ಸಾಹೇಬಾನ್ ವೆಲ್ಫೇರ್ ಟ್ರಸ್ಟ್ ನಿಂದ ಯುಎಇಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಪ್ರಾರಂಭ

Update: 2024-05-16 05:52 GMT

ದುಬೈ: ಸಾಹೇಬಾನ್ ವೆಲ್ಫೇರ್ ಟ್ರಸ್ಟ್ (SWT) ಮಂಗಳೂರು ಇದರ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇತ್ತೀಚಿಗೆ ದುಬೈ ನಲ್ಲಿ ಪ್ರಾರಂಭಿಸಲಾಯಿತು. ಇಲ್ಲಿನ ಶೇಖ್ ಝಾಯೆದ್ ರಸ್ತೆಯಲ್ಲಿರುವ ನಾರ್ದರ್ನ್ ಇನ್ಸೂರೆನ್ಸ್ ಕಂಪೆನಿಯ ಕಚೇರಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಾಹೇಬಾನ್ ವೆಲ್ಫೇರ್ ಟ್ರಸ್ಟ್ ನ ಟ್ರಸ್ಟೀಗಳು ಹಾಗು ಯುಎಇ ಯ ಪ್ರಮುಖ ಸಾಹೇಬಾನ್ ಗಳಾದ ನಾಸಿರ್ ಸಯ್ಯದ್, ಮತೀನ್ ಅಹ್ಮದ್ ಚಿಲ್ಮಿ, ಯೂನುಸ್ ಶೇಖ್, ನಿಸಾರ್ ಖಾನ್, ಅಜ್ಮಲ್ ಸಯ್ಯದ್ ಹಾಗು ಅಲ್ತಾಫ್ ಖಲೀಫೆ ಅವರು ಉಪಸ್ಥಿತರಿದ್ದರು. ಭಾರತದ ಜೊತೆ ಯುಎಇ ಹಾಗು ಇತರ ದೇಶಗಳಲ್ಲೂ ಸದಸ್ಯತ್ವ ಅಭಿಯಾನದ ಮೂಲಕ ಟ್ರಸ್ಟ್ ಅನ್ನು ವಿಸ್ತರಿಸುವ ಮುನ್ನೋಟ ಒದಗಿಸುವ ಬ್ರೋಷರ್ ಅನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಡಿಸೆಂಬರ್ 2023 ರಲ್ಲಿ ಪ್ರಾರಂಭವಾದ ಸಾಹೇಬಾನ್ ವೆಲ್ಫೇರ್ ಟ್ರಸ್ಟ್ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಉರ್ದು ಭಾಷಿಕ ಸಾಹೇಬಾನ್ ಸಮುದಾಯದ ಶ್ರೇಯೋಭಿವೃದ್ಧಿಯ ಉದ್ದೇಶ ಇಟ್ಟುಕೊಂಡಿದೆ. ಜೊತೆಗೆ ಎನ್ನಾರೈ ಸಾಹೇಬಾನ್ ಗಳು ಭಾರತದಲ್ಲಿರುವ ಸಾಹೇಬಾನ್ ಸಮುದಾಯದ ಸದಸ್ಯರ ನಡುವೆ ಸೇತುವೆಯಾಗುವ ಗುರಿಯನ್ನೂ ಹೊಂದಿದೆ. ಎನ್ನಾರೈ ಸಾಹೇಬಾನ್ ಗಳ ಸಮಸ್ಯೆಗಳಿಗೆ ಸ್ಪಂದಿಸುವುದೂ ಈ ಟ್ರಸ್ಟ್ ನ ಗುರಿಯಾಗಿದೆ. ಶಾಂತಿ, ಸೌಹಾರ್ದ ಹಾಗು ಬಂಧುತ್ವದ ತಳಹದಿಯಲ್ಲಿ ಸ್ಥಾಪಿಸಲ್ಪಟ್ಟ ಈ ಟ್ರಸ್ಟ್ ಆಯಾ ದೇಶದ ನೀತಿ ನಿಯಮಗಳನ್ನು ಅನುಸರಿಸುತ್ತಾ ತನ್ನ ಟ್ರಸ್ಟ್ ನ ಸೂಕ್ತ ನಿಯಮಗಳಡಿ ಸದಸ್ಯತ್ವವನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಭೆಯಲ್ಲಿ ಟ್ರಸ್ಟ್ ನ ಧ್ಯೇಯೋದ್ದೇಶಗಳು, ಸಾಧನೆಗಳು ಹಾಗು ಮುಂದಿನ ಯೋಜನೆಗಳ ಕುರಿತು ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಿರಾಜ್ ಅವರು ವಿವರ ನೀಡಿದರು. ಟ್ರಸ್ಟ್ ಮೂಲಕ ಪ್ರತಿ ಎರಡು ತಿಂಗಳಿಗೊಮ್ಮೆ ಶಿಕ್ಷಣ, ಅರೋಗ್ಯ, ತೆರಿಗೆ ನಿಯಮಗಳು, ಭಾರತದಲ್ಲಿ ಎನ್ನಾರೈ ಹೂಡಿಕೆ ಇತ್ಯಾದಿ ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸ ಆಯೋಜಿಸಲಾಗುವುದು. ಜೊತೆಗೆ ಸ್ವಚ್ಛ ಭಾರತ ಅಭಿಯಾನ, ಟ್ರಾಫಿಕ್ ನಿಯಮಗಳ ಕುರಿತ ಜಾಗೃತಿ ಇತ್ಯಾದಿ ಸರಕಾರಿ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಲಾಗುವುದು ಎಂದು ಸಯ್ಯದ್ ಸಿರಾಜ್ ಮಾಹಿತಿ ನೀಡಿದರು.

ಸಾಹೇಬಾನ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಆಫ್ರೋಝ್ ಅಸ್ಸಾದಿ ಅವರು ಭಾಗವಹಿಸಿದ ಎಲ್ಲರನ್ನೂ ಸ್ವಾಗತಿಸಿ ಟ್ರಸ್ಟ್ ನ ಧ್ಯೇಯೋದ್ದೇಶಗಳನ್ನು ಸಾಧಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಟ್ರಸ್ಟ್ ನ ಮಹಿಳಾ ವಿಭಾಗದ ಸದಸ್ಯರ ಸಕ್ರಿಯ ಪಾಲುದಾರಿಕೆ ಹಾಗು ಸಹಕಾರಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.

ಟ್ರಸ್ಟ್ ನ ಯುವ ಘಟಕದ ನಾಯಕ ಫೈಝಾನ್ ಖತೀಬ್ ಅವರೂ‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News