ಭಾಗಶಃ ಗಾಝಾ ಸ್ವಾಧೀನಕ್ಕೆ ಇಸ್ರೇಲ್ ಸಿದ್ಧತೆ: ವರದಿ

PC : NDTV
ಟೆಲ್‍ಅವೀವ್: ಗಾಝಾ ಪಟ್ಟಿಯಲ್ಲಿ ಆಕ್ರಮಣ ಪುನರಾರಂಭಿಸಿರುವ ಇಸ್ರೇಲ್ ಸೇನೆಗೆ ಇನ್ನಷ್ಟು ಭೂಭಾಗವನ್ನು ವಶಕ್ಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನಿಯನ್ ಪ್ರದೇಶವನ್ನು ಇಸ್ರೇಲ್ ಭಾಗಶಃ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಆಗ್ರಹಿಸಿದ್ದಾರೆ.
ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ವಾಗ್ದಾನವನ್ನು ಹಮಾಸ್ ಈಡೇರಿಸದಿರುವುದು ಗಾಝಾದಲ್ಲಿ ಇಸ್ರೇಲ್ ನ ಕಾರ್ಯಾಚರಣೆ ಮತ್ತೆ ಆರಂಭಗೊಳ್ಳಲು ಕಾರಣ. ಹಮಾಸ್ ತಕ್ಷಣ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಗಾಝಾ ಪಟ್ಟಿಯ ಭಾಗಗಳನ್ನು ಇಸ್ರೇಲ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಗಾಝಾದ ಇನ್ನಷ್ಟು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸೇನೆಗೆ ಆದೇಶಿಸಿದ್ದೇನೆ. ಒತ್ತೆಯಾಳುಗಳ ಬಿಡುಗಡೆಯನ್ನು ಹಮಾಸ್ ಇನ್ನಷ್ಟು ವಿಳಂಬಗೊಳಿಸಿದರೆ ಅವರು ಗಾಝಾದ ಇನ್ನಷ್ಟು ಪ್ರದೇಶಗಳನ್ನು ಕಳೆದುಕೊಳ್ಳಲಿದ್ದಾರೆ. ಹಮಾಸ್ ನಿರಾಕರಿಸಿದರೆ, ಇಸ್ರೇಲ್ ನಾಗರಿಕರು ವಾಸಿಸುವ ಪ್ರದೇಶಗಳನ್ನು ರಕ್ಷಿಸಲು ಗಾಝಾದ ಬಫರ್ ವಲಯವನ್ನು ವಿಸ್ತರಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವರು ಘೋಷಿಸಿದ್ದಾರೆ.
ಹಮಾಸ್ ಅನ್ನು ಸೋಲಿಸಲು ನಾಗರಿಕ ಹಾಗೂ ಮಿಲಿಟರಿ ನೆಲೆಗಳ ಮೇಲೆ ಒತ್ತಡ ಹೆಚ್ಚಿಸಲಾಗುವುದು. ವಾಯು, ಸಮುದ್ರ ಮತ್ತು ಭೂ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತೇವೆ. ಈ ಕಾರ್ಯಾಚರಣೆಯು ಫೆಲೆಸ್ತೀನೀಯರನ್ನು ಇತರ ಅರಬ್ ದೇಶಗಳಿಗೆ ಸ್ಥಳಾಂತರಿಸಿ ಗಾಝಾವನ್ನು ಮರು ಅಭಿವೃದ್ಧಿಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಪೂರಕವಾಗಿರುತ್ತದೆ ಎಂದು ಇಸ್ರೇಲ್ ಕಾಟ್ಝ್ ಪ್ರತಿಪಾದಿಸಿದ್ದಾರೆ.
ಗಾಝಾ ಕದನ ವಿರಾಮ ಒಪ್ಪಂದದ ಪ್ರಥಮ ಹಂತ ಮುಕ್ತಾಯಗೊಂಡ ಬಳಿಕ ಎರಡನೇ ಹಂತದ ಕುರಿತ ಮಾತುಕತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗಾಝಾ ಮೇಲೆ ವೈಮಾನಿಕ ದಾಳಿಯನ್ನು ಪುನರಾರಂಭಿಸಿರುವುದಾಗಿ ಇಸ್ರೇಲ್ ಮಂಗಳವಾರ ಘೋಷಿಸಿತ್ತು. ಈ ಮಧ್ಯೆ, ದಕ್ಷಿಣ ಗಾಝಾ ಪಟ್ಟಿಯಲ್ಲಿ ಭೂ ಕಾರ್ಯಾಚರಣೆಯನ್ನು ಇಸ್ರೇಲ್ ವಿಸ್ತರಿಸಿದ್ದು ಈಜಿಪ್ಟ್ ಗಡಿಭಾಗದ ಬಳಿಯ ರಫಾ ನಗರದ ಶಬುರಾ ಪ್ರದೇಶದಲ್ಲಿ ಭೂ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಈ ಪ್ರದೇಶದಲ್ಲಿ ಬಂಡುಕೋರರ ಮೂಲ ನೆಲಗಳನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಘೋಷಿಸಿದೆ.
►ಐಡಿಎಫ್ ಬಾಂಬ್‍ದಾಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಮೃತ್ಯು
ಕಳೆದ ಮಂಗಳವಾರದಿಂದ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಬಾಂಬ್‍ದಾಳಿಯಲ್ಲಿ 504 ಮಂದಿ ಸಾವನ್ನಪ್ಪಿದ್ದು ಇದರಲ್ಲಿ ಸುಮಾರು 190 ಮಂದಿ ಅಪ್ರಾಪ್ತ ವಯಸ್ಸಿನವರು ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
3 ದಿನಗಳ ಹಿಂದೆ ಕದನ ವಿರಾಮ ಒಪ್ಪಂದ ಮುರಿದು ಇಸ್ರೇಲ್ ಪುನರಾರಂಭಿಸಿದ ದಾಳಿಯಲ್ಲಿ 200 ಮಕ್ಕಳ ಸಹಿತ ಕನಿಷ್ಠ 591 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 1,042 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ, ಒತ್ತೆಯಾಳುಗಳ ಬಿಡುಗಡೆ, ಗಾಝಾದಲ್ಲಿನ ಯುದ್ಧ ಕೊನೆಗೊಳಿಸಲು ಹಾಗೂ ಫೆಲೆಸ್ತೀನಿಯನ್ ಪ್ರದೇಶದಿಂದ ಇಸ್ರೇಲ್ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕದ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮುಂದಿರಿಸಿದ `ಪೂರಕ ಪ್ರಸ್ತಾಪ'ವನ್ನು ಪರಿಶೀಲಿಸುತ್ತಿರುವುದಾಗಿ ಹಮಾಸ್ ಹೇಳಿದೆ.