ಬಹರೈನ್: ಕನ್ನಡ ಸಂಘದ ವತಿಯಿಂದ "ಕನ್ನಡ ವೈಭವ -2023" ಸಾಂಸ್ಕೃತಿಕ ಕಾರ್ಯಕ್ರಮ

Update: 2023-12-23 09:54 GMT

ಬಹರೈನ್: ಕನ್ನಡ ಸಂಘದ ವತಿಯಿಂದ  "ಕನ್ನಡ ವೈಭವ -2023" ಸಾಂಸ್ಕೃತಿಕ ಕಾರ್ಯಕ್ರಮವು ಡಿ.16 ಶನಿವಾರ ಶ್ರೀಮತಿ ಆಶಾಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.

ಪ್ರಸ್ತುತ  ಸಾಂಸ್ಕೃತಿಕ ಸಮಾರಂಭವನ್ನು  ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಜಿ. ಆರ್. ಮೆಡಿಕಲ್ ಕಾಲೇಜ್,ಮಂಗಳೂರು ಇದರ ಸ್ಥಾಪಕಾಧ್ಯಕ್ಷ  ಎಸ್. ಗಣೇಶ್ ರಾವ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಸಂಘದ ವಾರ್ಷಿಕ ಸ್ಮರಣಸಂಚಿಕೆ  "ಕಾವೇರಿ 2023" ಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿರಸಿಯ ಶಾಸಕ ಭೀಮಣ್ಣ‌ ಟಿ.ನಾಯ್ಕ್ ಅವರು ಬಿಡುಗಡೆ‌ ಮಾಡಿದರು.

ಜನವರಿ 2024 ರಲ್ಲಿ ಕನ್ನಡ ಸಂಘ ಬಹರೈನ್ ಆಯೋಜಿಸುವ ಕ್ರಿಕೆಟ್ ಪಂದ್ಯಾವಳಿಯ ಕರಪತ್ರವನ್ನು‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಲನಚಿತ್ರ ನಟ ರವಿ ಶಂಕರ್ ಗೌಡ ‌ಅವರು ಬಿಡುಗಡೆಗೊಳಿಸಿದರು.‌‌

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಗಣೇಶ್ ರಾವ್,  ದ್ವೀಪದ ಕನ್ನಡಿಗರ ಕನ್ನಡ ನಾಡುನುಡಿಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಶಾಸಕರಾದ‌ ಭೀಮಣ್ಣ ನಾಯ್ಕ್‌ ಅನಿವಾಸಿ ಕನ್ನಡಿಗರ ಭಾಷಾಭಿಮಾನವನ್ನು ಅಭಿನಂದಿಸಿದರು. ರವಿಶಂಕರ್ ಗೌಡ ಮಾತನಾಡಿ, ಬಳಿಕ  ಕನ್ನಡ ಚಿತ್ರಗೀತೆಗಳನ್ನು ಹಾಡುವ ಮೂಲಕ ನೆರದ ಸಭಿಕರನ್ನು ರಂಜಿಸಿದರು‌‌.

ಕಾರ್ಯಕ್ರಮದಲ್ಲಿ ʼಕಾವೇರಿʼ ಸ್ಮರಣಸಂಚಿಕೆಯ ಸಂಪಾದಕ ಸಮಿತಿಯ ಶ್ರೀಕೃಷ್ಣ ಭಟ್, ಡಿ‌.ರಮೇಶ್, ಕಿರಣ್ ಉಪಾಧ್ಯಾಯ, ಪೂರ್ಣಿಮಾ ಜಗದೀಶ್, ವರದಿಗಾರ ಕಮಲಾಕ್ಷ ಅಮೀನ್, ಸ್ವಯಂಸೇವಕರಾದ ಸಂಧ್ಯಾ ಪೈ, ಸತೀಶ್ ಮಲ್ಪೆ, ಪುಷ್ಪರಾಜ್ ಪೂಜಾರಿಯವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸಭಾಧ್ಯಕ್ಷ ಅಮರನಾಥ್ ರೈ ಕನ್ನಡ ಸಂಘ ಸಾಗಿ ಬಂದ ದಾರಿ, ಕನ್ನಡ ಭವನದ ನಿರ್ಮಾಣದ ಬಗ್ಗೆ ಮಾತನಾಡಿ ಮುಂದಿರುವ ಯೋಜನೆಗಳ ಕುರಿತು ಮಾತನಾಡಿದರು‌.

ಬೆಂಗಳೂರಿನ ನೃತ್ಯಪಟು ಡಾ. ಸುಮನ ರಂಜಲ್ಕರ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ಮತ್ತು ಸಂಘದ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಸಮಾಜಸೇವಕ ಶ್ರೀ ವೆಂಕಟೇಶ್ ಹೆಗಡೆ ಹೊಸಬಾಳೆ ಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕನ್ನಡ ಸಂಘದ ಉಪಾಧ್ಯಕ್ಷ ಮಹೇಶ್‌ಕುಮಾರ್ ಉಪಸ್ಥಿತರಿದ್ದರು‌. ಸುಮಾರು 500 ಕ್ಕೂ ಮಿಕ್ಕ ದ್ವೀಪ ದೇಶದ ಕನ್ನಡಿಗರು ಆಗಮಿಸಿದ್ದರು.

ದೀಪಕ್ ರಾವ್ ಪೇಜಾವರ, ಹೇಮಾ ಶಿವಾನಂದ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ ವಂದಿಸಿದರು‌.

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News