ಕೆನಡಾ| ಡಿವೈಡರ್ ಗೆ ಢಿಕ್ಕಿ ಹೊಡೆದ ಟೆಸ್ಲಾ ಕಾರು; ನಾಲ್ವರು ಭಾರತೀಯರು ಮೃತ್ಯು
Update: 2024-10-25 10:33 GMT
ಕೆನಡಾ: ಟೊರೊಂಟೊ ಬಳಿ ಟೆಸ್ಲಾ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ಪರಿಣಾಮ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಇಬ್ಬರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್(30) ಮತ್ತು ನಿಲ್ ಗೋಹಿಲ್(26) ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನಿಬ್ಬರು ಭಾರತೀಯರು ಪ್ರಯಾಣಿಸುತ್ತಿದ್ದರು. ನಾಲ್ವರು ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಟೆಸ್ಲಾ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಇಡೀ ಕಾರಿಗೆ ಆವರಿಸಿ ಸುಟ್ಟು ಕರಕಲಾಗಿದೆ. 20ರ ಹರೆಯದ ಮಹಿಳೆಯೊಬ್ಬರು ಸುಟ್ಟು ಕರಕಲಾಗುತ್ತಿದ್ದ ಕಾರಿನಿಂದ ಕೆಳಗಿಳಿದು ವಾಹನ ಸವಾರರಲ್ಲಿ ಸಹಾಯ ಯಾಚಿಸಿದ್ದಾರೆ. ಸುಟ್ಟ ಗಾಯಗಳೊಂದಿಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆನಡಾದಲ್ಲಿ ಕಳೆದ ಜುಲೈನಲ್ಲಿ ಕೂಡ ಪಂಜಾಬ್ ಮೂಲದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.