ಭೀಕರ ಪ್ರವಾಹ: ಭಾರತ- ಬಾಂಗ್ಲಾ ವಾಕ್ಸಮರ
ಹೊಸದಿಲ್ಲಿ/ ಢಾಕಾ: ತ್ರಿಪುರಾದ ಗೋಮ್ತಿ ನದಿಗೆ ಅಡ್ಡಲಾಗಿ ಕಟ್ಟಿರುವ ದುಂಬೂರ್ ಅಣೆಕಟ್ಟಿನಿಂದ ದಿಢೀರನೇ ಹೆಚ್ಚಿನ ಪ್ರಮಾಣದ ನೀರು ಬಿಟ್ಟ ಕಾರಣದಿಂದ ಬಾಂಗ್ಲಾದೇಶದ ಪೂರ್ವಗಡಿಯಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ ಎಂಬ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಹೇಳಿಕೆಯನ್ನು ಭಾರತ ಬಲವಾಗಿ ಅಲ್ಲಗಳೆದಿದೆ. ಗಡಿಯ ಇಕ್ಕೆಲಗಳಲ್ಲಿ ಪ್ರವಾಹ ಸಮಸ್ಯೆ ಉಭಯ ದೇಶಗಳಿಗೆ ಇರವಂತಹದ್ದು. ಮಧ್ಯಂತರ ಸರ್ಕಾರದ ಅಧಿಕಾರಿಗಳು ಇಂತಹ ತಪ್ಪು ಹೇಳಿಕೆಗಳನ್ನು ನೀಡಬಾರದು ಎಂದು ಭಾರತ ತಾಕೀತು ಮಾಡಿದೆ.
ಬಾಂಗ್ಲಾದೇಶದಲ್ಲಿ ಪ್ರವಾಹ ಪರಿಸ್ಥಿತಿಗೆ ಭಾರತದ "ಅಸಹಕಾರ" ಕಾರಣ ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಸಲಹೆಗಾರ ಮೊಹ್ಮದ್ ನಹೀದ್ ಇಸ್ಲಾಂ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ಈ ಎಚ್ಚರಿಕೆ ನೀಡಿದೆ.
"ಯಾವುದೇ ಮುನ್ನೆಚ್ಚರಿಕೆ ನೀಡದೇ ಮತ್ತು ನಮಗೆ ಸಿದ್ಧತೆಗೆ ಸಮಯಾವಕಾಶ ನೀಡದೇ ಅಣೆಕಟ್ಟು ತೆರೆಯಲಾಗಿದೆ. ಈ ಮೂಲಕ ಭಾರತ ಅಮಾನವೀಯ ದೃಷ್ಟಿಕೋನವನ್ನು ಪ್ರದರ್ಶಿಸಿದ್ದು, ಬಾಂಗ್ಲಾದೇಶದ ಜತೆ ಅಸಹಕಾರವನ್ನು ತೋರುತ್ತಿದೆ" ಎಂದು ಮುಖ್ಯ ಸಲಹೆಗರ ಮೊಹ್ಮದ್ ಯೂನುಸ್ ಜತೆಗಿನ ಸಭೆಯ ಬಳಿಕ ನಹೀದ್ ಈ ಹೇಳಿಕೆ ನೀಡಿದ್ದರು.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷದ ನಡುವೆಯೇ ಢಾಕಾದಲ್ಲಿ ಯೂನುಸ್, ಭಾರತೀಯ ರಾಯಭಾರಿ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ನೀಡಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ಭಾರತ ಇದನ್ನು ನಿರಾಕರಿಸಿದೆ.
ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ಪ್ರತಿಭಟನೆಯ ಸಂಯೋಜಕರಲ್ಲೊಬ್ಬರಾದ ಮತ್ತು ಹಾಲಿ ಮಾಹಿತಿ ಹಾಗೂ ಪ್ರಸಾರ ವ್ಯವಹಾರಗಳ ಮೇಲ್ವಿಚಾರಣೆ ಹೊಣೆ ಹೊತ್ತಿರುವ ನಹೀದ್ ಪ್ರತ್ಯೇಕ ಹೇಳಿಕೆ ನೀಡಿ, ಭಾರತ ಬಾಂಗ್ಲಾವಿರೋಧಿ ನೀತಿಯಿಂದ ಹೊರಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.