ಭಾರತೀಯ ಸಂಶೋಧಕ ಡಾ.ಬದರ್ ಖಾನ್ ಅವರನ್ನು ಗಡೀಪಾರು ಮಾಡದಂತೆ ತಡೆ ವಿಧಿಸಿದ ಅಮೆರಿಕದ ನ್ಯಾಯಾಲಯ

ಬದರ್ ಖಾನ್ (Photo: LinkedIn)
ವಾಶಿಂಗ್ಟನ್ : ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಸಂಶೋಧಕ ಬದರ್ ಖಾನ್ ಸೂರಿ ಅವರನ್ನು ಗಡೀಪಾರು ಮಾಡದಂತೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಸರಕಾರಕ್ಕೆ ಆದೇಶಿಸಿದ್ದಾರೆ.
ಹಮಾಸ್ ಪರ ಪ್ರಚಾರದ ಆರೋಪದಲ್ಲಿ ಬದರ್ ಖಾನ್ ಸೂರಿ ಅವರನ್ನು ಸೋಮವಾರ ರಾತ್ರಿ ವರ್ಜೀನಿಯಾದ ಅವರ ನಿವಾಸದ ಬಳಿ ಬಂಧಿಸಲಾಗಿತ್ತು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿರುವ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಪೆಟ್ರಿಸಿಯಾ ಗೈಲ್ಸ್ ಅವರ ಪೀಠವು, ಈ ಕುರಿತು ಆದೇಶವನ್ನು ಹಿಂಪಡೆದುಕೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ ಗಡೀಪಾರು ಮಾಡದಂತೆ ಸೂಚಿಸಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ, ಬದರ್ ಖಾನ್ ಸೂರಿಗೆ ಹಮಾಸ್ ಜೊತೆ ಸಂಬಂಧವಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಮಾಸ್ ಪರ ಪ್ರಚಾರಮಾಡುತ್ತಿದ್ದಾರೆ ಎಂದು ಆರೋಪಿಸಿತು. ಮಾರ್ಚ್ 15ರಂದು ಬದರ್ ಖಾನ್ ಸೂರಿ ಅವರನ್ನು ಗಡೀಪಾರು ಮಾಡುವುದು ನಿಶ್ಚಿತ ಎಂದು ರಾಜ್ಯ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದರು.
ಬದರ್ ಖಾನ್ ಸೂರಿ ವಿದ್ಯಾರ್ಥಿ ವೀಸಾದಲ್ಲಿ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಮೆರಿಕದ ಪ್ರಜೆಯನ್ನು ವಿವಾಹವಾಗಿದ್ದಾರೆ. ಲೂಸಿಯಾನಾದ ಅಲೆಕ್ಸಾಂಡ್ರಿಯಾದಲ್ಲಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.