ಬಹರೈನ್ ನಲ್ಲಿ ಕಾರು ಅಪಘಾತ: ಐವರು ಭಾರತೀಯರು ಮೃತ್ಯು
ಮನಾಮಾ: ಬಹರೈನ್ ರಾಜಧಾನಿ ಮನಾಮಾದ ಶೇಖ್ ಖಲೀಫಾ ಬಿನ್ ಸಲ್ಮಾನ್ ಹೆದ್ದಾರಿಯಲ್ಲಿ ಶುಕ್ರವಾರ ಕ್ಲೀನಿಂಗ್ ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕೇರಳದ ನಿವಾಸಿಗಳು ಹಾಗೂ ತೆಲಂಗಾಣದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸಲ್ಮಾಬಾದ್ ನ ಗಲ್ಫ್ ಏರ್ ಕ್ಲಬ್ ನಲ್ಲಿ ಮುಹರಕ್ ಅಲ್ ಹಿಲಾಲ್ ಆಸ್ಪತ್ರೆ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಪಾಲ್ಗೊಂಡ ನಂತರ ಐವರು ಕಾರಿನಲ್ಲಿ ವಾಪಸಾಗುತ್ತಿದ್ದರು. ಐವರು ಈ ಆಸ್ಪತ್ರೆ ಯಲ್ಲಿ ಉದ್ಯೋಗದಲ್ಲಿದ್ದರು.
ಮೃತರನ್ನು ಕೋಝಿಕ್ಕೋಡ್ ನ ವಿ.ಪಿ.ಮಹೇಶ್ (33), ಮಲಪ್ಪುರಂನ ನಿವಾಸಿ ಜಗತ್ ವಾಸುದೇವನ್ (26), ತ್ರಿಶೂರ್ ನ ಚಾಲಕುಡಿಯ ಜಾರ್ಜ್ (28), ಕಣ್ಣೂರಿನ ತಲಸ್ಸೆರಿಯ ಅಖಿಲ್ ರಘು (28), ತೆಲಂಗಾಣದ ಸುಮನ್ ರಾಜಣ್ಣ (27) ಎಂದು ಗುರುತಿಸಲಾಗಿದೆ. ಈ ಐವರು ಸಹೋದ್ಯೋಗಿಗಳಲ್ಲದೆ ಆತ್ಮೀಯ ಸ್ನೇಹಿತರೂ ಆಗಿದ್ದರು ಎಂದು ತಿಳಿದು ಬಂದಿದೆ.
ಅಪಘಾತದ ನಂತರ, ಅವರ ಪಾರ್ಥಿವ ಶರೀರವನ್ನು ಸಲ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಅವರ ಮೃತದೇಹಗಳನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, ಘಟನೆಯನ್ನು ದೊಡ್ಡ ದುರಂತ ಎಂದು ಕರೆದಿದ್ದಾರೆ.