ಅಗ್ನಿ ಅನಾಹುತದಿಂದ ವಿದ್ಯುತ್ ಸಂಪರ್ಕ ಕಡಿತ : ಕಾರ್ಯಾಚರಣೆ ಸ್ಥಗಿತಗೊಳಿಸಿದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ

Photo | NDTV
ಲಂಡನ್: ವಿದ್ಯುತ್ ಕಡಿತದಿಂದ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ಶುಕ್ರವಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ನಗರದ ಪಶ್ಚಿಮ ಭಾಗದಲ್ಲಿರುವ ವಿದ್ಯುತ್ ಉಪಕೇಂದ್ರದಲ್ಲಿ ಅಗ್ನಿ ಅನಾಹುತ ಸಂಭವಿಸಿರುವ ಕಾರಣ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಸಂಪರ್ಕ ಕಡಿತದಿಂದ 16,000ಕ್ಕೂ ಹೆಚ್ಚು ಮನೆಗಳ ಮೇಲೂ ಪ್ರಭಾವ ಬೀರಿದೆ.
ಸ್ಥಳೀಯ ಕಾಲಮಾನ ರಾತ್ರಿ 11:59ರವರೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು ಎಂದು ಹೀಥ್ರೂ ಹೇಳಿದೆ. ಎಷ್ಟು ವಿಮಾನಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.
ಶುಕ್ರವಾರ ಹೀಥ್ರೂ ವಕ್ತಾರರು ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿದ್ದು, ʼವಿಮಾನ ನಿಲ್ದಾಣಕ್ಕೆ ಸರಬರಾಜು ಮಾಡುವ ವಿದ್ಯುತ್ ಉಪಕೇಂದ್ರದಲ್ಲಿ ಅಗ್ನಿ ಅನಾಹುತದಿಂದ ಗಮನಾರ್ಹವಾದ ವಿದ್ಯುತ್ ಕಡಿತ ಉಂಟಾಗಿದೆ. ಇದರಿಂದಾಗಿ ನಮ್ಮ ಪ್ರಯಾಣಿಕರು ಮತ್ತು ಸಹೋದ್ಯೋಗಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮಾರ್ಚ್ 21ರಂದು ರಾತ್ರಿ 11.59ರವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣದ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿʼ ಎಂದು ತಿಳಿಸಿದೆ.