ಮದೀನಾಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ
ಜಿದ್ದಾ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರೊಂದಿಗೆ ಸೋಮವಾರ ಸೌದಿ ಅರೇಬಿಯಾದ ಮದೀನಾಕ್ಕೆ ಭೇಟಿ ನೀಡಿದರು. ಭಾರತೀಯ ಹಜ್ ಯಾತ್ರಾರ್ಥಿಗಳಿಗೆ ಸಮರ್ಪಿತ ಸೇವೆಯನ್ನು ಒದಗಿಸುವ ಸ್ವಯಂಸೇವಕರನ್ನು, ಭಾರತದ ಉಮ್ರಾ ಯಾತ್ರಿಕರೊಂದಿಗೆ ಸಂವಾದ ನಡೆಸಿದರು ಎಂದು ndtv ವರದಿ ಮಾಡಿದೆ.
ಸೋಮವಾರ ಇಸ್ಲಾಂನ ಪವಿತ್ರ ನಗರಗಳಲ್ಲಿ ಒಂದಾದ ಮದೀನಾ ನಗರಕ್ಕೆ ಪ್ರಯಾಣಿಸಿದ ಸ್ಮೃತಿ ಇರಾನಿ, "ಇಂದು ಮದೀನಾಕ್ಕೆ ಐತಿಹಾಸಿಕ ಪ್ರಯಾಣವನ್ನು ಕೈಗೊಂಡಿದ್ದೇನೆ. ಇಸ್ಲಾಂ ಧರ್ಮದ ಪವಿತ್ರ ನಗರಗಳಲ್ಲಿ ಒಂದಾದ ಪೂಜ್ಯ ಪ್ರವಾದಿಯ ಮಸೀದಿ, ಅಲ್ ಮಸ್ಜಿದ್ ಅಲ್ ನಬವಿ, ಉಹುದ್ ಪರ್ವತ ಮತ್ತು ಇಸ್ಲಾಂ ಧರ್ಮದ ಮೊದಲ ಮಸೀದಿಯಾದ ಕುಬಾ ಮಸೀದಿಗೆ ಭೇಟಿ ನೀಡಿದೆ" ಎಂದು ಅವರು ತಮ್ಮ X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಭೇಟಿಯು ಭಾರತೀಯ ಯಾತ್ರಾರ್ಥಿಗಳಿಗೆ 2024 ರ ಹಜ್ ಯಾತ್ರೆಯನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ವ್ಯವಸ್ಥೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ರವಿವಾರ, ಭಾರತ ಮತ್ತು ಸೌದಿ ಅರೇಬಿಯಾ ದ್ವಿಪಕ್ಷೀಯ ಹಜ್ ಒಪ್ಪಂದ 2024 ಗೆ ಸಹಿ ಹಾಕಿದವು. ಇದರನ್ವಯ 2024 ರಲ್ಲಿ ವಾರ್ಷಿಕ ಹಜ್ ಯಾತ್ರೆಗಾಗಿ ಭಾರತಕ್ಕೆ 1,75,025 ಹಜ್ ಯಾತ್ರಿಕರ ಕೋಟಾವನ್ನು ನಿಗದಿಪಡಿಸಲಾಗಿದೆ.