ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಭೂಕಂಪನ: ಸುನಾಮಿ ಎಚ್ಚರಿಕೆ
ಕ್ಯಾಲಿಫೋರ್ನಿಯಾ: ಗುರುವಾರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರಗಳು ಸುನಾಮಿ ಮುನ್ನೆಚ್ಚರಿಕೆ ನೀಡಿವೆ.
ಓರೇಗಾಂವ್ ಗಡಿಯ ಬಳಿಯಿರುವ ಸಣ್ಣ ಕರಾವಳಿ ನಗರವಾದ ಹಂಬೋಲ್ಟ್ ಕೌಂಟಿಯ ಪಶ್ಚಿಮ ಫರ್ನ್ ಡೇಲ್ ನಲ್ಲಿ ಗುರುವಾರ ಬೆಳಗ್ಗೆ 10.44ರ ವೇಳೆ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೌಗೋಳಿಕ ಸಮೀಕ್ಷೆ ಸಂಸ್ಥೆ ಹೇಳಿದೆ.
ಈ ಭೂಕಂಪನದ ತೀವ್ರತೆ ದಕ್ಷಿಣ ತುದಿಯಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೊವರೆಗೆ ಕಂಡು ಬಂದಿದ್ದು, ಇಲ್ಲಿನ ನಿವಾಸಿಗಳು ಕೆಲ ಕ್ಷಣಗಳ ಕಾಲ ತಲೆ ಸುತ್ತು ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಿಗೆ, ಲಘು ಕಂಪನಗಳೂ ಸಂಭವಿಸಿವೆ.
ಸ್ಯಾನ್ ಫ್ರಾನ್ಸಿಸ್ಕೊ ಹಾಗೂ ಆಕ್ಲೆಂಡ್ ಅನ್ನು ಸಂಪರ್ಕಿಸುವ ಜಲಾಂತರ್ಗಾಮಿ ಸುರಂಗ ಮಾರ್ಗದ ಸೇವೆಗಳನ್ನು ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯ ರ್ಯಾಪಿಡ್ ಟ್ರಾನ್ಸಿಟ್ ಡಿಸ್ಟ್ರಿಕ್ಟ್ ಎಲ್ಲ ದಿಕ್ಕಿನಿಂದಲೂ ಅಮಾನತುಗೊಳಿಸಿದೆ.
ಕ್ಯಾಲಿಫೋರ್ನಿಯಾದ ಕನಿಷ್ಠ ಪಕ್ಷ 5.3 ದಶಲಕ್ಷ ಜನರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕ ಭೌಗೋಳಿಕ ಸಮೀಕ್ಷೆ ಸಂಸ್ಥೆ ಬಿಡುಗಡೆ ಮಾಡಿರುವ ಯೆಲ್ಲೊ ಅಲರ್ಟ್ ನಲ್ಲಿ ಹೇಳಲಾಗಿದೆ. ಈ ವೇಳೆ, ಸ್ಥಳೀಯವಾಗಿ ಅಲ್ಪ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಭೂಕಂಪನ ಬಿಂದುವಿನ ಬಳಿ ವಾಸಿಸುತ್ತಿರುವ ಸುಮಾರು 1.3 ದಶಲಕ್ಷ ಜನರಿಗೆ ಭೂಕಂಪನದ ಅನುಭವವಾಗಿದೆ ಎಂದು ಅಮೆರಿಕ ಭೌಗೋಳಿಕ ಸಮೀಕ್ಷೆ ಸಂಸ್ಥೆ ಅಂದಾಜಿಸಿದೆ.