ಪಾಕಿಸ್ತಾನ: ವಾಹನಗಳಿಂದ ಕೆಳಗಿಳಿಸಿ ಗುರುತಿನ ಚೀಟಿ ಪರಿಶೀಲಿಸಿದ ಬಳಿಕ 23 ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

Update: 2024-08-26 07:20 GMT

Photo credit: indiatoday.in

ಬಲೂಚಿಸ್ತಾನ: ವಾಹನಗಳು, ಟ್ರಕ್ ಗಳು ಹಾಗೂ ಬಸ್ ಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿರುವ ಸಶಸ್ತ್ರಧಾರಿ ಹಂತಕರು, 23 ಮಂದಿಯ ಗುರುತನ್ನು ಕೇಳಿದ ನಂತರ ಹತ್ಯೆಗೈದಿರುವ ಭೀಕರ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ AP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಭೀಕರ ಘಟನೆಯು ಬಲೂಚಿಸ್ತಾನ ಪ್ರಾಂತ್ಯದ ಕುಸಖೈಲ್ ಜಿಲ್ಲೆಯಲ್ಲಿ ರಾತ್ರಿ ನಡೆದಿದೆ.

ಘಟನಾ ಸ್ಥಳದಿಂದ ಪರಾರಿಯಾಗುವುದಕ್ಕೂ ಮುನ್ನ, ಕನಿಷ್ಠ 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಈ ದಾಳಿಯನ್ನು ಪಾಕಿಸ್ತಾನದ ಆಂತರಿಕ ಭದ್ರತಾ ಸಚಿವ ಮೊಹ್ಸಿನ್ ನಖ್ವಿ ಬಲವಾಗಿ ಖಂಡಿಸಿದ್ದು, ಅಮಾನುಷ ದಾಳಿ ಎಂದು ಬಣ್ಣಿಸಿದ್ದಾರೆ. ಘಟನೆಗೆ ಕಾರಣರಾದವರನ್ನು ಕಾನೂನಿನ ಸಂಪೂರ್ಣ ಬಲ ಪ್ರಯೋಗಿಸಿ ಶಿಕ್ಷಿಸಲಾಗುವುದು ಹಾಗೂ ಆರೋಪಿಗಳು ಯಾವುದೇ ಕಾರಣಕ್ಕೂ ಬಚಾವಾಗಲು ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಈ ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತುಕೊಂಡಿರದಿದ್ದರೂ, ಪ್ರತ್ಯೇಕತಾವಾದಿ ಸಂಘಟನೆಯಾದ ಬಲೂಚ್ ವಿಮೋಚನಾ ಸೇನೆಯು ಹೆದ್ದಾರಿಗಳಿಂದ ದೂರ ಉಳಿಯುವಂತೆ ಜನರಿಗೆ ಎಚ್ಚರಿಕೆ ನೀಡಿದೆ. ಈ ಸಂಘಟನೆಯು ಬಲೂಚಿಸ್ತಾನ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News