ಭಾರತಕ್ಕೆ ಎಫ್-35 ರಹಸ್ಯ ಯುದ್ಧ ವಿಮಾನ ಮಾರಾಟ: ಪ್ರಧಾನಿ ಮೋದಿ ಜೊತೆ ಸಭೆ ಬಳಿಕ ಟ್ರಂಪ್ ಘೋಷಣೆ

Update: 2025-02-14 08:44 IST
ಭಾರತಕ್ಕೆ ಎಫ್-35 ರಹಸ್ಯ ಯುದ್ಧ ವಿಮಾನ ಮಾರಾಟ: ಪ್ರಧಾನಿ ಮೋದಿ ಜೊತೆ ಸಭೆ ಬಳಿಕ ಟ್ರಂಪ್ ಘೋಷಣೆ

PC | https://x.com/narendramodi

  • whatsapp icon

ವಾಷಿಂಗ್ಟನ್ ಡಿಸಿ: ಭಾರತಕ್ಕೆ ಎಫ್-35 ರಹಸ್ಯ ಯುದ್ಧವಿಮಾನವನ್ನು ಮಾರಾಟ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಅತ್ಯಾಧುನಿಕ ರಹಸ್ಯ ಯುದ್ಧವಿಮಾನಗಳನ್ನು ಹೊಂದಿದ ದೇಶಗಳ ಗುಂಪಿಗೆ ಭಾರತ ಸೇರ್ಪಡೆಯಾಗಲಿದೆ.

"ಈ ವರ್ಷದಿಂದ ಆರಂಭವಾಗುವಂತೆ ಭಾರತಕ್ಕೆ ಮಿಲಿಟರಿ ಸಾಮಗ್ರಿಗಳ ಮಾರಾಟವನ್ನು ಹಲವು ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸಲಿದ್ದೇವೆ. ಭಾರತಕ್ಕೆಎಫ್-35 ರಹಸ್ಯ ಯುದ್ಧವಿಮಾನಗಳನ್ನು ಒದಗಿಸುವುದಕ್ಕೆ ಕೂಡಾ ಅವಕಾಶ ಮಾಡಿಕೊಡಲಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿಯವರ ಜತೆ ಶ್ವೇತಭವನದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಷ್ಯಾದ ಜತೆ ಈಗಾಗಲೇ ಆಳವಾದ ರಕ್ಷಣಾ ಒಪ್ಪಂದಗಳನ್ನು ಹೊಂದಿರುವ ಭಾರತಕ್ಕೆ ಟ್ರಂಪ್ ಸರ್ಕಾರದ ಈ ನಿರ್ಧಾರವನ್ನು ಜಾರಿಗೆ ತರಲು ಗಂಭೀರ ತಡೆಗಳು ಎದುರಾಗುವ ನಿರೀಕ್ಷೆ ಇದೆ. ಅಂತೆಯೇ ವಿರೋಧಿಗಳು ಈ ತಂತ್ರಜ್ಞಾನವನ್ನು ಕದಿಯುವ ಸಾಧ್ಯತೆ ಇರುವ ಕಾರಣದಿಂದ ಅಂಥ ದೇಶಗಳಿಗೆ ಎಫ್-35 ಯುದ್ಧವಿಮಾನಗಳನ್ನು ಮಾರಾಟ ಮಾಡಲು ಅಮೆರಿಕ ಹಿಂದೇಟು ಹಾಕುತ್ತದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.

ರಷ್ಯಾದ ಎಸ್400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿ ಮಾಡಲು ಭಾರತ 2018ರಲ್ಲಿ ಒಪ್ಪಮದ ಮಾಡಿಕೊಂಡಿರುವುದು ಕೂಡಾ ಈ ಮಾರಾಟ ಪ್ರಕ್ರಿಯೆಯ ಸಂಕೀರ್ಣತೆಗೆ ಕಾರಣವಾಗಲಿದೆ. ಈ ಮುನ್ನ ಟರ್ಕಿ ಎಫ್-35 ಯುದ್ಧವಿಮಾನ ಖರೀದಿ ಮಾಡುವ ಸಂದರ್ಭದಲ್ಲಿ ಆ ದೇಶ ಕೂಡಾ ಎಸ್400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿ ಮಾಡಲು ನಿರ್ಧರಿಸಿತ್ತು. ಆದರೆ ರಷ್ಯಾ ಈ ವಿಮಾನ ತಂತ್ರಜ್ಞಾನದ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಟರ್ಕಿ ಜತೆಗಿನ ಸಹ ಉತ್ಪಾದನೆಯನ್ನು ಅಮೆರಿಕ ಸ್ಥಗಿತಗೊಳಿಸಿತ್ತು.

"ಇಂದಿನ ನಮ್ಮ ಮಾತುಕತೆಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಡುವೆ ಪ್ರಬಲ ಸಹಕಾರವನ್ನು ದೃಢಪಡಿಸಿದ್ದೇವೆ. ಇಂಡೋ ಫೆಸಿಫಿಕ್ನಲ್ಲಿ ಕೂಡಾ ಶಾಂತಿ ಮತ್ತು ಸಮೃದ್ಧಿಯ ನೆಮ್ಮದಿಯನ್ನು ನಿರ್ವಹಿಸುವುದು ನಿಜವಾಗಿಯೂ ಪ್ರಮುಖ" ಎಂದು ಟ್ರಂಪ್ ಬಣ್ಣಿಸಿದರು.

ಮೋದಿ ಸರ್ಕಾರ ಅಮೆರಿಕದ ಜತೆ ರಕ್ಷಣಾ ಪಾಲುದಾರಿಕೆಯನ್ನು ತೀವ್ರಗೊಳಿಸಿದ್ದು, ಕಳೆದ 10 ವರ್ಷಗಳಲ್ಲಿ 250 ಶತಕೋಟಿ ಡಾಲರ್ಗಳ ವೆಚ್ಚದಲ್ಲಿ ಆಧುನೀಕರಣ ಪ್ರಕ್ರಿಯೆ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News