ಮೇ 26 ರಂದು ‘BEARYINFO.COMʼ ಲೋಕಾರ್ಪಣೆ

Update: 2024-05-24 12:34 GMT

ಮಂಗಳೂರು: ಬ್ಯಾರಿ ಸಮುದಾಯದ ಸಾಹಿತ್ಯ, ಇತಿಹಾಸ, ಭಾಷೆ, ಸಂಸ್ಕೃತಿ, ಸಂಘಟನೆ, ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ಗ್ರಂಥಗಳು, ಪ್ರಬಂಧಗಳು, ಅಗಲಿದ ಮಹನೀಯರ ನೆನಪು, ಸಾಧಕರ ಪರಿಚಯ, ಸಾಧನೆ ಹೀಗೆ ಬ್ಯಾರಿಗಳ ಸಮಗ್ರ ಮಾಹಿತಿಗಳನ್ನು ಒಳಗೊಂಡ ‘ಬ್ಯಾರಿಇನ್‌ಫೋಡಾಟ್‌ಕಾಂʼ (BEARYINFO.COM) ಹೆಸರಿನ ವೆಬ್‌ಸೈಟನ್ನು ಮೇ 26ರಂದು ಅಪರಾಹ್ನ 2:30ಕ್ಕೆ ಮಂಗಳೂರಿನ ಹೊಟೇಲ್ ಮೋತಿ ಮಹಲ್‌ನ ‘ಕನ್ವೆನ್‌ಷನ್ ಸೆಂಟರ್‌ೞ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹಿರಿಯ ಸಾಹಿತಿಗಳಾದ ಮುಹಮ್ಮದ್ ಅಲಿ ಕಮ್ಮರಡಿ ಮತ್ತು ಮುಹಮ್ಮದ್ ಕುಳಾಯಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 3 ದಶಕಗಳಿಂದ ಬ್ಯಾರಿ ಭಾಷೆ ಮತ್ತು ಸಾಹಿತ್ಯದ ನಿಟ್ಟಿನಲ್ಲಿ ಆಂದೋಲನ ರೂಪದ ಕಾರ್ಯಚಟುವಟಿಕೆಗಳು ನಡೆದಿದೆ. ಅದರ ಫಲವಾಗಿ ಕರ್ನಾಟಕ ರಾಜ್ಯ ಸರಕಾರ ‘ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೊಂಡಿದೆ. ನೂರಾರು ಬ್ಯಾರಿ ಕೃತಿಗಳು, ಸಂಶೋಧನಾ ಗ್ರಂಥಗಳು ಪ್ರಕಟವಾಗಿದೆ. ವಿಶ್ವದಾದ್ಯಂತ ಆಸಕ್ತರಿಗೆ ಬ್ಯಾರಿ ಭಾಷೆ, ಸಾಹಿತ್ಯ, ಸಮುದಾಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸೃಷ್ಟಿಯಾಗಿದೆ. ಅನೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬ್ಯಾರಿಯ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಲು, ಪ್ರಬಂಧ ಮಂಡಿಸಲು, ಡಾಕ್ಟರೇಟ್ ಪಡೆಯಲು ಮುಂದಾಗಿದ್ದಾರೆ. ಆದರೆ ಇವರಿಗೆಲ್ಲ ಇರುವ ಏಕೈಕ ಸಮಸ್ಯೆ ಎಂದರೆ ಅಗತ್ಯ ಇರುವ ಗ್ರಂಥಗಳನ್ನು ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದು. ಇದನ್ನು ಮನಗಂಡ ನಾವು ಈ ಸಮಸ್ಯೆಗಳನ್ನು ನೀಗಿಸಲು, ಬ್ಯಾರಿ ಸಮುದಾಯವನ್ನು ಜಗತ್ತಿಗೆ ಪರಿಚಯಿಸಲು ಈ ವೆಬ್‌ಸೈಟ್ ಸ್ಥಾಪಿಸಿದ್ದೇವೆ. ವೆಬ್‌ಸೈಟಿಗೆ ಪೂರಕವಾಗಿ ʼbearyinfo’ ಎಂಬ ಯುಟ್ಯೂಬ್ ಚಾನೆಲ್ ತೆರೆಯಲಾಗಿದೆ. ಫೇಸ್‌ಬುಕ್ ಮತ್ತು ಇಸ್ಟಾಗ್ರಾಂಗಳಲ್ಲೂ ಖಾತೆ ತೆರೆಯಲಾಗಿದೆ ಎಂದರು.

ಈ ವೆಬ್‌ಸೈಟನ್ನು ಯಾವುದೇ ಆರ್ಥಿಕ ಲಾಭ ಬಯಸದೆ ಸಂಪೂರ್ಣ ಸಾಮಾಜಿಕ ಸೇವಾ ನೆಲೆಯಲ್ಲಿ ಸ್ಥಾಪಿಸಲಾಗಿದೆ. ಈಗಾಗಲೇ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ವೆಬ್‌ಸೈಟ್‌ಗೆ ಸಹಸ್ರಾರು ಮಂದಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಲಿದ್ದು, ಬೆಂಗಳೂರು ಟೀಕೇಸ್ ಗ್ರೂಪಿನ ಮುಖ್ಯಸ್ಥ ಉಮರ್ ಟೀಕೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜಿನ ಸ್ಥಾಪಕ ಡಾ.ಯು.ಕೆ. ಮೋನು, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್, ಸೌದಿ ಅರೇಬಿಯದ ಎಕ್‌ಸ್ಪರ್ಟೈಝ್ ಕಾಂಟ್ರಾಕ್ಟಿಂಗ್ ಕಂಪನಿಯ ಉಪಾಧ್ಯಕ್ಷ ಕೆ.ಎಸ್. ಶೇಕ್ ಕರ್ನಿರೆ, ಸೌದಿ ಅರೇಬಿಯದ ಅಲ್ ಮುಝೈನ್ ಕಂಪನಿಯ ಸಿಇಒ ಬಿ. ಝಕರಿಯ ಜೋಕಟ್ಟೆ, ಬೆಂಗಳೂರಿನ ಬ್ಯಾರೀಸ್ ಗ್ರೂಪ್‌ನ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿಯ ಕುಲಪತಿ ಡಾ. ನಿಸಾರ್ ಅಹ್ಮದ್, ಮಂಗಳೂರಿನ ಆಝಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಬೆಂಗಳೂರಿನ ಪ್ರಿಮಿಯರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಓಸಿಯನ್ ಕನ್‌ಸ್ಟಕ್ಷನ್ ಪ್ರೈ.ಲಿ.(ಇಂಡಿಯಾ) ಇದರ ನಿರ್ದೇಶಕ ಇನಾಯತ್ ಅಲಿ ಮುಲ್ಕಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಬ್ಯಾರಿ BEARYINFO.COM ವೆಬ್‌ಸೈಟಿನಲ್ಲಿ ಸದ್ಯ ಇರುವ ವಿವಿಧ ವಿಭಾಗ/ಮಾಹಿತಿಗಳ ವಿವರ

ಬ್ಯಾರಿ ಲೈಬ್ರರಿ ವಿಭಾಗದಲ್ಲಿ 132 ಬ್ಯಾರಿ ಭಾಷೆಯ ಕೃತಿಗಳು, ಬ್ಯಾರಿಗೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲಿಷ್ ಸಂಶೋಧನಾ 13 ಗ್ರಂಥಗಳು, ಬ್ಯಾರಿ ಲೇಖಕರ 50ಕ್ಕೂ ಅಧಿಕ ಕನ್ನಡ ಕೃತಿಗಳು, ಸಂಶೋಧನೆಗೆ ಸಂಬಂಧಪಟ್ಟ ಹಲವಾರು ಲೇಖನಗಳು ಮತ್ತು ಪ್ರಬಂಧಗಳು, ಬ್ಯಾರಿ ಸಂಘಟನೆಗಳು ಪ್ರಕಟಿಸಿದ ವಿಶೇಷಾಂಕಗಳು, 4 ಬ್ಯಾರಿ ಸಾಹಿತ್ಯ ಸಮ್ಮೇಳನ ಮತ್ತು 1 ಬ್ಯಾರಿ ಸಮ್ಮೇಳನಗಳಲ್ಲಿ ಮಂಡಿಸಿದ ಪ್ರಬಂಧಗಳು.

30ಕ್ಕೂ ಅಧಿಕ ಸಂಘಟನೆಗಳ ಪೈಕಿ ಸ್ಥಳೀಯ ಬ್ಯಾರಿ ಸಂಘಟನೆಗಳ ಪರಿಚಯ, ರಾಜ್ಯ ಮಟ್ಟದ ಬ್ಯಾರಿ ಸಂಘಟನೆಗಳ ಪರಿಚಯ, ದುಬೈ, ಅಬುಧಾಬಿ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಒಮಾನ್ ಹಾಗೂ ಇತರ ವಿದೇಶಗಳಲ್ಲಿರುವ ಬ್ಯಾರಿ ಸಂಘಟನೆಗಳ ಪರಿಚಯ, ಬ್ಯಾರಿಗಳ ಸಂಘಟನೆಗಳ ಪರಿಚಯ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಪರಿಚಯ, ಮೀಫ್‌ಗೆ ಒಳಪಟ್ಟ 140ಕ್ಕೂ ಅಧಿಕ ಶಾಲಾ - ಕಾಲೇಜುಗಳ ವಿವರ, ಬ್ಯಾರಿ ಮಹಿಳಾ ಲೇಖಕಿಯರ ಒಕ್ಕೂಟದ ಪರಿಚಯ, 60ಕ್ಕೂ ಅಧಿಕ ಲೇಖಕಿಯರ ವಿವರ, ಬ್ಯಾರಿ ವಾರ್ತೆ ಮಾಸಿಕದ ಕಳೆದ 8 ವರ್ಷಗಳ ಸಂಪೂರ್ಣ ಪ್ರತಿಗಳು, 50ಕ್ಕೂ ಅಧಿಕ ಬ್ಯಾರಿ ಗಣ್ಯರ ಪರಿಚಯ (ಇಂಗ್ಲಿಷ್‌ನಲ್ಲಿ) ಅಗಲಿದ 120ಕ್ಕೂ ಅಧಿಕ ಬ್ಯಾರಿ ಗಣ್ಯರ ಪರಿಚಯ (ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ), 20ಕ್ಕೂ ಅಧಿಕ ಬ್ಯಾರಿ ಲೇಖಕರ ಪರಿಚಯ, ಬ್ಯಾರಿ ಸಂಗೀತ, ಕಲಾವಿದರ ಒಕ್ಕೂಟದ ಪರಿಚಯ, ರಕ್ತದಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾರಿ ಸಂಘಟನೆಗಳ ಪರಿಚಯ.

ವೆಬ್‌ಸೈಟ್‌ಗೆ ಸೇರ್ಪಡೆ ಆಗಲಿರುವ ವಿಷಯಗಳು

ಬ್ಯಾರಿಗಳು ಸ್ಥಾಪಿಸಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಪರಿಚಯ,ಬ್ಯಾರಿಗಳ ಉದ್ದಿಮೆಗಳ ಪರಿಚಯ, ಬ್ಯಾರಿ ಡಾಕ್ಟರ್, ಇಂಜಿನಿಯರ್, ವಕೀಲರು, ಸಿಎ ಇತರ ಉನ್ನತ ಸೇವೆಯಲ್ಲಿರುವವರ ಮಾಹಿತಿ, ಸ್ಥಳೀಯ ಮತ್ತು ರಾಜ್ಯಮಟ್ಟದ ಬ್ಯಾರಿ ರಾಜಕಾರಣಿಗಳ ಪರಿಚಯ, ಡಾಕ್ಟರೇಟ್ ಮಾಡಿದ ಬ್ಯಾರಿಗಳ ಪರಿಚಯ ಮತ್ತು ಅವರ ಪ್ರಬಂಧಗಳು, ಸ್ಥಳೀಯ, ದೇಶ-ವಿದೇಶಗಳ ಉದ್ಯೋಗ ಮಾಹಿತಿ, ರಕ್ತದಾನಿಗಳ ವಿವರ, ಮೆಡಿಕಲ್ ಹೆಲ್ಪ್‌ಲೈನ್, ಬ್ಯಾರಿ ಭಾಷೆ, ಸಂಸ್ಕೃತಿ ಕುರಿತು ಸಂಶೋಧನೆಗೆ ಸಂಬಂಧಪಟ್ಟ ಲೇಖನಗಳು, ಬ್ಯಾರಿ ಬಿಸಿನೆಸ್ ಡೈರೆಕ್ಟರಿ, ವಿವಾಹ ವೇದಿಕೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News