ಕಾಟೇರ: ಪ್ರತಿಬಿಂಬಿಸಿದ ಚಿತ್ರರಂಗದ ಸಾಮಾಜಿಕ ಹೊಣೆಗಾರಿಕೆ

Update: 2024-01-10 06:54 GMT

ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ದರ್ಶನ್ ಅಭಿನಯದ ‘ಕಾಟೇರ’ ಸಿನೆಮಾ ಜಾತಿ ವ್ಯವಸ್ಥೆಯ ವಿರುದ್ಧ ಕನ್ನಡದಲ್ಲಿ ಮೂಡಿ ಬಂದಿರುವ ಒಂದು ಅಪರೂಪದ ಪ್ರಯತ್ನವಾಗಿದೆ. ಅಸಮಾನತೆ, ಅಸ್ಪಶ್ಯತೆ, ಜಾತಿ ಪದ್ಧತಿ, ಆ ಹಿನ್ನೆಲೆಯಲ್ಲಿ ಹಿಂದೆ ಗೇಣಿ ಹೆಸರಿನಲ್ಲಿ ಕತ್ತೆಯ ಹಾಗೆ ದುಡಿಯುತ್ತಿದ್ದ ರೈತರು, ಅಸಂಘಟಿತ ಕೃಷಿ ಕಾರ್ಮಿಕರ ಮೇಲೆ ನಡೆಯುವ ದೌರ್ಜನ್ಯ ಎಲ್ಲವನ್ನು ಸಿನೆಮಾ ತುಂಬಾ ಹಸಿ ಹಸಿಯಾಗಿ ಹಿಡಿದಿಡುತ್ತದೆ. ಪ್ರೇಕ್ಷಕನ ಮೇಲೆ ಆತನ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕಮರ್ಷಿಯಲ್ ಧಾಟಿಯಲ್ಲಿ ಚಿತ್ರ ಅಗಾಧವಾದ ಪರಿಣಾಮ ಬೀರುತ್ತದೆ. ಪ್ರೇಕ್ಷಕ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವಂತೆ ತನ್ನ ಸಾಮಾಜಿಕ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಕಾಟೇರ ಮಾಡುತ್ತದೆ. ಹಾಗೆ ಚಿತ್ರರಂಗದ ಸಾಮಾಜಿಕ ಹೊಣೆಗಾರಿಕೆಯನ್ನು ಸಮಸ್ತ ಕನ್ನಡ ಚಿತ್ರ ಮಂದಿಗೆ ಕಾಟೇರ ನೆನಪಿಸಿದೆ.

ಚಲನಚಿತ್ರ ಅಥವಾ ಸಿನೆಮಾ ಜನರ ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರುವ ಪರಿಣಾಮಕಾರಿ ಮಾಧ್ಯಮ. ಜಾತಿ ಇರುವುದು ಮನುಷ್ಯನ ದೇಹದಲ್ಲಿ ಅಲ್ಲ. ದೇಹದ ಯಾವುದೋ ಭಾಗದಲ್ಲಿ ಹಾಕಿರುವ ಮುದ್ರೆಯಲ್ಲೂ ಅಲ್ಲ. ಜಾತಿ ಇರುವುದು ಮನುಷ್ಯನ ಮನಸ್ಸಿನಲ್ಲಿ. ಅಂತಹ ಜಾತಿ ಮನಸ್ಸು ಅಥವಾ ಮನಸ್ಥಿತಿ ಕಾರಣಕ್ಕೆ ಮನುಷ್ಯ ತನ್ನ ಜಾತಿ ಅಥವಾ ಜಾತಿ ಮನಸ್ಸು ಹೇಳುವಂತೆ ವರ್ತಿಸುತ್ತಾನೆ, ಸಮಾಜ ವರ್ತಿಸುತ್ತದೆ. ಬೀದಿಯಲ್ಲಿ, ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ತಾನು ಹಾಕುವ ವೇಷ ಭೂಷಣಗಳಲ್ಲಿ, ಮಾತಿನ ಶೈಲಿಯಲ್ಲಿ ಮನುಷ್ಯ ಜಾತಿ ಪ್ರದರ್ಶಿಸುತ್ತಾ ಹೋಗುತ್ತಾನೆ. ಆತನ ಜಾತಿ ಮನಸ್ಥಿತಿ ತಿದ್ದಲು ಹೊರಟರೆ ತನ್ನ ಮನೆ ಸಂಪ್ರದಾಯ, ಹಿರಿಯರಿಂದ ಬಂದದ್ದು ಎಂದು ಸಲಹೆಗಳನ್ನು ತಿರಸ್ಕರಿಸುತ್ತಾನೆ. ಆದರೆ ಸಿನೆಮಾವೊಂದು ಆತನ ಅಂತಹ ತಪ್ಪುಗಳನ್ನು ಸತ್ಯದ ಹಿನ್ನೆಲೆಯ ಕಥೆಯೊಂದರ ಮೂಲಕ ಆತನ ಮನ ಮುಟ್ಟುವಂತೆ ಹೇಳಿದರೆ ಖಂಡಿತ ಆತ ಬದಲಾಗಬಹುದು, ಅರ್ಥ ಮಾಡಿಕೊಳ್ಳಬಹುದು. ಇದನ್ನು ಕಾಟೇರ ಪ್ರಯತ್ನ ಮಾಡಿದೆ.

ಚಿತ್ರದಲ್ಲಿ ನಾಯಕ ಓರ್ವ ಕುಲುಮೆ ಕೆಲಸಗಾರ. ಅದು ಸಾಂಕೇತಿಕ. ಆದರೆ ಅದು ಹೊರಸೂಸುವ ಬೆಂಕಿ? ಆತನ ಮನದ ನೋವಿನ ಕಿಚ್ಚಿನ ಪ್ರತೀಕ. ನಿರ್ದೇಶಕ ತಳ ಸಮುದಾಯದ ಜನರ ನೋವನ್ನು ಇಂತಹ ಪಾತ್ರ ವ್ಯಕ್ತಿತ್ವದ ಮೂಲಕ ತೆರೆದಿಡುವ ಜಾಣ್ಮೆ ತೋರಿದ್ದಾರೆ. ಈ ನಿಟ್ಟಿನಲ್ಲಿ ಈ ಪ್ರಯತ್ನ ಮೆಚ್ಚಲರ್ಹ. ಯಾವ ಪರಿಯೆಂದರೆ ದೃಶ್ಯವೊಂದರಲ್ಲಿ ನಾಯಕ ತನ್ನನ್ನು ಸದೆಬಡಿಯಲು ಬಂದ 108 ಜನರನ್ನು ಕೊಚ್ಚಿ ಹಾಕುತ್ತಾನೆ. ಅಕ್ಷರಶಃ ಇಲ್ಲಿ ಆತ ಕೊಚ್ಚಿಹಾಕುವುದು 108 ಜನರನ್ನಲ್ಲ. ತಾನು ಶತಶತಮಾನಗಳಿಂದ ಅನುಭವಿಸಿರುವ ನೂರೆಂಟು ಜಾತಿ ನೋವುಗಳನ್ನು ಎಂಬುದನ್ನು ಕತೆ ಪರಿಣಾಮಕಾರಿಯಾಗಿ ತಿಳಿಸುತ್ತದೆ. ಚಿತ್ರದ ಇತರ ಪಾತ್ರಗಳು, ಜಮೀನ್ದಾರಿ ಪ್ರಬಲ ಜಾತಿ ಖಳನಾಯಕ ಪಾತ್ರಗಳು, ಆ ಪಾತ್ರಗಳಿಗೆ ಬೆಂಬಲವಾಗಿ ನಿಲ್ಲುವ ಸಲೀಸಾಗಿ ಭೂ ದಾಖಲೆ ಮಾಡಿಕೊಡುವ ತಹಶೀಲ್ದಾರ್ ಪಾತ್ರ, ಹಾಗೆ ಆ ಜಮೀನ್ದಾರಿ ಪ್ರಬಲ ಜಾತಿಗಳಿಗೆ ಪೌರೋಹಿತ್ಯದ ಸ್ಥಾನದಲ್ಲಿ ನಿಂತು ದೌರ್ಜನ್ಯಕ್ಕೆ ನೀರೆರೆಯುವ ಶ್ಯಾನುಭೋಗ ಪಾತ್ರ ಎಲ್ಲವನ್ನು ಚಿತ್ರ ಕಿಂಚಿತ್ತೂ ತಪ್ಪಿಲ್ಲದೆ ಕಟ್ಟಿಕೊಟ್ಟಿದೆ. ಇರುವುದನ್ನು ನೇರ ಹೇಳಿದೆ. ಆ ನಿಟ್ಟಿನಲ್ಲಿ ಹೇಳುವುದಾದರೆ ಕನ್ನಡ ಸಿನೆಮಾ ಇತಿಹಾಸದಲ್ಲೇ ಜಾತಿ ವ್ಯವಸ್ಥೆಗೆ ನೇರ ದಾಳಿ ಕಾಟೇರ!

ಜಾತಿ ಎಂದಾಕ್ಷಣ ಸಂಬಂಧಿತ ಆ ಜಾತಿಯ ಎಲ್ಲಾ ಸದಸ್ಯರು ಕೆಟ್ಟವರಲ್ಲ. ಇದನ್ನು ಕೂಡ ಚಿತ್ರ ದಾಖಲಿಸಿದೆ. ಯಾಕೆಂದರೆ ಶ್ಯಾನುಭೋಗರ ಮಗಳ ಪಾತ್ರಧಾರಿ (ಆರಾಧನಾ ರಾಮ್) ಚಿತ್ರದಲ್ಲಿ ತಳಸಮುದಾಯದವರಿಗೆ ಜಾಗೃತಿ ಮೂಡಿಸುವ ಶೈಕ್ಷಣಿಕ ದನಿಯಾಗಿ ಹೊರಹೊಮ್ಮುತ್ತಾಳೆ. ದಿ.ಇಂದಿರಾಗಾಂಧಿ, ದಿ.ದೇವರಾಜ ಅರಸುರವರ ಕಾಲದ ಕಥೆ ಹೇಳುವ ಸಿನೆಮಾದಲ್ಲಿ ಆಕೆ ಸರಕಾರ ತಂದಿರುವ ಉಳುವವನೇ ಭೂಮಿಯ ಒಡೆಯ ಕಾನೂನಿನ ಇಂಚಿಂಚನ್ನು ಅನಕ್ಷರಸ್ಥ ಆದರೆ ಸಮಾನತೆಯ ತುಡಿತ, ಹೋರಾಟದ ಕಿಚ್ಚು ಇರುವ ಆ ಸಮುದಾಯದ ಮಂದಿಗೆ ಅರಿವು ಮೂಡಿಸುತ್ತಾಳೆ. ಆ ಮೂಲಕ ಹೇಗೆ ಒಂದು ಹೋರಾಟ, ವಿಶೇಷವಾಗಿ ಸಾಮಾಜಿಕ ಹೋರಾಟ ಪ್ರಜ್ಞಾವಂತರ ಮೂಲಕ ಅದರಲ್ಲೂ ಎಲ್ಲಾ ಜಾತಿಗಳ ಪ್ರಜ್ಞಾವಂತರ ಮೂಲಕ ರೂಪುಗೊಳ್ಳುತ್ತದೆ, ಅದಕ್ಕೆ ವ್ಯವಸ್ಥೆಯಲ್ಲಿ ಯಾರ್ಯಾರ ಬೆಂಬಲ ಬೇಕು, ಹೊಣೆಗಾರಿಕೆ ಏನು ಎಲ್ಲವನ್ನು ಚಿತ್ರ ಸಾಂಕೇತಿಕವಾಗಿ ಅಷ್ಟೇ ಪ್ರಭಾವಶಾಲಿಯಾಗಿ ತೋರಿಸುತ್ತದೆ. ಯಾವ ಹಂತಕ್ಕೆಂದರೆ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ತಳ ಸಮುದಾಯದ ಜನರನ್ನು ಹಿಂಸಿಸುವ ಪೊಲೀಸ್ ಪಾತ್ರ(ಅಚ್ಯುತ ಕುಮಾರ್) ಕೂಡ ದೌರ್ಜನ್ಯದ ವಿರುದ್ಧ ಸಿಡಿದೇಳುವ ಆ ನಾಯಕನ ಪಾತ್ರಕ್ಕೆ ಕೈಜೋಡಿಸುವ ಮಟ್ಟಕ್ಕೆ, ನೇರ ತಳಸಮುದಾಯದ ಪರ ನಿಲ್ಲುವಷ್ಟರ ಮಟ್ಟಿಗೆ.

ಚಿತ್ರ ಬಹು ವೇಗವಾಗಿ ಸಾಗುತ್ತದೆ. ಅಸಮಾನತೆ ವಿರುದ್ಧ, ಅಸ್ಪಶ್ಯತೆಯ ವಿರುದ್ಧ, ದೌರ್ಜನ್ಯದ ವಿರುದ್ಧ ಸಿಡಿದೇಳಿಸುತ್ತ ಸಿನೆಮಾದುದ್ದಕ್ಕೂ ನೋಡುಗನನ್ನು ತಮ್ಮ ತಮ್ಮ ಸಾಮಾಜಿಕ ಸ್ಥಾನ, ತಾವು ಮಾಡುವ ತಪ್ಪುಗಳು, ಅನುಭವಿಸುವ ನೋವುಗಳು ಎಲ್ಲವನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಇಂತಹ ಒಂದು ಪರಿಕಲ್ಪನೆ ಕಟ್ಟಿಕೊಟ್ಟಿರುವ ನಿರ್ದೇಶಕ (ತರುಣ್ ಕಿಶೋರ್ ಸುಧೀರ್), ದೃಶ್ಯಗಳನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕ (ಸುಧಾಕರ್), ನೊಂದವರ ಆಕ್ರೋಶಕ್ಕೆ ತಕ್ಕಂತೆ ಸಂಭಾಷಣೆ ಹೆಣೆದಿರುವ ಸಂಭಾಷಣೆಗಾರ (ಮಾಸ್ತಿ), ಅಪರೂಪದ ಕಥೆ ಬರೆದಿರುವ ಕತೆಗಾರ (ಜಡೇಶ ಹಂಪಿ) ಎಲ್ಲರೂ ಅಭಿನಂದನಾರ್ಹರಾಗುತ್ತಾರೆ. ವಿಶೇಷವಾಗಿ ಸಿನೆಮಾ ಮಂದಿ ಕೇವಲ ದುಡ್ಡು ಮಾಡು ವುದಕ್ಕಷ್ಟೇ ಅಲ್ಲ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು ಎಂಬ ಅದ್ಭುತ ಸಂದೇಶವನ್ನು ನಿರ್ಮಾಪಕರು ನೀಡಿದ್ದಾರೆ (ನಿರ್ಮಾಪಕ: ರಾಕ್ ಲೈನ್ ವೆಂಕಟೇಶ್).

ಕೊನೆಯಲ್ಲಿ ಚಿತ್ರದ ದೃಶ್ಯವೊಂದರ ಸಂಭಾಷಣೆಯೊಂದನ್ನು ಇಲ್ಲಿ ದಾಖಲಿಸು ವುದಾದರೆ, ನಟಿ ಶ್ರುತಿ ನಾಯಕ ದರ್ಶನ್‌ನನ್ನು

‘‘ಹೊಲೆ ಮಾರಿ ತರಕ್ ಹೋದ್ರೆ ನಿನ್ ಬದುಕಕ್ ಬಿಟ್ಟರಾ?’’ ಎನ್ನುತ್ತಾರೆ. ನಾಯಕ ದರ್ಶನ್ (ಕಾಟೇರ ಪಾತ್ರಧಾರಿ)

‘‘ಈಗೇನು ಬದುಕಿದ್ದೀವಿ ಅಂತ ಅಂದ್ಕೊಂಡಿ ದ್ದೀಯಾ?’’ ಎನ್ನುತ್ತಾನೆ! ಮುಂದುವರಿದು ಆತ ನಡಿಯೋ ದಾರಿ ನಮ್ಮದಲ್ಲ, ಉಳೋ ಭೂಮಿ ನಮ್ಮದಲ್ಲ, ಕುಡಿಯೋ ನೀರ್ ನಮ್ಮದಲ್ಲ. ತಿನ್ನೋ ಅನ್ನದಿಂದ ಉಡೋ ಬಟ್ಟೆ ತನಕ ಎಲ್ಲಾ ಜಾತಿಮೇಲಳಿತಾರೆ. ಬೆಳೆ ಬೆಳೆಯೋರ್ ನಾವು ಪಾಲ್ ತಗೊಳೋರ್ ಅವರು. ಮೆಟ್ಟು ಮಾಡೋರು ನಾವು ಮೆಟ್ಕಂಡ್ ಓಡಾಡೋರು ಅವರು. ಗೇಮೆ ನಮ್ಮದು ಆದಾಯ ಅವರದು. ನಾಯಿಗಳಾದ್ರೂ ಎಲ್ಲೆಂದರಲ್ಲಿ ಓಡಾಡ್ತವೆ. ನಾವು? ಅದಕ್ಕಿಂತ ಕಡೆಯಾಗೋದ್ವಾ? ಇದೆಲ್ಲ ಯಾರ್ತವ ಹೇಳ್ಕೊಳ್ಳುವ? ದೇವರ್ ತಾವ ಎಲ್ಲಿ ಹೇಳ್ಕೊಬುಡ್ತೀವೋ ಅಂತ ದೇವಸ್ಥಾನದೊಳಕ್ಕೂ ನಮ್ಮನ್ನ ಬಿಡಾಕಿಲ್ಲ...

ಇಂತಹ ನೂರಾರು ಡೈಲಾಗ್‌ಗಳು, ಜಾತಿ ಅಸಮಾನತೆ ವಿರುದ್ಧ ಇಂತಹ ಹತ್ತಾರು ನಿರ್ಭಿಡೆಯ ದೃಶ್ಯಗಳು... ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಘೋತ್ತಮ ಹೊ.ಬ.

contributor

Similar News