ಪಾಕಿಸ್ತಾನದಲ್ಲಿ 2 ಯೋಜನೆಗಳ ಕಾಮಗಾರಿ ಸ್ಥಗಿತಗೊಳಿಸಿದ ಚೀನಾ
ಇಸ್ಲಮಾಬಾದ್: ಈ ವಾರದಲ್ಲಿ ಖೈಬರ್ ಪಖ್ತೂಂಕ್ವಾದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಚೀನಾದ 5 ಇಂಜಿನಿಯರ್ ಗಳು ಸಾವನ್ನಪ್ಪಿದ ಪ್ರಕರಣದ ಬಳಿಕ ಪಾಕಿಸ್ತಾನದಲ್ಲಿ ನಡೆಸುತ್ತಿರುವ 2 ಪ್ರಮುಖ ಅಣೆಕಟ್ಟು ಕಾಮಗಾರಿಗಳನ್ನು ಚೀನಾ ಸ್ಥಗಿತಗೊಳಿಸಿರುವುದಾಗಿ ಪ್ರಾಂತೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 1,250 ಚೀನಾ ಪ್ರಜೆಗಳಿಗೆ ಭದ್ರತೆ ಒದಗಿಸುವ ಹೊಸ ಯೋಜನೆಯನ್ನು ಪಾಕಿಸ್ತಾನದ ಅಧಿಕಾರಿಗಳು ಒದಗಿಸಬೇಕೆಂದು ಚೀನಾದ ಸಂಸ್ಥೆಗಳು ಆಗ್ರಹಿಸಿವೆ. ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿರುವ ದಾಸ್ಸು ಜಲವಿದ್ಯುತ್ ಯೋಜನೆಯ ಕಾಮಗಾರಿಯನ್ನು ಮಾರ್ಚ್ 27ರಿಂದ ಚೀನಾ ಗೆಝೋಬ ಗ್ರೂಪ್ ಸಂಸ್ಥೆ ಮತ್ತು ಡಯಾಮರ್ ಭಾಷಾ ಅಣೆಕಟ್ಟು ಕಾಮಗಾರಿಯನ್ನು ಪವರ್ ಚೀನಾ ಸಂಸ್ಥೆ ಸ್ಥಗಿತಗೊಳಿಸಿದೆ.
ಸರಕಾರದಿಂದ ಹೊಸ ಭದ್ರತಾ ಯೋಜನೆಯನ್ನು ಅವರು ಆಗ್ರಹಿಸಿದ್ದಾರೆ. ದಾಸ್ಸು ಜಲವಿದ್ಯುತ್ ಯೋಜನೆಯಲ್ಲಿ ಚೀನಾದ ಸುಮಾರು 750 ಇಂಜಿನಿಯರ್‍ಗಳು ಮತ್ತು ಡಯಾಮರ್ ಭಾಷಾ ಅಣೆಕಟ್ಟು ಯೋಜನೆಯಲ್ಲಿ ಸುಮಾರು 500 ಇಂಜಿನಿಯರ್‍ಗಳು ಕೆಲಸ ಮಾಡುತ್ತಿದ್ದಾರೆ. ಇದೀಗ ತಾವು ವಾಸಿಸುತ್ತಿರುವ ಸ್ಥಾನವನ್ನು ಬಿಟ್ಟು ಹೊರಗೆ ತೆರಳದಂತೆ ಚೀನಾದ ಇಂಜಿನಿಯರ್‍ಗಳಿಗೆ ಸೂಚಿಸಲಾಗಿದೆ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ.