18 ಶಾಸಕರ 6 ತಿಂಗಳ ಅಮಾನತು ಪ್ರಕರಣ; ವರ್ತನೆ ಪುನರಾವರ್ತಿಸಿದರೆ ಮತ್ತೆ ಕಠಿಣ ಕ್ರಮ: ಯು.ಟಿ.ಖಾದರ್

ಮಂಗಳೂರು, ಮಾ. 24: ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೇರಿ ದುಂಡಾವರ್ತನೆ ತೋರಿದ್ದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವುದನ್ನು ಶಾಸಕರು ಶಿಕ್ಷೆ ಎಂದು ಭಾವಿಸುವುದು ಬೇಡ. ಅವತ್ತು ನಡೆದ ಘಟನೆ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮತ್ತೆ ಇಂತಹ ವರ್ತನೆ ಮುಂದುವರಿಸಿದರೆ ಒಂದು ವರ್ಷ ಅಮಾನತು ಅಥವಾ ಕಾಯ್ದೆಯಡಿ ಲಭ್ಯವಿರುವ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಕೊನೆಯ ದಿನದಂದು ಧನ ವಿನಿಯೋಗದ ಬಿಲ್ ಮಂಜೂರು ಮಾಡುವ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುವ ರೀತಿಯಲ್ಲಿ ಕೆಲ ಶಾಸಕರು ವರ್ತಿಸಿದ್ದರು. ಸಂವಿಧಾನ ಪೀಠದ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರು ತಿಂಗಳು ಅಮಾನತು ಮಾಡಲಾಗಿದೆ ಎಂದವರು ಹೇಳಿದರು.
ಹಿಂದೆ ಇಂತಹ ಘಟನೆಗಳು ಆದರೂ ಈ ರೀತಿಯ ಶಿಕ್ಷೆ ನೀಡಲಾಗಿಲ್ಲ ಎಂದಾದರೆ ಅದು ಹಿಂದಿನ ಸ್ಪೀಕರ್‌ಗಳಿಗೆ ಆ ಧೈರ್ಯ ಇರಲಿಲ್ಲ ಎಂದು ಅರ್ಥ. ಅದರಿಂದಾಗಿಯೇ ಶಾಸಕರು ಏನೂ ಆಗದು ಎಂಬ ಧೈರ್ಯದಲ್ಲಿ ಈ ರೀತಿ ವರ್ತಿಸಿ ರಾಜ್ಯದ ಘನತೆಗೆ ಕುಂದು ತಂದಿದ್ದಾರೆ. ಧನ ವಿನಿಯೋಗದ ಬಿಲ್ ಮಂಜೂರು ಆಗುವುದು ಕೊನೆಯ ದಿನದಂದು. ಅದನ್ನು ತಡೆಯುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ. ಆ ಬಿಲ್‌ಗಳು ಮಂಜೂರು ಆಗದಿದ್ದರೆ, ವೇತನ ಪಾವತಿ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಮತ್ತೆ ಬಿಲ್ ಮಂಡಿಸಲೂ ಆಗುವುದಿಲ್ಲ. ಅವರ ಆ ವರ್ತನೆಗೆ ಅಧಿವೇಶನ ಮುಗಿಯುವರೆಗೆ ಮಾತ್ರ ಮಾಡಿದರೆ, ಕೊನೆಯ ದಿನ ಈ ರೀತಿ ಮಾಡುವುದರಿಂದ ತಮಗೇನು ತೊಂದರೆ ಆಗದು ಎಂಬ ಕಲ್ಪನೆ ದೂರವಾಗಬೇಕು. ರಾಜ್ಯದಲ್ಲಿ ಸದನಕ್ಕಿಂತ ದೊಡ್ಡ ಸಂವಿಧಾನ ಸಂಸ್ಥೆ ಬೇರಿಲ್ಲ. ಅಧ್ಯಕ್ಷ ಪೀಠಕ್ಕಿಂತ ದೊಡ್ಡದು ಅಲ್ಲಿ ಬೇರೆ ಇಲ್ಲ ಎಂಬ ಅರಿವು ಶಾಸಕರಿಗೆ ಇರಬೇಕು. ಸಭಾಧ್ಯಕ್ಷನಾಗಿ ಈ ರೀತಿಯ ವರ್ತನೆ ಸಹಿಸಲು ಅಸಾಧ್ಯ ಹಾಗಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ರಾಜಕೀಯದವರು ಇರುವುದು ಕೇವಲ ಶೇ. 5ರಷ್ಟು ಮಂದಿ. ಉಳಿದಂತೆ ಶೇ. 95 ಮಂದಿ ರಾಜ್ಯದ ಸಾಮಾನ್ಯ ಜನರಿದ್ದಾರೆ. ಅವರು ಈ ವರ್ತನೆಯನ್ನು ಕಂಡು ಅಸಹ್ಯ ಪಟ್ಟಿದ್ದಾರೆ. ಮುಖ್ಯಮಂತ್ರಿಯಾಗಲಿ ಅಥವಾ ಇತರ ಯಾರದ್ದೇ ಒತ್ತಡದಿಂದ ಈ ಕ್ರಮ ಕೈಗೊಂಡಿದ್ದಲ್ಲ. ಬದಲಾಗಿ ಸ್ಪೀಕರ್ ಸ್ಥಾನದಲ್ಲಿದ್ದು ಅಧಿಕಾರ ಉಪಯೋಗಿಸಿಕೊಂಡಿದ್ದೇನೆ. ಸದನದಲ್ಲಿ ಸ್ಪೀಕರ್ ಸುಪ್ರೀಂ. ಪಕ್ಷಾಂತರ ಮಾಡೋದಾಗಿದ್ದರೂ ನಾನು ಕಾಯದೆ ಅಂತಹ ಶಾಸಕರನ್ನು ಅನರ್ಹ ಕೊಳಿಸುತ್ತಿದೆ. ಕಾಯ್ದೆ ಗಟ್ಟಿಯಾಗಿದ್ದು, ಅದನ್ನು ಬಳಕೆ ಮಾಡದಿದ್ದರೆ ಅದು ದುರ್ಬಲವಾಗುತ್ತದೆ ಎಂದವರು ಹೇಳಿದರು.
ಸದನದಲ್ಲಿ ಸಚಿವ ರಾಜಣ್ಣ ರವರು ಹನಿಟ್ರ್ಯಾಪ್ ಬಗ್ಗೆ ಆರೋಪಿಸಿದಾಗ ಚರ್ಚೆಗೆ ಯತ್ನಾಳ್ ಅನುಮತಿ ಕೋರಿದ್ದರು. ಮುಕ್ಕಾಲು ಗಂಟೆ ಅನುಮತಿ ನೀಡಲಾಗಿತ್ತು. ಗೃಹ ಸಚಿವರು ಪ್ರತಿಕ್ರಿಯಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು. ಆಗ ಎಲ್ಲರೂ ಒಪ್ಪಿ ಮೌನವಾಗಿದ್ದರು.
ಮರುದಿನ ಮರುದಿನ ಸಿಎಂ ಬಜೆಟ್ ಭಾಷಣ ಮಾಡುವಾಗ ಮತ್ತೆ ಚರ್ಚೆ ಮಾಡಿದಾಗಲೂ ಅವಕಾಶ ನೀಡಲಾಯಿತು. ಆಗ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಈ ಆರೋಪವನ್ನು ಸದನ ಗಂಭೀರವಾಗಿ ತೆಗೆದುಕೊಂಡಿದೆ. ಯಾವ ರೀತಿಯ ಉನ್ನತ ಮಟ್ಟದ ತನಿಖೆ ಸಾಧ್ಯವೋ ಅದನ್ನು ಮಾಡುವುದಾಗಿ ಉತ್ತರ ನೀಡಿದ್ದರು. ಈ ಸಂದರ್ಭ ಜನಸಾಮಾನ್ಯರಿಗೆ ಪೂರಕವಾದ ಧನ ವಿನಿಯೋಗ ಬಿಲ್‌ನ ಚರ್ಚೆ ಬಿಟ್ಟು ಮತ್ತೆ ಗಲಾಟೆ ಮಾಡಿ, ಸದನದ ಪೀಠಕ್ಕೆ ಅಗೌರವ ತೋರಿದ್ದನ್ನು ಕ್ಷಮಿಸಲು ಸಾಧ್ಯವಾಗದು. ಹಾಗಾಗಿ ಇಂತಹ ವರ್ತನೆಗಳಿಗೆ ಪೂರ್ಣ ವಿರಾಮ ಹಾಕಬೇಕಿದೆ. ಅದಕ್ಕಾಗಿ ನೋವಿನಿಂದಲೇ ಈ ಅಮಾನತು ನಿರ್ಧಾರ ಕೈಗೊಂಡಿರುವುದು ಎಂದು ಯು.ಟಿ.ಖಾದರ್ ಹೇಳಿದರು.