ಯುಎಇಯಲ್ಲಿನ 900 ಕೈದಿಗಳ ಬಿಡುಗಡೆಗಾಗಿ 2.5 ಕೋಟಿ ರೂ. ದೇಣಿಗೆ ನೀಡಿದ ಭಾರತೀಯ ಉದ್ಯಮಿ ಫಿರೋಝ್ ಮರ್ಚಂಟ್

Update: 2024-02-27 11:43 GMT

ಫಿರೋಝ್ ಮರ್ಚಂಟ್ | Photo : Linkedin/Firoz Merchant

ದುಬೈ,: ಯುಎಇಯಾದ್ಯಂತ ಜೈಲುಗಳಲ್ಲಿರುವ 900 ಕೈದಿಗಳನ್ನು ಬಿಡುಗಡೆಗೊಳಿಸಲು ಭಾರತೀಯ ಉದ್ಯಮಿ ಹಾಗೂ ಲೋಕೋಪಕಾರಿ ಫಿರೋಝ್ ಮರ್ಚಂಟ್ ಅವರು 10 ಲಕ್ಷ ದಿರ‌್ಹಮ್ (ಸುಮಾರು 2.5 ಕೋಟಿ ರೂ.) ಗಳ ದೇಣಿಗೆಯನ್ನು ನೀಡಿದ್ದಾರೆ. ಈ ವರ್ಷ 3,000 ಕೈದಿಗಳನ್ನು ಜೈಲುಗಳಿಂದ ಬಿಡುಗಡೆಗೊಳಿಸಲು ಅವರು ಉದ್ದೇಶಿಸಿದ್ದಾರೆ.

ದುಬೈ ನಿವಾಸಿ ಹಾಗೂ ಪ್ಯುರ್ ಗೋಲ್ಡ್ ಜುವೆಲರ್ಸ್‌ನ ಮಾಲಕರಾಗಿರುವ ಮರ್ಚಂಟ್ (66) 10 ಲಕ್ಷ ದಿರ‌್ಹಮ್‌ಗಳನ್ನು ಯುಎಇ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಇದು ರಮಝಾನ್ ಮುನ್ನ ವಿನಮ್ರತೆ,‌ ಮಾನವೀಯತೆ, ಕ್ಷಮೆ ಮತ್ತು ದಯೆಯ ಸಂದೇಶವಾಗಿದೆ ಎಂದು ಮರ್ಚಂಟ್ ಅವರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ‘ದಿ ಫರ್ಗಾಟನ್ ಸೊಸೈಟಿ’ ಉಪಕ್ರಮದ ಮೂಲಕ ಖ್ಯಾತರಾಗಿರುವ ಮರ್ಚಂಟ್ ಈಗಾಗಲೇ 2024ರ ಆರಂಭದಿಂದ 900 ಕೈದಿಗಳ ಬಿಡುಗಡೆಗೆ ಅನುಕೂಲಿಸಿದ್ದಾರೆ. ಮ್ಯಾಗಲ್ಫ್ ಸುದ್ದಿ ಜಾಲತಾಣದ ಪ್ರಕಾರ,ಇವರಲ್ಲಿ ಅಜ್ಮಾನ್‌ನ 495, ಫುಜೈರಾದ 170, ದುಬೈನ 121, ಉಮ್ ಅಲ್ ಕುವೈನ್‌ನ 69 ಮತ್ತು ರಾಸ್ ಅಲ್ ಖೈಮಾದ 28 ಕೈದಿಗಳು ಸೇರಿದ್ದಾರೆ.

ಮರ್ಚಂಟ್ ಅವರ ಸಾಲಗಳನ್ನೂ ತೀರಿಸಿದ್ದಾರೆ ಮತ್ತು ಅವರನ್ನು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸಲು ಹಾಗೂ ಜೀವನದಲ್ಲಿ ಎರಡನೇ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಅವರು ಸ್ವದೇಶಕ್ಕೆ ಮರಳಲು ವಿಮಾನಯಾನ ಶುಲ್ಕಗಳನ್ನೂ ಪಾವತಿಸಿದ್ದಾರೆ ಎಂದು ಮ್ಯಾಗಲ್ಫ್ ತಿಳಿಸಿದೆ. ಮ್ಯಾಗಲ್ಫ್ ಕೊಲ್ಲಿಯಲ್ಲಿ ನೆಲೆಸಿರುವ ತೆಲುಗು ಸಮುದಾಯಕ್ಕಾಗಿ ಆನ್‌ಲೈನ್ ನ್ಯೂಸ್ ಪೋರ್ಟಲ್ ಆಗಿದೆ.

2024ರಲ್ಲಿ 3,000ಕ್ಕೂ ಅಧಿಕ ಕೈದಿಗಳು ಬಿಡುಗಡೆಗೊಳ್ಳಲು ನೆರವಾಗುವುದು ಮರ್ಚಂಟ್ ಗುರಿಯಾಗಿದೆ.

ಯುಎಇಯಾದ್ಯಂತ ಸೆಂಟ್ರಲ್ ಜೈಲುಗಳಲ್ಲಿ ಡಿಜಿಪಿಗಳ ಸಹಯೋಗದೊಂದಿಗೆ ಮರ್ಚಂಟ್ ಅವರ ಉಪಕ್ರಮವು ಈವರೆಗೆ 20,000ಕ್ಕೂ ಅಧಿಕ ಕೈದಿಗಳಿಗೆ ನೆರವಾಗಿದ್ದು,ತನ್ಮೂಲಕ ಸರಕಾರಿ ಅಧಿಕಾರಿಗಳು ಮತ್ತು ಕೈದಿಗಳಿಂದ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ.

‘ಸರಕಾರದ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಮಾನವೀಯತೆಗೆ ಯಾವುದೇ ಗಡಿಗಳಿಲ್ಲ ಎನ್ನುವುದು ‘ದಿ ಫರ್ಗಾಟನ್ ಸೊಸೈಟಿ ’ಯ ನಂಬಿಕೆಯಾಗಿದೆ ಮತ್ತು ಈ ವ್ಯಕ್ತಿಗಳು ತಮ್ಮ ಕುಟುಂಬಗಳು ಮತ್ತು ಸಮುದಾಯಗಳೊಂದಿಗೆ ಮತ್ತೆ ಒಗ್ಗೂಡಲು ಅವಕಾಶವನ್ನು ಒದಗಿಸಲು ನಾವು ಒಟ್ಟಾಗಿ ಶ್ರಮಿಸುತ್ತೇವೆ’ ಎಂದು ಮರ್ಚಂಟ್ ಹೇಳಿದರು.

ಮರ್ಚಂಟ್ ಕೈದಿಗಳ ಪುನರ್‌ವಸತಿಗೆ ತನ್ನನ್ನು ಸಮರ್ಪಿಸಿಕೊಂಡಿರುವುದನ್ನು ಶ್ಲಾಘಿಸಿರುವ ಯುಎಇ ಅಧಿಕಾರಿ ಕರ್ನಲ್ ಮುಹಮ್ಮದ್ ಯೂಸುಫ್ ಅಲ್-ಮತ್ರೂಶಿ, ಅವರು ಅಸಂಖ್ಯಾತ ವ್ಯಕ್ತಿಗಳಿಗೆ ನೆರವಾಗಿದ್ದಾರೆ ಮತ್ತು ಅವರ ಉದಾರಶೀಲತೆಯು ತಮ್ಮ ದಂಡಗಳನ್ನು ಪಾವತಿಸಲು ಪರದಾಡುತ್ತಿರುವವರಿಗೆ ನಿಜವಾದ ಭರವಸೆಯನ್ನು ಒದಗಿಸುತ್ತಿದೆ ಎಂದು ಹೇಳಿದರು. ‌

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News