ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ: ಮೃತರ ಸಂಖ್ಯೆ 91 ಕ್ಕೇರಿಕೆ

Update: 2024-08-05 02:38 GMT

Photo: PTI

ಹೊಸದಿಲ್ಲಿ: ಹಿಂಸಾಪೀಡಿತ ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರು ನಿಕಟ ಸಂಪರ್ಕದಲ್ಲಿರುವಂತೆ ಭಾರತ ಸೂಚನೆ ನೀಡಿದೆ. ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭುಗಿಲಿದ್ದಿರುವ ಹಿಂಸಾಚಾರ 91 ಮಂದಿಯನ್ನು ಬಲಿ ಪಡೆದಿದೆ. ಭಾನುವಾರ ಕೂಡಾ ಸಂಘರ್ಷದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

"ವಿದ್ಯಾರ್ಥಿಗಳು ಸೇರಿದಂತೆ ಭಾರತದ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲ ಭಾರತೀಯರು, ಕಚೇರಿಯ ಜತೆ ನಿರಂತರ ಸಂಪರ್ಕದಲ್ಲಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ದಯವಿಟ್ಟು +88-01313076402"ಕ್ಕೆ ಸಂಪರ್ಕಿಸಬೇಕು ಎಂದು ಸಹಾಯಕ ಹೈಕಮಿಷನ್ ಎಕ್ಸ್ ಮೂಲಕ ಭಾರತೀಯರಿಗೆ ಸೂಚನೆ ನೀಡಿದೆ.

ಸರ್ಕಾರಿ ಉದ್ಯೋಗ ಕೋಟಾಗೆ ಸಂಬಂಧಿಸಿದ ಪ್ರತಿಭಟನೆ ಭಾನುವಾರ ಪುನರಾರಂಭವಾಗಿದ್ದು, ಪ್ರತಿಭಟನಾಕಾರರು ಪ್ರಧಾನಿ ಶೇಕ್ ಹಸೀನಾ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

ಮೃತಪಟ್ಟವರಲ್ಲಿ 14 ಮಂದಿ ಪೊಲೀಸರು ಸೇರಿದ್ದಾರೆ.

ಕೆಲ ದಿನಗಳ ಹಿಂದೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದ ವೇಳೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಬಾಂಗ್ಲಾದೇಶದ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹಿರಿಯರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ 30ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ನಿರ್ಧಾರವನ್ನು ತಕ್ಷಣ ವಾಪಾಸು ಪಡೆಯಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹ.

ಪ್ರತಿಭಟನೆ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಹೆಸರಿನಲ್ಲಿ ದೇಶದ್ರೋಹ ಎಸಗುತ್ತಿರುವವರು ವಿದ್ಯಾರ್ಥಿಗಳಲ್ಲ; ಉಗ್ರಗಾಮಿಗಳು. ಜನತೆ ಅಂಥ ಪ್ರಯತ್ನಗಳನ್ನು ಹತ್ತಿಕ್ಕಬೇಕು ಎಂದು ಪ್ರಧಾನಿ ಶೇಕ್ ಹಸೀನಾ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News