ಕೆಲ ಸಮಯ ಮೌನವೇ ಅತ್ಯುತ್ತಮ ಉತ್ತರ: ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಜಸ್ಪ್ರೀತ್ ಬೂಮ್ರಾ
ಹೊಸ ದಿಲ್ಲಿ: “ಕೆಲ ಸಮಯ ಮೌನವೇ ಅತ್ಯುತ್ತಮ ಉತ್ತರ” ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಇದು ಅವರ ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಎಂದು indiatoday.in ವರದಿ ಮಾಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ಯಶಸ್ವಿ ಭಾರತೀಯ ಬೌಲರ್ ಆಗಿ ಹೊರಹೊಮ್ಮಿದ್ದ ಜಸ್ಪ್ರೀತ್ ಬೂಮ್ರಾರ ಮೇಲಿನ ಪೋಸ್ಟ್ ಅವರ ಅಭಿಮಾನಿಗಳಲ್ಲಿ ತೀವ್ರ ಕೌತುಕ ಮೂಡಿಸಿದೆ.
ಬೆನ್ನುಮೂಳೆ ಮುರಿತದ ಕಾರಣಕ್ಕೆ 2022ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬೂಮ್ರಾ, ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಲಯಕ್ಕೆ ಮರಳಿದ್ದರು. ಐರ್ಲೆಂಡ್ ಎದುರು ನಡೆದ ಸರಣಿಯಲ್ಲಿ ಯಶಸ್ವಿ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ್ದ ಅವರು, ನಂತರ ವಿಶ್ವಕಪ್ ನಲ್ಲೂ ಅದೇ ಯಶಸ್ವಿ ಪ್ರದರ್ಶನವನ್ನು ಮುಂದುವರಿಸಿದ್ದರು.
ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಉತ್ತಮ ಎಕಾನಮಿ ದರವನ್ನು ಕಾಯ್ದುಕೊಂಡಿದ್ದ ಜಸ್ಪ್ರೀತ್ ಬೂಮ್ರಾ, 18.75 ದರದಲ್ಲಿ ಒಟ್ಟು 14 ವಿಕೆಟ್ ಗಳನ್ನು ಕಬಳಿಸಿದ್ದರು. 39 ರನ್ ನೀಡಿ 4 ವಿಕೆಟ್ ಕಿತ್ತದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಲ್ಲದೆ, ಟೂರ್ನಿಯಲ್ಲಿ ಬಾಲ್ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದ ಬೂಮ್ರಾ, ಒಟ್ಟು ನಾಲ್ಕು ಮೇಡನ್ ಓವರ್ ಗಳನ್ನೂ ಎಸೆದಿದ್ದರು. ಇದರೊಂದಿಗೆ ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶೂನ್ಯ ರನ್ ನೀಡಿದ ಬಾಲ್ ಎಸೆದ ದಾಖಲೆಯೂ ಬೂಮ್ರಾ ಹೆಸರಿಗೇ ಜಮೆಯಾಗಿತ್ತು. ಇದು ಅವರು ತಮ್ಮ ಮೊನಚಾದ ಬೌಲಿಂಗ್ ನಿಂದ ಎದುರಾಳಿ ಬ್ಯಾಟರ್ ಗಳ ಮೇಲೆ ಎಷ್ಟು ಒತ್ತಡ ಹೇರಿದ್ದರು ಎಂಬುದಕ್ಕೆ ಜ್ವಲಂತ ನಿದರ್ಶನ.
ನವೆಂಬರ್ 19, 2023ರಂದು ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮತ್ತೊಬ್ಬ ಭಾರತೀಯ ವೇಗಿ ಮುಹಮ್ಮದ್ ಶಮಿ ಅವರೊಂದಿಗೆ ಬೌಲಿಂಗ್ ಪ್ರಾರಂಭಿಸಿದ್ದ ಬೂಮ್ರಾ, ಕೇವಲ 50 ರನ್ ಆಗುವುದರೊಳಗೆ ಆಸ್ಟ್ರೇಲಿಯಾದ ಮೂವರು ಬ್ಯಾಟರ್ ಗಳು ಪೆವಿಲಿಯನ್ ಸೇರಿಕೊಳ್ಳುವಂತೆ ಮಾಡಿದ್ದರು. ಈ ಅವಧಿಯಲ್ಲಿ ಪತನಗೊಂಡಿದ್ದ ಆಸ್ಟ್ರೇಲಿಯಾ ತಂಡದ ಮೂರು ವಿಕೆಟ್ ಗಳ ಪೈಕಿ ಬೂಮ್ರಾ ಎರಡು ವಿಕೆಟ್ ಕಿತ್ತಿದ್ದರು. ಆದರೆ, ಆಸ್ಟ್ರೇಲಿಯಾ ತಂಡ ತೋರಿದ ಮರು ಹೋರಾಟದ ಕಾರಣಕ್ಕೆ ಭಾರತ ತಂಡವು ಆರು ವಿಕೆಟ್ ಗಳ ಅಂತರದ ವೀರೋಚಿತ ಸೋಲು ಅನುಭವಿಸಿ, ಚಾಂಪಿಯನ್ ಪಟ್ಟದಿಂದ ವಂಚಿತಗೊಂಡಿತ್ತು.
ಇದಾದ ನಂತರ ಭಾರತ ತಂಡದ ಬಹುತೇಕ ಆಟಗಾರರು ಮೌನಕ್ಕೆ ಜಾರಿದ್ದಾರೆ. ಇಂತಹ ಹೊತ್ತಿನಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಹೊರತಾದ ನಿಗೂಢ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಜಸ್ಪ್ರೀತ್ ಬೂಮ್ರಾ, ತಮ್ಮ ಅಭಿಮಾನಿಗಳನ್ನು ಊಹಾಪೋಹಗಳ ಗೊಂದಲಕ್ಕೆ ನೂಕಿದ್ದಾರೆ ಎಂದು ಕ್ರಿಕೆಟ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.