ಮುಂದೆಯೇ ಆದಿವಾಸಿಗಳ ಹತ್ಯೆಗೈಯುವುದನ್ನು ಮೊದಮೊದಲು ಭೀತಿಯಿಂದ, ಅಸಹಾಯಕತೆಯಿಂದ ನೋಡುತ್ತಿದ್ದವನು ಕೆಲಕಾಲದ ಬಳಿಕ ನಿರ್ವಿಕಾರದಿಂದ ತಣ್ಣಗೆ ಇರುವ ಅಭ್ಯಾಸ ಮಾಡಿಕೊಳ್ಳುತ್ತಾನೆ. ಹೆರೇರೋ ಮೂಲನಿವಾಸಿಗಳು ತಮ್ಮ ಸತ್ತ ಹಿರಿಯರಿಗೆ ವಿಶೇಷ ಗೌರವ ಕೊಡುತ್ತಾರೆ, ಪೂರ್ವಿಕರ ಸಮಾಧಿಯೆಂದರೆ ಅದು ಸಮುದಾಯದ ದೇವರ ಗುಡಿಗಳಂತೆ ಜತನದಿಂದ ಕಾಪಿಡುತ್ತಾರೆ. ಹಾಫ್‌ಮೆನ್ ಯಾವುದೇ ಭಾವೋದ್ರೇಕಗಳಿಲ್ಲದೆ ಇಂತಹ ಸಮಾಧಿಗಳನ್ನು ಸೈನಿಕರಿಂದ ಒಡೆಯಿಸುತ್ತಾನೆ, ಅದರೊಳಗಿನ ಆಫ್ರಿಕನ್ ಆದಿವಾಸಿಗಳ ಅಸ್ಥಿಪಂಜರಗಳಿಂದ ತಲೆಬುರುಡೆಗಳನ್ನು ಕಿತ್ತು, ಸಮಾಧಿಯೊಳಗಿರುವ ಅಪೂರ್ವ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ತುಂಬಿ ಹಡಗುಗಳ ಮೂಲಕ ಜರ್ಮನಿಗೆ ಸಾಗಿಸುತ್ತಾನೆ.
ಕುನೋಯೆಗಾಗಿ ಮತ್ತು ವಿವಿಧ ಸಮುದಾಯಗಳ ತಲೆಬುರುಡೆಗಳಿಗಾಗಿ ಆತ ಹುಡುಕಾಟದಲ್ಲಿರುವಾಗ ಸೈನಾಧಿಕಾರಿಗಳ ವಿಲಾಸಿ ಪಾರ್ಟಿಯೊಂದರಲ್ಲಿ ಆತನ ವಿಭಾಗದ ಮುಖ್ಯಸ್ಥ ತನ್ನ ಪ್ರೇಯಸಿಯೊಂದಿಗೆ ಭೇಟಿಯಾಗುತ್ತಾನೆ. ಹಾಫ್‌ಮೆನ್‌ನ ಸಂಶೋಧನೆಗಳ ಬಗ್ಗೆ ತಿಳಿದುಕೊಂಡಿರುವ ಮುಖ್ಯಸ್ಥ, ಎಲ್ಲಾ ಮನುಷ್ಯಜೀವಿಗಳು ಒಂದೇ ರೀತಿ ವಿಕಾಸವಾಗಿವೆಯೆನ್ನುವುದು ವಾಸ್ತವವಾದರೂ ಈಗಿರುವ ರಾಜಕೀಯ ವ್ಯವಸ್ಥೆಯಲ್ಲಿ ಅಪಾಯಕಾರಿ ಸತ್ಯವನ್ನು ಹೇಳುವುದು ಜಾಣತನವಲ್ಲವೆಂದು ತಿಳಿಹೇಳುತ್ತಾ ತನ್ನ ಬಳಿಕ ಯುನಿವರ್ಸಿಟಿಯಲ್ಲಿ ಖಾಲಿ ಬೀಳುವ ತನ್ನ ಹುದ್ದೆಗೆ ಹಾಫ್‌ಮೆನ್‌ನ ಹೆಸರನ್ನೇ ಸೂಚಿಸುವುದಾಗಿಯೂ ಆಮಿಷವೊಡ್ಡುತ್ತಾನೆ.
ಹೊಸ ಹೊಸ ಆದಿವಾಸಿ ಸಮುದಾಯಗಳ ತಲೆಬುರುಡೆಗಳ ಹುಡುಕಾಟ ಅತಿಯಾಗಿ ಸೈನಿಕರ ಗುಂಡೇಟಿಗೆ ಬಲಿಯಾದ ಶವಗಳ ಹಸಿ ಹಸಿ ಬುರುಡೆಗಳನ್ನೇ ಕತ್ತರಿಸಿ, ಇನ್ನೂ ಕೊಳೆಯದ ಅವುಗಳ ಚರ್ಮ, ರೋಮಗಳನ್ನು ಬಂಧಿಸಲಾದ ಅದೇ ಆದಿವಾಸಿಗಳ ಹೆಣ್ಣುಗಳ ಕೈಯಿಂದ ತೆಗೆಸುವ ಅಮಾನವೀಯ ಹೀನ ಕೃತ್ಯವನ್ನೂ ಹಾಫ್‌ಮೆನ್ ಮಾಡುತ್ತಾನೆ. ಹೃದಯ ಕಲಕುವ ದೃಶ್ಯವೊಂದರಲ್ಲಿ ಇಂತಹದ್ದೇ ಕ್ಯಾಂಪ್ ಒಂದರಲ್ಲಿ ಹಾಫ್‌ಮೆನ್ ಹುಡುಕುತ್ತಿರುವ ಕುನೋಯೆ ಸತ್ತ ತನ್ನದೇ ಸಮುದಾಯದ ಹಸಿ ತಲೆಬುರುಡೆಯೊಂದರ ಹಸಿ ಚರ್ಮ ಮತ್ತು ರೋಮವನ್ನು ಹರಿತವಾದ ಆಯುಧದಿಂದ ಕೆರೆದು ಶುಚಿಗೊಳಿಸುತ್ತಿರುತ್ತಾಳೆ.
ಚಿತ್ರದಲ್ಲಿ ಉದ್ದಕ್ಕೂ ಜರ್ಮನಿಯ ಸೈನಿಕರ ದೌರ್ಜನ್ಯ ಮತ್ತು ಜರ್ಮನಿಯ ವಿದ್ವಾಂಸರುಗಳ, ಸಂಶೋಧಕರುಗಳ ಪಲಾಯನವಾದ ಎದ್ದುಕಾಣುತ್ತವೆ. ಕೊನೆಯ ದೃಶ್ಯದಲ್ಲಿ ಇದೇ ಹಾಫ್‌ಮೆನ್‌ಅದೇ ಯುನಿವರ್ಸಿಟಿಯ ಜನಾಂಗೀಯ ಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದಾನೆ. ತರಗತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಒಂದೊಂದು ತಲೆಬುರುಡೆಯನ್ನೂ ಅಳತೆ ಮಾಡುವ ಸಾಧನದಿಂದ ಪರೀಕ್ಷಿಸುತ್ತಿದ್ದಾರೆ. ಹಾಫ್‌ಮೆನ್ ಯಾಕೆ ಬಿಳಿಯ ಜನಾಂಗ ಮಾನವ ವಿಕಾಸದಲ್ಲಿ ಅತ್ಯುತ್ಕೃಷ್ಟ ಮತ್ತು ಕರಿಯ ಜನಾಂಗವು ನಿಕೃಷ್ಟ ಎನ್ನುವುದನ್ನು ಬೋಧನೆ ಮಾಡುತ್ತಿರುತ್ತಾನೆ. ಪಾಠದ ನಡುವೆ ವಿದ್ಯಾರ್ಥಿಯೊಬ್ಬ ಎದ್ದುನಿಂತು ‘‘ಜಗತ್ತಿನ ಎಲ್ಲಾ ಜನಾಂಗಗಳೂ ಒಂದೇ ರೀತಿಯಲ್ಲಿ ವಿಕಾಸಗೊಂಡಿವೆ, ಯಾವ ಜನಾಂಗವೂ ಮೇಲೂ ಅಲ್ಲ ಹೀನವೂ ಅಲ್ಲ ಎಂದು ನೀವೇ ಪ್ರತಿಪಾದಿಸಿದ್ದೀರಲ್ಲಾ’’ ಎಂದು ಪ್ರಶ್ನಿಸಿ ಹಾಫ್‌ಮೆನ್ ಬರೆದಿರುವ ಹಳೆಯ ಪುಸ್ತಕವನ್ನು ಪ್ರದರ್ಶಿಸುತ್ತಾನೆ. ‘‘ಓಹ್ ಈ ಪುಸ್ತಕ ಪ್ರಕಟವಾಗಿದ್ದೇ ನನಗೆ ತಿಳಿದಿರಲಿಲ್ಲ. ಬಹುಷಃ ಆಗ ನಾನು ತುಂಬಾ ಸಣ್ಣ ವಯಸ್ಸಿನವನಾಗಿದ್ದರಿಂದ ಹೀಗೆ ತಪ್ಪು ಹೇಳಿದ್ದಿರಬಹುದು’’ ಎಂದು ಹಾಫ್‌ಮೆನ್ ಆ ಪುಸ್ತಕದಲ್ಲಿ ತಾನು ಎಲ್ಲಾ ಜನಾಂಗಗಳು ಸಮಾನ ಎಂದು ಬರೆದಿರುವ ಎಲ್ಲಾ ಹಾಳೆಗಳನ್ನು ಹರಿದು ಎಸೆಯುತ್ತಾನೆ.
ದಶಕಗಳ ಕಾಲ ಜರ್ಮನಿಯ ವಿದ್ವಾಂಸರುಗಳ, ಸಂಶೋಧಕರುಗಳ ಇಂತಹದ್ದೇ ಹುಸಿ ಮತ್ತು ಅವೈಜ್ಞಾನಿಕ ಪ್ರತಿಪಾದನೆಗಳನ್ನು ಎಲ್ಲರೂ ನಂಬುತ್ತ, ಅದೇ ಸತ್ಯವೆಂದು ಘೋಷಿಸುತ್ತ ನಂತರದ ಮೂರು ದಶಕಗಳಲ್ಲಿ ಹಿಟ್ಲರ್‌ನಂತಹ ಕ್ರೂರ ಸರ್ವಾಧಿಕಾರಿ ಹೇಗೆ ಆರು ಮಿಲಿಯ ಯೆಹೂದಿಗಳನ್ನು ಹತ್ಯೆಗೈದ ಮತ್ತು ಈ ಜನಾಂಗೀಯ ಹತ್ಯೆಗೆ ಜರ್ಮನಿಯ ಸಾಮಾನ್ಯ ಜನರು ಮಾತ್ರವಲ್ಲದೆ ಸಂಶೋಧಕರು, ವಿಜ್ಞಾನಿಗಳು, ತತ್ವಜ್ಞಾನಿಗಳು ಹಾಗೂ ಜರ್ಮನಿಯ ಇಡೀ ಬೌದ್ಧಿಕ ವಲಯವೇ ತಮ್ಮ ಅನುಮೋದನೆಯನ್ನು ನೀಡಿತ್ತು. ಜರ್ಮನ್ ಜನತೆಯ ಸಾರಾಸಗಟು ಒಪ್ಪಿಗೆಯಿಂದಲೇ ಒಬ್ಬ ಸರ್ವಾಧಿಕಾರಿ ಜಗತ್ತಿನ ಇತಿಹಾಸದಲ್ಲೇ ಅತೀ ಕ್ರೂರವಾದ ಹತ್ಯೆಗೈಯಲು ಸಾಧ್ಯವಾಯಿತು ಅನ್ನುವುದನ್ನು ಈ ಸಿನೆಮಾ ಮತ್ತೆಮತ್ತೆ ಹೇಳುತ್ತಾ ಎಚ್ಚರಿಸುತ್ತದೆ.