12 ಮೊಟ್ಟೆಗೆ 400 ರೂಪಾಯಿ: ಪಾಕಿಸ್ತಾನದಲ್ಲಿ ಮತ್ತೆ ಆರ್ಥಿಕ ಬಿಕ್ಕಟ್ಟು

Update: 2024-01-15 03:11 GMT

ಸಾಂದರ್ಭಿಕ ಚಿತ್ರ

ಲಾಹೋರ್: ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದ್ದು, ಪಂಜಾಬ್ನ ಪ್ರಾಂತ ರಾಜಧಾನಿ ಲಾಹೋರ್ನಲ್ಲಿ 12 ಮೊಟ್ಟೆ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ತಲುಪಿದೆ.

ಸರ್ಕಾರಿ ಬೆಲೆಪಟ್ಟಿಯನ್ನು ಜಾರಿಗೊಳಿಸಲು ಸ್ಥಳೀಯ ಆಡಳಿತ ವಿಫಲವಾದ ಬೆನ್ನಲ್ಲೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಈರುಳ್ಳಿ ದರ ಪ್ರತಿ ಕೆಜಿಗೆ 230 ರಿಂದ 250 ಆಗಿದ್ದು, ಸರ್ಕಾರ ನಿಗದಿಪಡಿಸಿದ ದರ ಪ್ರತಿ ಕೆ.ಜಿ.ಗೆ 175 ರೂಪಾಯಿ. ಲಾಹೋರ್ನಲ್ಲಿ ಮೊಟ್ಟೆ ದರ ಡಜನ್ಗೆ 400 ರೂಪಾಯಿ ಆಗಿದ್ದರೆ ಚಿಕನ್ ದರ ಕೆ.ಜಿ.ಗೆ 615 ರೂಪಾಯಿಯನ್ನು ತಲುಪಿದೆ.

ಮುಕ್ತ ಮಾರುಕಟ್ಟೆಯಲ್ಲಿ ಬೆಲೆಸ್ಥಿರತೆಯನ್ನು ಸಾಧಿಸುವ ದೃಷ್ಟಿಯಿಂದ ಹಾಗೂ ಅಕ್ರಮವಾಗಿ ಆಹಾರವಸ್ತುಗಳ ದಾಸ್ತಾನು ಹಾಗೂ ಲಾಭಕೋರ ನೀತಿಯನ್ನು ತಡೆಯುವ ದೃಷ್ಟಿಯಿಂದ ಸ್ಥಳೀಯ ಸರ್ಕಾರಗಳ ಜತೆ ಸಮನ್ವಯದಿಂದ ಬೆಲೆ ನಿಯಂತ್ರಣ ಮಡುವಂತೆ ನ್ಯಾಷನಲ್ ಪ್ರೈಸ್ ಮಾನಿಟರಿಂಗ್ ಕಮಿಟಿಗೆ ಆರ್ಥಿಕ ಸಮನ್ವಯ ಸಮಿತಿ ಕಳೆದ ತಿಂಗಳು ಸೂಚನೆ ನೀಡಿತ್ತು. ಸಂಪುಟ ಸಮಿತಿಯ ನೇತೃತ್ವವನ್ನು ಹಣಕಾಸು, ಕಂದಾಯ ಮತ್ತು ಆರ್ಥಿಕ ವ್ಯವಹಾರಗಳ ಖಾತೆ ಉಸ್ತುವಾರಿ ಸಚಿವ ಶಂಶದ್ ಅಖ್ತರ್ ವಹಿಸಿದ್ದರು.

ಏತನ್ಮಧ್ಯೆ ಕಳೆದ ನವೆಂಬರ್ ವೇಳೆಗೆ ಪಾಕಿಸ್ತಾನದ ಮೇಲಿನ ಸಾಲದ ಹೊರೆ 63,339 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿದೆ ಎಂಧು ಎಆರ್ವೈ ನ್ಯೂಸ್ ವರದಿ ಮಾಡಿದೆ.

ಪಿಡಿಎಂ ಹಾಗೂ ಉಸ್ತುವಾರಿ ಸರ್ಕಾರದ ಅಧಿಕಾರಾವಧಿಯಲ್ಲಿ ಒಟ್ಟು ಸಾಲದ ಹೊರೆ 12.430 ಪಿಕೆಆರ್ನಷ್ಟು ಹೆಚ್ಚಿದೆ. ಒಟ್ಟಾರೆ ಸಾಲದ ಹೊರೆ 63.390 ಟ್ರಿಲಿಯನ್ಗೆ ಹೆಚ್ಚಿದ್ದು, ಇದರಲ್ಲಿ 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು 22.434 ಟ್ರಿಯಲಿನ್ ಪಾಕಿಸ್ತಾನಿ ರೂಪಾಯಿ ಅಂತರರಾಷ್ಟ್ರೀಯ ಸಾಲ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News