ಮಂಗಳೂರು: ಮಹಿಳಾ ಕಾಂಗ್ರೆಸ್‌ ವತಿಯಿಂದ ಮಾ.8 ರಂದು ‘ಗೃಹಲಕ್ಷ್ಮಿ’ ಕಾರ್ಯಕ್ರಮ

Update: 2024-03-06 09:43 GMT

ಮಂಗಳೂರು, ಮಾ.6: ರಾಜ್ಯ ಸರಕಾರವು ಈಗಾಗಲೇ ಮನೆಯೊಡತಿಗೆ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಪೂರಕವಾಗಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಾ. 8ರಂದು ಗೃಹಲಕ್ಷ್ಮಿ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಮಹಿಳಾ ಆರ್ಥಿಕ ಸಬಲಕೀರಣದ ಒಂದು ಹೆಜ್ಜೆ’ ಎಂಬ ಶೀರ್ಷಿಕೆಯೊಂದಿಗೆ ಗೃಹಿಣಿಯರ ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ವ್ಯವಸ್ಥೆಯನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಲಾಗುತ್ತಿದೆ ಎಂದರು.

ಈಗಾಗಲೇ 70 ಮಳಿಗೆಗಳಿಗೆ ನೋಂದಣಿಯಾಗಿದ್ದು, ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ- ಮಾರಾಟಕ್ಕೆ ಅವಕಾಶ ದೊರೆಯಲಿದೆ. 2022ರಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಣ್ಣ ಮಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಲಾಗಿತ್ತು. ಉತ್ತಮ ಸ್ಪಂದನೆಯೂ ದೊರಕಿತ್ತು. ಇದೀಗ ಈ ಕಾರ್ಯಕ್ರಮವನ್ನು ಬೃಹತ್ ಮಟ್ಟದಲ್ಲಿ ಪ್ರದರ್ಶನಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಚಗಳನ್ನು ಮಹಿಳಾ ಘಟಕದಿಂದಲೇ ಭರಿಸಿಕೊಂಡು ಉಭಯ ಜಿಲ್ಲೆಯ ಮಹಿಳೆಯರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ ಇದಾಗಿದೆ ಎಂದು ಅವರು ಹೇಳಿದರು.

ಕಡಬದ ಆ್ಯಸಿಡ್ ದಾಳಿ ಪ್ರಕರಣ: ಪೋಷಕರಿಗೆ ಜಾಗೃತಿ ಅಗತ್ಯ

ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲಿನ ಆ್ಯಸಿಡ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ದಾಳಿಯ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ರಾಜ್ಯ ಸರಕಾರದಿಂದ ಸಿಗಬೇಕಾದ ಪರಿಹಾರ, ಚಿಕಿತ್ಸಾ ವ್ಯವಸ್ಥೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ಇಂತಹ ಘಟನೆಗಳು ಪೋಷಕರಿಗೂ ಎಚ್ಚರಿಕೆಯಾಗಿದ್ದು, ತಮ್ಮ ಮಕ್ಕಳ ಬಗ್ಗೆ ಕಾಳಜಿಯ ಜತೆ ನಿಗಾ ವಹಿಸಬೇಕಾದ ಅಗತ್ಯವಿದೆ. ಮಹಿಳಾ ಘಟಕದ ವತಿಯಿಂದ ಶೀಘ್ರವೇ ಪೋಷಕರಿಗೆ ಈ ನಿಟ್ಟಿನಲ್ಲಿ ಜಾಗೃತಿ ರೂಪದ ವಿಚಾರ ಸಂಕಿರಣ ನಡೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಹಿಳಾ ಮುಖಂಡರಾದ ನಮಿತಾ, ಜೆಸಿಂತಾ, ಶಾಂತಲಾ ಗಟ್ಟಿ, ಚಂದ್ರಕಲಾ ರಾವ್, ಚಂದ್ರಿಕಾ ರೈ, ನೀತಾ ಅತ್ತಾವರ, ಚಂದ್ರಕಲಾ ಜೋಗಿ, ತನ್ವೀರ್ ಶಾ, ಸಾರಿಕಾ ಪೂಜಾರಿ, ರೂಪಾ ಚೇತನ್, ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News