ಜನಾಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಅನನ್ಯ:ಎಸ್ಪಿ ರಿಶ್ಯಂತ್

Update: 2023-10-31 17:46 GMT

ಮಂಗಳೂರು, ಅ.31:ಮಾಧ್ಯಮಗಳು ಜನಾಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಮಾಧ್ಯಮಗಳು ಹೆಚ್ಚು ಕ್ರೀಯಾಶೀಲವಾಗಿದ್ದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 74ನೇ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಸುದ್ದಿಗಳನ್ನು ತಿರುಚದೆ ಸತ್ಯ ಸಂಗತಿಗಳನ್ನು ತಿಳಿಸುವ ಮಾಧ್ಯಮಗಳು ಜನರನ್ನು ಎಚ್ಚರಿಸುತ್ತದೆ.ಹಲವಾರು ಹಿರಿಯ ಪತ್ರಕರ್ತರ ವಿಶ್ಲೇಷಣಾತ್ಮಕ ವರದಿಗಳು ಉಪಯುಕ್ತ ಮಾಹಿತಿ ನೀಡುವ ಮೂಲಕ ಜನಾಭಿಪ್ರಾಯ ರೂಪಿಸುವಲ್ಲಿ ಸಕಾರಾತ್ಮಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿ ಸುತ್ತಾ ಬಂದಿದೆ ಎಂದು ನುಡಿದರು.

ಮಾಹಿತಿಯನ್ನು ಸುಂದರವಾಗಿ ರೂಪಿಸುವ ಕಲೆ ಅಪೂರ್ವವಾದುದು. ಮಾಹಿತಿಯನ್ನು ಸುಂದರವಾಗಿ ಬರೆಯುವ ಕಲೆ ಎಲ್ಲರಿಗೂ ಬರುವುದಿಲ್ಲ. ಅತ್ಯಂತ ವೇಗವಾಗಿ ಸುದ್ದಿ ಬರೆಯುವ ಕೆಲಸ ಪತ್ರಕರ್ತನಿಗೆ ಸವಾಲಿನದ್ದಾಗಿದೆ ಎಂದು ಬಣ್ಣಿಸಿದರು.

ಸುದ್ದಿ , ಮಾಹಿತಿಯನ್ನು ಜನರಿಗೆ ಮಾಧ್ಯಮದ ಮೂಲಕ ಮುಟ್ಟಿಸುದಷ್ಟೇ ಸುದ್ದಿಗಾರನ ಕೆಲಸ. ಸುದ್ದಿಯಲ್ಲಿ ತನ್ನ ಅಭಿಪ್ರಾಯ ಸೇರಿಸಿಕೊಂಡು ತೀರ್ಪು ನೀಡುವುದು ಸರಿಯಲ್ಲ ಎಂದರು. ಸಮಾರಂಭದಲ್ಲಿ ಪತ್ರಿಕೋದ್ಯಮ ಹೊಸ ಅವಕಾಶ ಮತ್ತು ಬೇಡಿಕೆಗಳ ಉದ್ಯಮ ಕುರಿತು ಹಿರಿಯ ಪತ್ರಕರ್ತ ವೇಣು ಶರ್ಮ ಉಪನ್ಯಾಸ ನೀಡಿ‘ ಪತ್ರಿಕೋದ್ಯಮ ಉದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಕಾರಣ ಯುವ ಪತ್ರಕರ್ತರಿಗೆ ,ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಖಾದರ್ ಶಾ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಪ್ರೆಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಇಬ್ರಾಹಿಂ ಅಡ್ಕಸ್ಥಳ,ಕಾರ್ಯಕ್ರಮ ನಿರ್ದೇಶಕ ರಾಜೇಶ್ ದಡ್ಡಂಗಡಿ,ಉಪಾಧ್ಯಕ್ಷ ಭಾಸ್ಕರ್ ರೈ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯ ಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅಕಾಲಿಕ ನಿಧನಕ್ಕೆ ಸಭೆಯಲ್ಲಿ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News