ಮೆಕ್ಕಾದಲ್ಲಿ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ, 68 ಭಾರತೀಯರು ಸೇರಿದಂತೆ 900ಕ್ಕೂ ಅಧಿಕ ಹಜ್ ಯಾತ್ರಿಗಳು ಮೃತ್ಯು
ಮೆಕ್ಕಾ : ಮೆಕ್ಕಾದಲ್ಲಿ ಉಷ್ಣಾಂಶ 51.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು,ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ 68 ಭಾರತೀಯರು ಸೇರಿದಂತೆ ಸಾವುಗಳ ಸಂಖ್ಯೆ 900ನ್ನು ದಾಟಿದೆ.
‘ಸುಮಾರು 68 ಭಾರತೀಯರು ಮೃತಪಟ್ಟಿರುವುದನ್ನು ನಾವು ದೃಢಪಡಿಸಿದ್ದೇವೆ. ಕೆಲವರು ನೈಸರ್ಗಿಕ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಮತ್ತು ಹಲವು ವೃದ್ಧ ಯಾತ್ರಿಗಳಿದ್ದರು, ಮತ್ತು ಕೆಲವರು ಹವಾಮಾನ ಪರಿಸ್ಥಿತಿಗಳಿಂದಾಗಿ ಸಾವನ್ನಪ್ಪಿದ್ದಾರೆ. ಹಾಗೆಂದು ನಾವು ಭಾವಿಸಿದ್ದೇವೆ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ರಾಜತಾಂತ್ರಿಕರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಹಜ್ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆಯ ಕುರಿತು ಭಾರತ ಸರಕಾರವು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಹೊರಡಿಸಿಲ್ಲ.
ಹಜ್ ಸಂದರ್ಭದಲ್ಲಿ 550 ಸಾವುಗಳು ದಾಖಲಾಗಿವೆ ಎಂದು ಅರಬ್ ರಾಜತಾಂತ್ರಿಕರಿಬ್ಬರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಅರಬ್ ರಾಜತಾಂತ್ರಿಕರ ಪ್ರಕಾರ ಮೃತರಲ್ಲಿ 323 ಈಜಿಪ್ಟ್ ಮತ್ತು 60 ಜೋರ್ಡಾನ್ ಪ್ರಜೆಗಳು ಸೇರಿದ್ದಾರೆ. ಎಲ್ಲ ಈಜಿಪ್ಟ್ ಪ್ರಜೆಗಳು ಅತಿಯಾದ ತಾಪಮಾನದಿಂದಾಗಿ ಸಾವನ್ನಪಿದ್ದಾರೆ ಎಂದು ಓರ್ವ ರಾಜತಾಂತ್ರಿಕರು ತಿಳಿಸಿದರು. ನವೀಕೃತ ಸುದ್ದಿಯಂತೆ ಮೃತ ಈಜಿಪ್ಟ್ ಯಾತ್ರಿಗಳ ಸಂಖ್ಯೆ ಗುರುವಾರ ಕನಿಷ್ಠ 600ಕ್ಕೇರಿದೆ.
ಮೃತರಲ್ಲಿ ಇಂಡೋನೇಶ್ಯಾ, ಇರಾನ್, ಸೆನೆಗಲ್, ಟ್ಯುನಿಷಿಯಾ ಮತ್ತು ಇರಾಕ್‌ನ ಸ್ವಾಯತ್ತ ಖುರ್ದಿಸ್ತಾನ್ ಪ್ರದೇಶದ ನಿವಾಸಿಗಳೂ ಸೇರಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಅಧಿಕಾರಿಗಳು ಸಾವಿಗೆ ನಿಖರ ಕಾರಣಗಳನ್ನು ಬಹಿರಂಗಗೊಳಿಸಿಲ್ಲ.
ಕಳೆದ ವರ್ಷ ಮೃತಪಟ್ಟಿದ್ದ 200 ಯಾತ್ರಿಗಳ ಪೈಕಿ ಹೆಚ್ಚಿನವರು ಇಂಡೋನೇಶ್ಯಾದ ಪ್ರಜೆಗಳಾಗಿದ್ದರು.
ಸೌದಿ ಅರೇಬಿಯ ಸಾವುಗಳ ಸಂಖ್ಯೆಗಳನ್ನು ಬಹಿರಂಗಗೊಳಿಸಿಲ್ಲ,ಆದರೆ ರವಿವಾರ ಒಂದೇ ದಿನ 2,700ಕ್ಕೂ ಅಧಿಕ ‘ತೀವ್ರ ಶಾಖ ಬಳಲಿಕೆ ’ಪ್ರಕರಣಗಳನ್ನು ವರದಿ ಮಾಡಿತ್ತು.
ಇದು ಪ್ರತಿವರ್ಷವೂ ಸಂಭವಿಸುತ್ತದೆ. ಈ ವರ್ಷ ಸಾವುಗಳ ಸಂಖ್ಯೆ ಅಸಹಜವಾಗಿ ಹೆಚ್ಚಿದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂದು ರೀತಿಯಲ್ಲಿ ಕಳೆದ ವರ್ಷದಂತೆಯೇ ಇದೆ. ಆದರೆ ಮುಂಬರುವ ದಿನಗಳಲ್ಲಿ ನಮಗೆ ಇನ್ನಷ್ಟು ತಿಳಿಯಲಿದೆ ಎಂದು ಭಾರತೀಯರ ಸಾವುಗಳನ್ನು ದೃಡಪಡಿಸಿದ ರಾಜತಾಂತ್ರಿಕರು ಹೇಳಿದರು. ಕೆಲವು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದೂ ಅವರು ಹೇಳಿದರಾದರೂ ನಿಖರವಾದ ಸಂಖ್ಯೆಯನ್ನು ಒದಗಿಸಲು ನಿರಾಕರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಬಿರುಬೇಸಿಗೆಯಲ್ಲಿ ಹಜ್ ಯಾತ್ರೆ ನಡೆಯುತ್ತಿದೆ. ಕಳೆದ ತಿಂಗಳು ಬಿಡುಗಡೆಗೊಂಡ ಸೌದಿ ಅಧ್ಯಯನ ವರದಿಯ,ಧಾರ್ಮಿಕ ಆಚರಣೆಗಳು ನಡೆಯುವ ಪ್ರದೇಶದಲ್ಲಿ ತಾಪಮಾನ ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುತ್ತಿದೆ ಎಂದು ಹೇಳಿದೆ.