ಕ್ಯಾಲಿಫೋರ್ನಿಯಾ | 3.7 ಲಕ್ಷ ಎಕರೆಗೆ ವ್ಯಾಪಿಸಿದ ಕಾಡ್ಗಿಚ್ಚು
ನ್ಯೂಯಾರ್ಕ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ತೀವ್ರಗತಿಯಲ್ಲಿ ಹರಡಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಸುಮಾರು 4,900 ಅಧಿಕ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಿಸುತ್ತಿದ್ದು ಸುಮಾರು 3,70,000 ಎಕರೆ ಪ್ರದೇಶಕ್ಕೆ ಕಾಡ್ಗಿಚ್ಚು ವ್ಯಾಪಿಸಿದ್ದು ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿರುವುದಾಗಿ ವರದಿಯಾಗಿದೆ.
ಕ್ಯಾಲಿಫೋರ್ನಿಯಾದ ಉತ್ತರದಲ್ಲಿರುವ ಚಿಕೊ ನಗರದಲ್ಲಿ ಕಳೆದ ಬುಧವಾರದಿಂದಲೂ ಬೆಂಕಿ ಉರಿಯುತ್ತಿದ್ದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರ ಅಗ್ನಿದುರಂತವಾಗಿದೆ. 400 ಅಗ್ನಿಶಾಮಕ ಯಂತ್ರಗಳು, ಸುಮಾರು 4,900 ಅಗ್ನಿಶಾಮಕ ಸಿಬ್ಬಂದಿ, 33 ಹೆಲಿಕಾಪ್ಟರ್ ಗಳನ್ನು ಬಳಸಿ ಕಾಡ್ಗಿಚ್ಚನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿದಿದ್ದು ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ತೀವ್ರಗತಿಯಲ್ಲಿ ಹರಡುತ್ತಿದೆ ಎಂದು ಅಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
42 ವರ್ಷದ ವ್ಯಕ್ತಿಯೊಬ್ಬ ಬೆಂಕಿಯಲ್ಲಿ ಉರಿಯುತ್ತಿದ್ದ ಕಾರನ್ನು ಹಳ್ಳಕ್ಕೆ ತಳ್ಳಿದಾಗ ಹಳ್ಳದ ಬದಿಯಲ್ಲಿದ್ದ ಒಣಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಕ್ರಮೇಣ ಸಮೀಪದ ಅರಣ್ಯಪ್ರದೇಶಕ್ಕೆ ವ್ಯಾಪಿಸಿ ಕಾಡ್ಗಿಚ್ಚಿನ ರೂಪ ಪಡೆದಿದೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.