ಉಳ್ಳಾಲ ಖಾಝಿಯಾಗಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅಧಿಕಾರ ಸ್ವೀಕಾರ
ಉಳ್ಳಾಲ : ಗುರುಗಳ ಹಿರಿಯರ ಆಶೀರ್ವಾದದಿಂದ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ಧಾರ್ಮಿಕ ಶಿಕ್ಷಣ ನೀಡುವತ್ತ ಹೆಜ್ಜೆ ಇಟ್ಟೆ. ಅದರಿಂದ ಇಲ್ಲಿಯವರೆಗೆ ತಲುಪಿದೆ, ಮಡವೂರು ಶೈಖ್ ರವರ ಸೂಚನೆ ಮೇರೆಗೆ ಮರ್ಕಝ್ ಕಾಲೇಜು ಸ್ಥಾಪನೆ ಮಾಡಲಾಯಿತು. ಈ ಕಾಲೇಜು ಸ್ಥಾಪನೆ ಮಾಡುವ ಮೂಲಕ ಜವಾಬ್ದಾರಿಯುತವಾದ ಸ್ಥಾನ ವಹಿಸಿಕೊಂಡಿದ್ದೇನೆ ಎಂದು ಉಳ್ಳಾಲ ನೂತನ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂದಪುರಂ ಹೇಳಿದರು.
ಅವರು ಉಳ್ಳಾಲ ಜುಮಾ ಮಸ್ಜಿದ್ ದಿ ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಶನಿವಾರರ ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ಸಯ್ಯಿದ್ ಮದನಿ ಶರೀಅತ್ ಕಾಲೇಜು ಕಟ್ಟಡ ಶಿಲಾನ್ಯಾಸ ನೆರವೇರಿಸಿ ಹಾಗೂ ಖಾಝಿ ಸ್ಥಾನ ಸ್ವೀಕಾರ ಸಮಾರಂಭದಲ್ಲಿ ಪ್ರಸ್ತುತ ಸ್ಥಾನ ವಹಿಸಿಕೊಂಡ ಬಳಿಕ ಮಾತನಾಡಿದರು.
ಉಳ್ಳಾಲ , ಬೆಂಗಳೂರು, ಕನ್ಯಾನ, ಮಂಜೇಶ್ವರ ಸಹಿತ ಹಲವು ಕಡೆ ಖಾಝಿ ಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಧಾರ್ಮಿಕ ಕಾರ್ಯ ಚಟುವಟಿಕೆಗಳ ನಿರ್ವಹಣೆ ಮಾಡುತ್ತೇನೆ. ಗುರುಗಳ, ಹಿರಿಯರ ಪಂಡಿತರ ಆಶೀರ್ವಾದ ನನಗೆ ಸದಾ ಇದೆ. ಒಗ್ಗಟ್ಟಿನ ಬದುಕು ನಮ್ಮದು ಆಗಬೇಕು. ಜವಾಬ್ದಾರಿಯುತ ಕೆಲಸ ನಮ್ಮಿಂದ ಈಡೇರಬೇಕು. ಉಳ್ಳಾಲ ಧಾರ್ಮಿಕ ಶಿಕ್ಷಣದಲ್ಲಿ ಬೆಳೆದಿದೆ. ಶಿಕ್ಷಣ ದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಬೇಕು ಎಂದು ಕರೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ ಮಾತನಾಡಿ, ಖಾಝಿ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಧೂಮಪಾನ ಮಾಡಬಾರದು ಎಂದು ಖಾಝಿ ಹೇಳಿದರೆ ಅದನ್ನು ಪಾಲನೆ ಮಾಡುವುದು ಕಡ್ಡಾಯ. ಅವರ ಹೇಳಿಕೆ ಉಲ್ಲಂಘಿಸಿ ಧೂಮಪಾನ ಮಾಡುವಂತಿಲ್ಲ. ಅದೇ ರೀತಿ ಧಾರ್ಮಿಕ ರಂಗಗಳಲ್ಲಿ ತಲೆದೋರುವ ಸಮಸ್ಯೆಗಳಿಗೆ ಅವರ ತೀರ್ಮಾನ ಅಂತಿಮ ಆಗಲಿದೆ ಎಂದು ಹೇಳಿದರು.
ಸುಮಾರು 500 ವರ್ಷಗಳ ಹಿಂದೆ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಉಳ್ಳಾಲಕ್ಕೆ ಬಂದು ಧಾರ್ಮಿಕ ಶಿಕ್ಷಣ ಅಭಿವೃದ್ಧಿಗೆ ಒತ್ತು ನೀಡಿದರು. ಕೆಲವು ವರ್ಷಗಳ ಕಾಲ ಅವರೇ ಖಾಝಿಯಂತಿದ್ದರು, ನಂತರ ಹಲವು ವರ್ಷಗಳ ಬಳಿಕ 1847 ರಲ್ಲಿ ಹುಟ್ಟಿದ ಕೋಟಿಕುಳಮ್ ಬಪ್ಪಮ್ ಕುಟ್ಟಿ ಮುಸ್ಲಿಯಾರ್ ಅವರು ಉಳ್ಳಾಲದ ಖಾಝಿಯಾದರು. ಅವರು 1914 ರಲ್ಲಿ ಅವರು ನಿಧನರಾಗುವರೆಗೂ ಅವರೇ ಖಾಝಿಯಾಗಿದ್ದರು, .ಇವರ ಬಳಿಕ 1929ರಲ್ಲಿ ಖತೀಬರಾಗಿದ್ದ ಯೂಸುಫ್ ಮುಸ್ಲಿಯಾರ್ ಖಾಝಿಯಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರು, 1948ರ ಸುಮಾರಿಗೆ ವಿಳಿಮುಕ್ಕ್ ಎ.ಪಿ ಅವರಾನ್ ಮುಸ್ಲಿಯಾರ್ ಉಳ್ಳಾಲದ ಖಾಝಿಯಾದರು, 1978ರಲ್ಲಿ ಅವರು ನಿಧನರಾದರು, ನಂತರ 09.11.1978ರಲ್ಲಿ ಖಾಝಿ ಆಗಿ ನೇಮಕ ಗೊಂಡ ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ಅಲ್ ಬುಖಾರಿಯವರು ಉಳ್ಳಾಲ ಕ್ಷೇತ್ರದಲ್ಲಿ ಧಾರ್ಮಿಕ ಶಿಕ್ಷಣ ಬೆಳವಣಿಗೆಗೆ ಕಾರಣರಾದರು, ಅವರು 2014ರವರೆಗೆ ಖಾಝಿ ಸ್ಥಾನ ನಿರ್ವಹಿಸಿದ್ದರು.2014ರಿಂದ 2024 ವರೆಗೆ ಫಝಲ್ ಕೋಯಮ್ಮ ತಂಙಳ್ ಖಾಝಿ ಆದರು ಎಂದು ಹೇಳಿದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಿ ಖಾಝಿ ಸ್ಥಾನದ ಮಹತ್ವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಈಸುಲ್ ಉಲಮಾ ಇ.ಸುಲೈಮಾನ್ ಉಸ್ತಾದ್ ಮಾತನಾಡಿ,ಎ.ಪಿ.ಉಸ್ತಾದ್ ಖಾಝಿ ಆಗಿ ಜವಾಬ್ದಾರಿ ವಹಿಸಿದ್ದಾರೆ. ಈ ಸ್ಥಾನ ಪಡೆಯಲು ಎಲ್ಲರಿಗೂ ಹೆದರಿಕೆ ಇದೆ. ಎ.ಪಿ ಉಸ್ತಾದರು ನಮಗೆ ಖಾಝಿ ಆಗಿ ಲಭಿಸಿದ್ದು ನಮ್ಮ ಬಾಗ್ಯ, ಖಾಝಿ ಆದವರಿಗೆ ಜವಾಬ್ದಾರಿ ಇರುತ್ತದೆ.ಅದನ್ನು ನಿರ್ವಹಣೆ ಮಾಡುವುದು ಕರ್ತವ್ಯ ಆಗಿರು ತ್ತದೆ. ಈ ಜವಾಬ್ದಾರಿಯುತ ಸ್ಥಾನದಲ್ಲಿ ಎಪಿ ಉಸ್ತಾದ್ ಆಫಿಯತ್ತಿನೊಂದಿಗೆ ದೀರ್ಘಕಾಲ ಮುಂದುವರಿಯಲಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು, 60 ವರ್ಷ ಗಳ ಕಾಲ ತಾಜುಲ್ ಉಲಮಾ ಅವರಿಂದ ಪಳಗಿದ ಊರಾಗಿದೆ ಉಳ್ಳಾಲ. ಇವರ ಬಳಿಕ ಖಾಝಿ ಆಗಿದ್ದ ಅವರ ಸುಪುತ್ರ ಫಝಲ್ ಕೋಯಮ್ಮ ತಂಙಳ್ ರವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಎ.ಪಿ.ಉಸ್ತಾದ್ ಆಯ್ಕೆ ಆದರು.ಅವರು ಧಾರ್ಮಿಕ, ಶೈಕ್ಷಣಿಕ ವಿಚಾರದಲ್ಲಿ ಬಹಳಷ್ಟು ಪಳಗಿದವರು.ಏಕಕಾಲಕ್ಕೆ 25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವವರು.ಉಳ್ಳಾಲ ದಕ್ಷಿಣ ಭಾರತದ ಅಜ್ಮೀರ್ ಆಗಿದೆ. ಇಲ್ಲಿಗೆ ಅವರಂತಹ ಖಾಝಿ ಬೇಕಾಗಿದೆ. ಬೆಂಗಳೂರು ನಿಂದ ಹಿಡಿದು ಉಳ್ಳಾಲದವರೆಗೆ ಅವರೇ ಖಾಝಿ ಆಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಉಳ್ಳಾಲ ದರ್ಗಾ ಸಮಾಜಕ್ಕೆ ಉತ್ತಮ ಸಾಧನೆ ಮಾಡಿ ದೇಶಕ್ಕೆ ಹೆಸರು ಮಾಡಿದೆ ಎಂದು ಹೇಳಿದರು.
ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಎ.ಪಿ.ಉಸ್ತಾದ್ ಖಾಝಿ ಆಗಿದ್ದಾರೆ.ಅವರಿಗೆ ಜವಾಬ್ದಾರಿ ಬಹಳಷ್ಟು ಇವೆ ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದ ಅವರು ಈ ಸ್ಥಾನಕ್ಕೆ ಸರ್ವತಾ ಅರ್ಹರು.ಇದನ್ನು ನಾವು ಸದುಪಯೋಗ ಪಡಿಸಿಕೊಂಡು ಹೋಗಬೇಕು. ಉಳ್ಳಾಲದಲ್ಲಿ 1982 ರಲ್ಲಿ ದರ್ಗಾ ವತಿಯಿಂದ ಆಸ್ಪತ್ರೆ ಆರಂಭ ಆಗಿದೆ. ಆ ಕಾಲದಲ್ಲಿಯೇ ದುಡ್ಡು ಮಾಡಬೇಕು ಎಂಬ ಗುರಿ ಇಡುವ ಬದಲು ಸಮಾಜಕ್ಕೆ ಸೇವೆ ನೀಡಬೇಕು ಎಂಬ ಉದ್ದೇಶ ಇಟ್ಟು ಕೊಂಡಿದ್ದರು, ಎರಡು ವರ್ಷಗಳ ಒಳಗೆ ಉಳ್ಳಾಲ ಕ್ಕೆ 24 ಗಂಟೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ತಿಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸಯ್ಯಿದ್ ಅಲಿ ಬಾಫಖೀ ತಂಙಳ್ ದುಆ ನೆರವೇರಿಸಿದರು. ಈ ಸಂದರ್ಭ ಸುಲ್ತಾನುಲ್ ಉಲಮಾ ಕಾಂದಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಖಾಝಿ ಸ್ಥಾನ ಅಲಂಕರಿಸಿದರು. ಸಯ್ಯಿದ್ ಹಾಮಿದ್ ಇಂಬಿಚ್ಚಿಕ್ಕೋಯ ತಂಙಳ್ ಖಾಝಿಯವರಿಗೆ ಪೇಟ ತೊಡಿಸಿದರು, ಈ ವೇಳೆ ಜಮಾಅತ್ ನ 28 ಮೊಹಲ್ಲಾ ಗಳ ಅಧ್ಯಕ್ಷರುಗಳು ಎಪಿ ಉಸ್ತಾದ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು. ಡಾ.ಹುಸೈನ್ ಸಖಾಫಿ ಚುಳ್ಳಿಕೋಡ್, ಡಾ.ಅಬ್ದುಲ್ ಹಕೀಂ ಅಝ್ಹರಿ, ಅಶ್ರಫ್ ತಂಙಳ್ ಆದೂರು, ಅತ್ತಾವುಲ್ಲ ತಂಙಳ್ ಮಂಜೇಶ್ವರ ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟು, ಸಯ್ಯಿದ್ ಮದನಿ ಶರೀಅತ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ, ಕೇಂದ್ರ ಜುಮಾ ಮಸ್ಜಿದ್ ಖತೀಬ್ ಇಬ್ರಾಹಿಂ ಸಅದಿ, ಶಾಫಿ ಸಅದಿ ಬೆಂಗಳೂರು, ಪೌರಾಡಳಿತ ಸಚಿವ ರಹೀಮ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಯುಟಿ ಇಫ್ತಿಕಾರ್ ಅಲಿ, ಯೆನೆಪೋಯ ಸಮೂಹ ಸಂಸ್ಥೆಯ ಚೆರ್ಮೇನ್ .ವೈ ಅಬ್ದುಲ್ಲಾ ಕುಂಞಿ ಹಾಜಿ ಯೆನೆಪೋಯ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಯು.ಕೆ ಮೋನು ಕಣಚೂರು, ಮಾಜಿ ಡಿವೈಎಸ್ಪಿ ಜಿ.ಎ.ಬಾವ, ಎಸ್.ಎಂ.ರಶೀದ್ ಹಾಜಿ, ಮಾಜಿ ಸಚಿವ ಸಿ ಎಂ ಇಬ್ರಾಹಿಂ , ಅಬ್ದುಲ್ ರಶೀದ್ ಝೈನಿ, ಹುಸೈನ್ ಸಅದಿ ಕೆಸಿರೋಡು, ಮಾಜಿ ಅಧ್ಯಕ್ಷ ಹಂಝ ಹಾಜಿ,ಅಲ್ ಮದೀನಾ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ,ಅಶ್ ರಿಯ್ಯ ಮುಹಮ್ಮದ್ ಅಲಿ ಸಖಾಫಿ, ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ಅಬೂ ಝಿಯಾದ್ ಮದನಿ ಪಟ್ಟಾಂಬಿ, ಮುಹಮ್ಮದ್ ಫೈಝಿ ಮೋಂಙಂ, ಹಸನ್ ಅಬೂಬಕ್ಕರ್ ಅಶ್ರಫಿ ಬೋಂಬೈ, ಅಮೀನ್ ಹಾಜಿ ಮಂಗಳೂರು, ಅಬ್ದುಲ್ ರಶೀದ್ ಮದನಿ ಆಲಪ್ಪುಝ, ಮಹಮೂದ್ ಹಾಜಿ ಕೋಟೆಪುರ, ಅಬ್ದುಲ್ ರಹ್ಮಾನ್ ಮದನಿ ಮೂಳೂರು ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಹಸೈನಾರ್ ಕೋಟೆಪುರ, ಕೋಶಾಧಿಕಾರಿ ನಾಝಿಮ್, ಅಡಿಟರ್ ಫಾರೂಕ್, ಕಾರ್ಯದರ್ಶಿ ಇಸಾಕ್, ಮುಸ್ತಫ, ಸಯ್ಯಿದ್ ಮದನಿ ದರ್ಗಾ, ಚಾರಿಟೇಬಲ್ ಟ್ರಸ್ಟ್, ಅರಬಿಕ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.