ಕಲ್ಲಡ್ಕ : ಮಹಿಳೆಗೆ ಲೈಂಗಿಕ ಕಿರುಕುಳ; ಹಾಸನ ಮೂಲದ ಆರೋಪಿಯ ಬಂಧನ

Update: 2024-06-12 08:54 GMT

ಬಂಟ್ವಾಳ : ಹಾಸನ ಮೂಲದ ವ್ಯಕ್ಯಿಯೋರ್ವ ಒಂಟಿ ಮಹಿಳೆಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಜೂನ್ 11 ಮಂಗಳವಾರದಂದು ಬೊಂಡಾಲದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿನ ಸಂತ್ರಸ್ತ ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಹಾಸನ ಮೂಲದ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಮಹಿಳೆಯು ಮೂಲತಃ ಹಾಸನ ತಾಲೂಕಿನ‌ ಬೇಲೂರು ನಿವಾಸಿಯಾಗಿದ್ದು, ಕಲ್ಲಡ್ಕದ ಅಮ್ಟೂರು ಎಂಬಲ್ಲಿಗೆ ಮದುವೆಯಾಗಿ ಬಂದಿರುತ್ತಾರೆ. ಆರೋಪಿ ಪ್ರಮೋದ್,

ಮಹಿಳೆಯ ಊರಿನಲ್ಲಿ ರಿಕ್ಷಾ ಚಾಲಕನಾಗಿದ್ದು, ಒಂದೆರೆಡು ಬಾರಿ ತಾಯಿ ಮನೆಗೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಹೋಗಿರುವಾಗ ಸಂತ್ರಸ್ತ ಮಹಿಳೆಗೆ ಈತನ ಪರಿಚಯವಾಗಿತ್ತು. ಈ ವೇಳೆ ಆತ‌ ಮಹಿಳೆಯ ಮೊಬೈಲ್ ‌ನಂಬರ್ ಪಡೆದುಕೊಂಡಿದ್ದ ಎನ್ನಲಾಗಿದೆ.

ಮೊಬೈಲ್ ಮೂಲಕ ಈತನ‌ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಕಲ್ಲಡ್ಕದಲ್ಲಿರುವ ಮಹಿಳೆಯ ಗಂಡನ ಮನೆಗೆ ಬಂದಿದ್ದ ಈತ ಮಹಿಳೆಗೆ ಕೀಟಲೆ ನೀಡಿದ್ದಲ್ಲದೇ, ಮನೆಯೊಳಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಇದೀಗ ಮತ್ತೆ ಹಾಸನದಿಂದ ಬಂಟ್ವಾಳಕ್ಕೆ ಬಂದ ಆರೋಪಿ ‌ಪ್ರಮೋದ್ ಗಂಡನಿಲ್ಲದ ಸಮಯ ನೋಡಿ ಮಹಿಳೆಯ ಮನೆಗೆ ನುಗ್ಗಿದ್ದಲ್ಲದೇ ಆಕೆಯನ್ನು ಲೈಂಗಿಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಮಹಿಳೆ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯ ‌ಸಮೀಪದ ದೇವಾಲಯದೊಳಗೆ ಇದ್ದ ಗಂಡ ಬಂದು ರಕ್ಷಣೆ ಮಾಡಿದ್ದಾನೆ ಎಂದು ‌ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಮಹಿಳೆಗೆ ಅವಾಚ್ಯ  ಶಬ್ದಗಳಿಂದ ನಿಂದಿಸಿದ ಆರೋಪಿ, ಗಂಡ, ಮಗುವಿನ ಸಹಿತ ಆಕೆಯನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಲಾಗಿದೆ. ಇದೀಗ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾ‌ಣಾ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ‌ಹಾಜರು ಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News